ಮಧ್ಯಪಾನ ಸ್ಥಳ–ಐಡಿ ಇಲ್ಲದಿದ್ದರೆ ಪ್ರವೇಶವಿಲ್ಲ–ಸಚಿವ ಪ್ರಿಯಾಂಕ್ ಖರ್ಗೆ
ಮದ್ಯಪಾನ ಮಾಡುವ ಸ್ಥಳಗಳು, ಬ್ರೂವರೀಸ್, ಬಾರ್‌ಗಳು, ಕ್ಲಬ್‌ಗಳು ಮತ್ತು ಮದ್ಯ ಸರಬರಾಜು ಮಾಡುವ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ವಯಸ್ಸಿನ ಪರಿಶೀಲನೆ ನಡೆಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
ಬೆಂಗಳೂರು, ಜೂನ್ 8: ಅಪ್ರಾಪ್ತ ವಯಸ್ಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ತಡೆಯಲು ಮತ್ತು ಮದ್ಯ ಸರಬರಾಜು ಮಾಡುವುದನ್ನು ನಿಷೇಧಿಸಲು ಬೆಂಗಳೂರಿನ ಎಲ್ಲಾ ಪಬ್‌ಗಳು, ಬ್ರೂವರೀಸ್, ಬಾರ್‌ಗಳು, ಕ್ಲಬ್‌ಗಳು, ಲಾಂಜ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಮದ್ಯ ಸರಬರಾಜು ಮಾಡುವ ಇತರ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹದಿಹರೆಯದವರು ಮತ್ತು ಯುವ ಜನರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಬಳಕೆಯ ಬಗೆಗಿನ ಆತಂಕದ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನ ನಾಲ್ಕು ಪ್ರಮುಖ ಶಿಕ್ಷಣ ಸಂಸ್ಥೆಗಳ ಪದವಿಪೂರ್ವ, ಪದವಿ ಮತ್ತು ಉನ್ನತ ಪ್ರೌಢ ತರಗತಿಗಳ 4,093 ವಿದ್ಯಾರ್ಥಿಗಳ ನಡುವೆ ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ, ನಗರದ ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಬಳಕೆಯಿಂದಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಅಪಾಯದಲ್ಲಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಅಧ್ಯಯನವನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಂಶೋಧಕರು ನಡೆಸಿದ್ದಾರೆ.
ಈ ಅಧ್ಯಯನದ ಪ್ರಕಾರ, ಸಮೀಕ್ಷೆಗೆ ಒಳಪಟ್ಟ ಯುವಕರಲ್ಲಿ ಶೇ. 33 ರಷ್ಟು ಮಂದಿ ಮದ್ಯವನ್ನು ಬಳಸುತ್ತಿದ್ದರೆ, ಸುಮಾರು ಶೇ 18 ರಷ್ಟು ಮಂದಿ ತಂಬಾಕು ಚಟಕ್ಕೆ ದಾಸರಾಗಿದ್ದಾರೆ. ಇದು ತಂಬಾಕು ಬಳಕೆಯ ರಾಷ್ಟ್ರೀಯ ಸರಾಸರಿ (ಶೇ 8.7) ಮತ್ತು ಮದ್ಯಪಾನದ ರಾಷ್ಟ್ರೀಯ ಸರಾಸರಿಗಿಂತ (ಶೇ 7.9) ಗಣನೀಯವಾಗಿ ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಇದು ಕರ್ನಾಟಕದ ಒಟ್ಟಾರೆ ಸರಾಸರಿಯಾದ ಶೇ. 4.7 (ತಂಬಾಕು) ಮತ್ತು ಶೇ. 