Bengaluru:18 ಅಂತಸ್ತಿನ ಅಪಾರ್ಟ್‌ಮೆಂಟ್‌ ಡೆಮಾಲಿಷನ್‌ಗೆ ಸಿದ್ಧತೆ.. ಯಾಕೆ ಗೊತ್ತಾ?

Bengaluru: ಕೂಡ್ಲು ಬಳಿ 18 ಅಂತಸ್ತಿನ ಹೊಸ ಅಪಾರ್ಟ್‌ಮೆಂಟ್‌ ಒಂದು ಕಡೆಗೆ ವಾಲಿಕೊಂಡಿದ್ದು, ಭಾರೀ ಅನಾಹುತವನ್ನು ತಪ್ಪಿಸಲು, ಈ ಕಟ್ಟಡವನ್ನು ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Jul 25, 2026 - 10:36
Bengaluru:18 ಅಂತಸ್ತಿನ ಅಪಾರ್ಟ್‌ಮೆಂಟ್‌ ಡೆಮಾಲಿಷನ್‌ಗೆ ಸಿದ್ಧತೆ.. ಯಾಕೆ ಗೊತ್ತಾ?

ಬೆಂಗಳೂರು: ಕೂಡ್ಲು ಬಳಿ 18 ಅಂತಸ್ತಿನ ಹೊಸ ಅಪಾರ್ಟ್‌ಮೆಂಟ್‌ ಒಂದು ಕಡೆಗೆ ವಾಲಿಕೊಂಡಿದ್ದು, ಅಪಾಯದ ಪರಿಸ್ಥಿತಿ ಎದುರಾಗಿದೆ. ಭವಿಷ್ಯದಲ್ಲಿ ಸಂಭವಿಸಬಹುದಾದ ಭಾರೀ ಅನಾಹುತವನ್ನು ತಪ್ಪಿಸಲು, ಈ ಕಟ್ಟಡವನ್ನು ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳು ಸೂಚನೆ ನೀಡಿದ್ದು, ನಗರದ ಇತಿಹಾಸದಲ್ಲೇ ಇದು ದೊಡ್ಡಮಟ್ಟದ ಕಟ್ಟಡ ತೆರವು ಕಾರ್ಯಾಚರಣೆಯಾಗಲಿದೆ.

ಕೂಡ್ಲು ಸಮೀಪ ಸುಮಾರು ರೂ.200 ಕೋಟಿ ವೆಚ್ಚದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಕನ್‌ಸ್ಟ್ರಕ್ಷನ್ಸ್, ಈ ಅಪಾರ್ಟ್‌ಮೆಂಟ್‌ ಕಟ್ಟಡವನ್ನು ನಿರ್ಮಿಸಿದೆ. ಒಟ್ಟು 49 ಐಷಾರಾಮಿ ಫ್ಲ್ಯಾಟ್‌ಗಳನ್ನು ಹೊಂದಿದೆ. ಆದರೆ, ಇತ್ತೀಚೆಗೆ ನಡೆಸಿದ ತಾಂತ್ರಿಕ ಪರಿಶೀಲನೆಯಲ್ಲಿ ಅಪಾರ್ಟ್‌ಮೆಂಟ್‌ ಒಂದು ಬದಿಗೆ ವಾಲಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ಉದ್ಘಾಟನೆಗೂ ಮುನ್ನವೇ  ನೆಲಸಮವಾಗಲಿದೆ.

ಈ ಅಪಾರ್ಟ್‌ಮೆಂಟ್‌ನ್ನು ಡೆಮಾಲಿಷನ್‌ ಮಾಡಲು ಕನ್‌ಸ್ಟ್ರಕ್ಷನ್ಸ್ ಕಂಪನಿ ಮಾಲೀಕರು ಒಪ್ಪಿಕೊಂಡಿದ್ದಾರೆ. ಕಟ್ಟಡವು ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಆರೋಪ ಕೇಳಿಬಂದಿದ್ದು, ಮುಂದಿನ ವಾರವೇ ಕೆಡವಲು ಮೆಗಾ ಡೆಮಾಲಿಷನ್‌ ಆಪರೇಷನ್‌ ನಡೆಯಲಿದೆ. 

ಕೋಟ್ಯಂತರ ರೂಪಾಯಿ ವ್ಯಯಿಸಿ, ಇಂತಹ ಅಪಾರ್ಟ್‌ಮೆಂಟ್‌ನ್ನು ಕಟ್ಟುವ ಮುನ್ನ ಮಣ್ಣಿನ ಸ್ಥಿರತೆ ಮತ್ತು ತಳಪಾಯದ ಗಟ್ಟಿತನವನ್ನು ಸಮರ್ಪಕವಾಗಿ ಪರೀಕ್ಷೆ ನಡೆಸಿಲ್ಲ. ಇಷ್ಟು ಎತ್ತರದ ಕಟ್ಟಡಕ್ಕೆ ಅನುಮತಿ ನೀಡುವಾಗ ಅಧಿಕಾರಿಗಳು ಎಚ್ಚರ ವಹಿಸಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿವೆ. 

ಅಕ್ಕ-ಪಕ್ಕ 900 ನಿವಾಸಿಗಳಿದ್ದಾರೆ:

ವಾಲಿದ ಕಟ್ಟಡದ ಆಸುಪಾಸು ಬರೋಬ್ಬರಿ 900ಕ್ಕೂ ಅಧಿಕ ನಿವಾಸಿಗಳಿದ್ದಾರೆ. ಹಾಗಾಗಿ, ತೆರವು ಕಾರ್ಯಾಚರಣೆಗೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ತಜ್ಞರ ಮೇಲ್ವಿಚಾರಣೆಯಲ್ಲಿ ನಡೆಸಬೇಕಾಗಿದೆ. ಈ ವೇಳೆ, ಸುತ್ತಮುತ್ತಲಿನ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಜಿಬಿಎ ತಿಳಿಸಿದೆ.