ಮೈಸೂರು ದಸರಾದಲ್ಲಿ ಕಂಬಳ: ಮುಖ್ಯಮಂತ್ರಿಗಳಿಗೆ ಸನ್ಮಾನ
Kambala At Mysuru Dasara: ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ತೀರ್ಮಾನಿಸಲಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಜಿಲ್ಲಾ ಕಂಬಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಪುತ್ತೂರು: ಮೈಸುರಿನಲ್ಲಿ ಕಂಬಳ ಆಗುತ್ತದೋ ಇಲ್ಲವೋ ಎಂಬ ಅನುಮಾನ ಹಲವರಿಗಿತ್ತು. ಆದರೀಗ, ಎಲ್ಲದಕ್ಕೂ ತೆರೆ ಬಿದ್ದಿದೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಹೈಪವರ್ ಕಮಿಟಿ ಸಭೆಯಲ್ಲಿ ದಸರಾ ಕಂಬಳ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ.
ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆದ ನಂತರ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾಗೆ ಕಂಬಳ ಆಯೋಜನೆ ಮಾಡಲಾಗುತ್ತಿದೆ. ವಿಶ್ವವಿಖ್ಯಾತ ದಸರಾದಲ್ಲಿ ಈ ಬಾರಿ ಮಂಗಳೂರಿನ ಕಂಬಳ ಕೋಣಗಳು ಓಟ ನಡೆಯುವುದು ನಿಶ್ಚಿತವಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ದತೆಗಳನ್ನು ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸಿಎಂ ಡಿಕೆಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದಸರಾಗೆ ಕಂಬಳ ಏರ್ಪಡಿಸುವಂತೆ ಖುದ್ದು ಮುಖ್ಯಮಂತ್ರಿಗಳೇ ಶಾಸಕ ಅಶೋಕ್ ರೈ ಅವರಿಗೆ ಕೆಲದಿನಗಳ ಹಿಂದೆ ನಿರ್ದೇಶನ ನೀಡಿದ್ದರು. ಆ ಬಳಿಕ ಕಂಬಳ ನಡೆಸುವ ಜಾಗವನ್ನು ಶಾಸಕರು ವೀಕ್ಷಣೆ ಮಾಡಿದ್ದರು. ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಯು ನಡೆದಿತ್ತು.
ಮೂರು ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿ:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆಗೆ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ಕಂಬಳಕ್ಕೆ ವಿರೋಧ ಮಾಡಿದ್ದ ಮೈಸೂರು ಸಂಸದ ಯದುವೀರ್ ಅವರು ಕೂಡ ಬೆಂಬಲ ಸೂಚಿಸಿದರು.
ಮುಖ್ಯಮಂತ್ರಿಗೆ ಸನ್ಮಾನ:
ವಿಶ್ವಪ್ರಸಿದ್ದ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಗೆ ಅವಕಾಶ ಕಲ್ಪಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಜಿಲ್ಲಾ ಕಂಬಳ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು. ಕಂಬಳ ಸಮಿತಿ ಪರವಾಗಿ ಪುತ್ತೂರು ಶಾಸಕ ಅಶೋಕ್ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮುಖ್ಯಮಂತ್ರಿಗಳನ್ನು ಗೌರವಿಸಿದರು. ಈ ವೇಳೆ ಕಂಬಳ ಸಮಿತಿಯ ಪ್ರಮುಖರು ಭಾಗವಹಿಸಿದ್ದರು.
ಶಾಸಕ ಅಶೋಕ್ ರೈ ಪ್ರತಿಕ್ರಿಯೆ:
ಮೈಸೂರು ದಸರಾದಲ್ಲಿ ಕಂಬಳ ನಡೆಸಲು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಂಬಳಕ್ಕೆ ಸಿದ್ದತೆಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ. ತುಳುನಾಡಿನ ಜನಪದ ಕಲೆಯೊಂದು ಮೈಸೂರು ದಸರಾದಲ್ಲಿ ಅನಾವರಣಗೊಳ್ಳುತ್ತಿದೆ. ಈ ಮೂಲಕ ಕಂಬಳಕ್ಕೆ ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಪ್ರಚಾರ ಲಭಿಸಿದಂತಾಗುತ್ತದೆ ಎಂದು ಹೇಳಿದರು.