8.5 ಕ್ಕಿಂತಲೂ (ಮದ್ಯಪಾನ) ತೀರಾ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹದಿಹರೆಯದವರು ಮದ್ಯಪಾನ ಮಾಡಲು ಪ್ರಾರಂಭಿಸುವ ಸರಾಸರಿ ವಯಸ್ಸು 17 ವರ್ಷವಾಗಿದ್ದು, ಕೆಲವರು ಕೇವಲ 8 ವರ್ಷ ವಯಸ್ಸಿನಲ್ಲೇ ಮದ್ಯಪಾನದ ಹವ್ಯಾಸ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಗಂಭೀರ ಸಂಶೋಧನಾ ವರದಿಯ ಹಿನ್ನೆಲೆಯಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಅಪ್ರಾಪ್ತ ವಯಸ್ಕರ ಮದ್ಯಪಾನವನ್ನು ಕೇವಲ ಪರವಾನಗಿ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸದೆ, ಇದನ್ನು ಯುವಕರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ಗಂಭೀರ ಕಾಳಜಿ ಎಂದು ಪರಿಗಣಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಮದ್ಯ ಸರಬರಾಜು ಮಾಡುವ ಎಲ್ಲಾ ಸಂಸ್ಥೆಗಳು ಪ್ರವೇಶ ದ್ವಾರದಲ್ಲಿ ಮತ್ತು ಮದ್ಯವನ್ನು ನೀಡುವ ಮೊದಲು ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನಾ ನಿಯಮಗಳನ್ನು ಜಾರಿಗೆ ತರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆದೇಶಿಸಿದ್ದಾರೆ.
ಅಪ್ರಾಪ್ತ ವಯಸ್ಕರ ಮದ್ಯಪಾನಕ್ಕೆ ಪ್ರೋತ್ಸಾಹ ನೀಡುವ ಅಥವಾ ಅದಕ್ಕೆ ಕಾರಣವಾಗುವ ಸಂಸ್ಥೆಗಳ ವಿರುದ್ಧ ಕರ್ನಾಟಕ ಸರ್ಕಾರವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು 'ಶೂನ್ಯ ಸಹಿಷ್ಣುತೆ' (Zero-tolerance) ನೀತಿಯನ್ನು ಅಳವಡಿಸಿಕೊಳ್ಳಲಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
"ಮಕ್ಕಳು ಮತ್ತು ಯುವ ಜನರನ್ನು ಮದ್ಯ ಹಾಗೂ ಮಾದಕ ದ್ರವ್ಯಗಳ ದುರಭ್ಯಾಸದಿಂದ ರಕ್ಷಿಸಬೇಕಾಗಿದೆ. ವಾಣಿಜ್ಯ ಸಂಸ್ಥೆಗಳು ನಮ್ಮ ಯುವ ಪೀಳಿಗೆಯ ಸುರಕ್ಷತೆ ಮತ್ತು ಭವಿಷ್ಯವನ್ನು ಬದಿಗಿಟ್ಟು ಕೇವಲ ಲಾಭ ಗಳಿಕೆಗೆ ಆದ್ಯತೆ ನೀಡಲು ಸಾಧ್ಯವಿಲ್ಲ. ನಮ್ಮ ನಿಯಮ ಸರಳವಾಗಿದೆ: 'ಐಡಿ ಇಲ್ಲದಿದ್ದರೆ, ಪ್ರವೇಶವಿಲ್ಲ'. ಅಪ್ರಾಪ್ತರ ಮದ್ಯಪಾನಕ್ಕೆ ಕುಮ್ಮಕ್ಕು ನೀಡುವ ಯಾವುದೇ ಸಂಸ್ಥೆಯು ತೀವ್ರ ಸ್ವರೂಪದ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ," ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು, ನಾಗರಿಕರು ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಗೃಹ ಸಚಿವರು ಮನವಿ ಮಾಡಿದ್ದಾರೆ.
