ಟಿಕೆಟ್ ದರದಲ್ಲಿ ಏಕರೂಪತೆ ತರಲು ಮುಂದಾದ ಆಂಧ್ರ ಸರ್ಕಾರ
ಕರ್ನಾಟಕ ಸರ್ಕಾರ ಏಕರೂಪ ಟಿಕೆಟ್ ದರ ತರುವ ಪ್ರಯತ್ನ ಮಾಡಿತ್ತು ಆದರೆ ಕೆಲವು ನಿರ್ಮಾಣ ಸಂಸ್ಥೆಗಳು ಅಡ್ಡಗಾಲು ಹಾಕಿದ್ದರಿಂದ ಆದೇಶಕ್ಕೆ ತಡೆ ಬಿದ್ದಿದೆ. ಇದೀಗ ನೆರೆಯ ಆಂಧ್ರ ಪ್ರದೇಶದಲ್ಲಿ ಇದೇ ರೀತಿಯ ವ್ಯವಸ್ಥೆ ತರಲು ಅಲ್ಲಿನ ಸರ್ಕಾರ ಸಜ್ಜಾಗಿದೆ. ಈಗಾಗಲೇ ಸಂಬಂಧಪಟ್ಟವರೊಡನೆ ಸಭೆ ಸಹ ನಡೆದಿದೆ.
ಸಿನಿಮಾ ಟಿಕೆಟ್ ದರಗಳ ಬಗ್ಗೆ ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ಚರ್ಚೆ ಜೋರಿದೆ. ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರವನ್ನು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು, ಆದರೆ ನ್ಯಾಯಾಲಯ ಅದಕ್ಕೆ ತಡೆ ನೀಡಿದೆ. ಇದೀಗ ನೆರೆಯ ಆಂಧ್ರ ಪ್ರದೇಶದಲ್ಲಿ ಇದೇ ಕೂಗು ಕೇಳಿ ಬರುತ್ತಿದೆ. ಹೊಸ ಸಿನಿಮಾಗಳು ಬಿಡುಗಡೆ ಆದಾಗಲೆಲ್ಲ ಸಿನಿಮಾ ಟಿಕೆಟ್ ದರಗಳನ್ನು ಏರಿಸಲಾಗುತ್ತಿತ್ತು, ಇದರಿಂದ ಜನ ಬೇಸತ್ತು ಹೋಗಿದ್ದರು. ಇದಕ್ಕೆಲ್ಲ ಅಂತ್ಯ ಹಾಡಲು ಆಂಧ್ರ ಸರ್ಕಾರ ಮುಂದಾಗಿದೆ.
ಆಂಧ್ರ ಮತ್ತು ತೆಲಂಗಾಣಗಳಲ್ಲಿ ಟಿಕೆಟ್ ದರಗಳು ತುಸು ಕಡಿಮೆಯೇ ಇವೆ. ಆದರೆ ಪ್ರತಿ ಬಾರಿ ದೊಡ್ಡ ಬಜೆಟ್ನ ಸಿನಿಮಾಗಳು ಬಿಡುಗಡೆ ಆಗುವ ಸಮಯದಲ್ಲೆಲ್ಲ ಟಿಕೆಟ್ ದರಗಳನ್ನು ಐದು ದಿನ, ಒಂದು ವಾರ ಹೀಗೆ ಹೆಚ್ಚಿಸಲಾಗುತ್ತದೆ. ಇದಕ್ಕೆ ಸಿನಿಮಾ ತಂಡಗಳು ಸರ್ಕಾರದ ಬಳಿ ಅರ್ಜಿ ಹಾಕಿ ಅನುಮತಿಯನ್ನು ಪಡೆದುಕೊಳ್ಳುತ್ತವೆ. ಆದರೆ ಪ್ರತಿ ಬಾರಿ ಹೀಗೆ ಟಿಕೆಟ್ ದರ ಏರಿಕೆ ಮಾಡಿದಾಗಲೂ ಸಿನಿಮಾ ಪ್ರೇಮಿಗಳು ಟೀಕೆ ಮಾಡುತ್ತಿದ್ದರು. ಇದೇ ಕಾರಣಕ್ಕೆ ಇದಕ್ಕೆ ಅಂತ್ಯ ಹಾಡಲು ಆಂಧ್ರ ಸರ್ಕಾರ ನಿರ್ಧರಿಸಿದೆ.
ಆಂಧ್ರ ಪ್ರದೇಶದ ಸಿನಿಮಾಟೊಗ್ರಫಿ ಸಚಿವ ಕಂಡುಲ ದುರ್ಗೇಶ್ ಈ ಬಗ್ಗೆ ಮಾತನಾಡಿದ್ದು, ‘ಏಕರೂಪ ಟಿಕೆಟ್ ದರವನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿವೆ. ಟಿಕೆಟ್ ದರಗಳು ಸಿನಿಮಾ ರಂಗ ಹಾಗೂ ಪ್ರೇಕ್ಷಕರ ಇಬ್ಬರಿಗೂ ಅನುಕೂಲಕರವಾಗಿ ಇರುವಂತೆ ನೋಡಿಕೊಳ್ಳಲಾಗುತ್ತದೆ’ ಎಂದಿದ್ದಾರೆ. ಸಿನಿಮಾಟೊಗ್ರಫಿ ಸಚಿವರು ಈಗಾಗಲೇ ಕೆಲವು ಪ್ರಮುಖ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ತೆಲುಗು ಚಿತ್ರರಂಗದ ಕೆಲ ಪ್ರಮುಖರು ಸಹ ಭಾಗವಹಿಸಿದ್ದರು.
ಪದೇ ಪದೇ ಟಿಕೆಟ್ ದರ ಹೆಚ್ಚಳದ ಬಗ್ಗೆ ಸಿನಿಮಾ ಪ್ರೇಮಿಗಳು ಮಾತ್ರವಲ್ಲ ಕೆಲ ಸಿನಿಮಾ ಮಂದಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಟಿಕೆಟ್ ದರ ಹೆಚ್ಚಳದಿಂದ ಸಣ್ಣ ಸಿನಿಮಾಗಳಿಗೆ ಭಾರಿ ಹಾನಿ ಆಗುತ್ತಿದೆ. ಜನ ಹಣವನ್ನು ದೊಡ್ಡ ಸಿನಿಮಾಗಳಿಗೆ ಖರ್ಚು ಮಾಡಿ, ಸಣ್ಣ ಸಿನಿಮಾಗಳು ಬಂದಾಗ ನಿರ್ಲಕ್ಷ್ಯ ತೋರುತ್ತಿದ್ದಾರೆ ಅಲ್ಲದೆ, ಈ ರೀತಿ ಕೆಲವು ಸಿನಿಮಾಗಳಿಗೆ ಮಾತ್ರವೇ ಟಿಕೆಟ್ ದರ ಹೆಚ್ಚಿಸುವುದು, ಬೇರೆ ಸಿನಿಮಾ ತಂಡಗಳಿಗೆ ಮಾಡುವ ಅನ್ಯಾಯದಂತೆ ತೋರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಇದೀಗ ಸರ್ಕಾರ, ಇದಕ್ಕೊಂದು ಅಂತ್ಯ ಹಾಡಲು ಮುಂದಾಗಿದೆ.