ಜಾರಿಗೊಳಿಸಲಾದ ಪ್ರಮುಖ ನಿರ್ದೇಶನಗಳು:
* ಐಡಿ ಇಲ್ಲದಿದ್ದರೆ, ಪ್ರವೇಶವಿಲ್ಲ (No ID, No Entry): ಯಾವುದೇ ವ್ಯಕ್ತಿಗೆ ವಯಸ್ಸಿನ ಅಧಿಕೃತ ಪುರಾವೆ (ಐಡಿ ಕಾರ್ಡ್) ಇಲ್ಲದೆ ಪಬ್, ಬ್ರೂವರೀಸ್, ಬಾರ್, ಕ್ಲಬ್ ಅಥವಾ ಮದ್ಯ ಸರಬರಾಜು ಮಾಡುವ ಸಂಸ್ಥೆಗಳ ಒಳಗೆ ಪ್ರವೇಶ ನೀಡಬಾರದು.
* ಕಡ್ಡಾಯ ವಯಸ್ಸಿನ ಪರಿಶೀಲನೆ: ಸಂಸ್ಥೆಗಳು ಗ್ರಾಹಕರಿಗೆ ಪ್ರವೇಶ ನೀಡುವ ಮೊದಲು ಅಥವಾ ಮದ್ಯವನ್ನು ಸರಬರಾಜು ಮಾಡುವ ಮುನ್ನ ಸರ್ಕಾರ ನೀಡಿದ ಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪರಿಶೀಲಿಸಿ ವಯಸ್ಸನ್ನು ದೃಢೀಕರಿಸಿಕೊಳ್ಳಬೇಕು.
* ನಿಯಮ ಉಲ್ಲಂಘನೆಗೆ ಕಠಿಣ ಕ್ರಮ: ಅಪ್ರಾಪ್ತ ವಯಸ್ಕರಿಗೆ ಮದ್ಯ ಸರಬರಾಜು ಮಾಡುವ ಅಥವಾ ಅಪ್ರಾಪ್ತರ ಮದ್ಯಪಾನಕ್ಕೆ ಪ್ರಚೋದನೆ ನೀಡುವ ಯಾವುದೇ ಸಂಸ್ಥೆಯ ವಿರುದ್ಧ ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು.
* ವ್ಯವಸ್ಥಾಪಕರ ಹೊಣೆಗಾರಿಕೆ: ಸಂಸ್ಥೆಯ ಆವರಣದೊಳಗೆ ನಡೆಯುವ ನಿಯಮ ಉಲ್ಲಂಘನೆಗಳಿಗೆ ಆಯಾ ಸಂಸ್ಥೆಯ ಮಾಲೀಕರು, ವ್ಯವಸ್ಥಾಪಕರು (ಮ್ಯಾನೇಜರ್‌ಗಳು), ಪರವಾನಗಿದಾರರು ಮತ್ತು ಕಾರ್ಯಕ್ರಮದ ಆಯೋಜಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
* ಸಿಸಿಟಿವಿ (CCTV) ನಿಯಮ ಪಾಲನೆ: ಪ್ರವೇಶ ದ್ವಾರದ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ತನಿಖೆಯ ಸಮಯದಲ್ಲಿ ನಿಯಮ ಪಾಲನೆಯನ್ನು ಪರಿಶೀಲಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ನಿಗದಿತ ಅವಧಿಯವರೆಗೆ ಸುರಕ್ಷಿತವಾಗಿ ಸಂಗ್ರಹಿಸಿಡಬೇಕು.
*ಯುವ ಪೀಳಿಗೆಯ ರಕ್ಷಣೆಗೆ ವಿಶೇಷ ಗಮನ: ಅಪ್ರಾಪ್ತ ವಯಸ್ಕರು ಮದ್ಯ, ತಂಬಾಕು ಮತ್ತು ಮಾದಕ ದ್ರವ್ಯಗಳಿಗೆ ಬಲಿಯಾಗುವುದನ್ನು ತಡೆಯಲು ಪೊಲೀಸರು ಶಿಕ್ಷಣ ಸಂಸ್ಥೆಗಳು, ಪೋಷಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಮತ್ತು ನಾಗರಿಕ ಗುಂಪುಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.


