ಗುಂಡ್ಲುಪೇಟೆ ತಾಲೂಕಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ ಬರ ವೀಕ್ಷಣೆ

G.Parameshwara: ಗುಂಡ್ಲುಪೇಟೆ ತಾಲೂಕಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಬರ ವೀಕ್ಷಣೆ ಮಾಡಿದರು.

Sep 2, 2026 - 16:24
ಗುಂಡ್ಲುಪೇಟೆ ತಾಲೂಕಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ ಬರ ವೀಕ್ಷಣೆ

ಚಾಮರಾಜನಗರ: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಅವಲೋಕಿಸುವ ಸಲುವಾಗಿ 2 ದಿನಗಳ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರು, ಇಂದು ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ ಮತ್ತು ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಗ್ರಾಮಗಳಿಗೆ ಭೇಟಿ ನೀಡಿ, ಬರ ಪರಿಶೀಲನೆ ನಡೆಸಿದರು.

ಕೃಷಿ ಹಾಗೂ ತೋಟಗಾರಿಕೆ ಬೆಳೆಹಾನಿ, ಜಾನುವಾರುಗಳಿಗೆ ಮೇವಿನ ಕೊರತೆ, ವಿಬಿ-ಜಿ ರಾಮ್-ಜಿ ಯೋಜನೆಯಡಿ‌, ಜನರಿಗೆ ಉದ್ಯೋಗ ನೀಡಿ ಕೈಗೊಂಡಿರುವ ಕಾಮಗಾರಿಯನ್ನು‌ ಖುದ್ದು ವೀಕ್ಷಿಸಿ, ರೈತರ‌‌ ಕಷ್ಟವನ್ನು ಆಲಿಸಿದರು. 

ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ರೈತರ ಜಮೀನಿನಲ್ಲಿ ಬರ ಪರಿಶೀಲನೆಯ ವೇಳೆ, ತಾಲೂಕಿನಲ್ಲಿ ಮೇವಿನ ಕೊರತೆಯಿರುವ ವಿಚಾರವನ್ನು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಕೂಡಲೇ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮೇವಿನ ಸಂಗ್ರಹದ ಬಗ್ಗೆ ಮಾಹಿತಿ ಕೇಳಿದರು. ಸದ್ಯ 16 ವಾರಗಳಿಗಾಗುವಷ್ಟು ಮೇವಿನ ಸಂಗ್ರಹ ತಾಲೂಕಿನಲ್ಲಿರುವುದಾಗಿ ಹೇಳಿದರು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ, ನಿಗಾ ವಹಿಸಲು ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

ಬರ ವೀಕ್ಷಣೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಗಳು, ಗುಂಡ್ಲುಪೇಟೆ ತಾಲೂಕಿನಲ್ಲಿ ತೀವ್ರವಾಗಿ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ಮೆಕ್ಕೆಜೋಳ, ಸೂರ್ಯಕಾಂತಿ, ಕಬ್ಬು ಹಾಗೂ ಈ ಭಾಗದಲ್ಲಿ ಜನಪ್ರಿಯವಾಗಿರುವ ನಂಜನಗೂಡು ಬಾಳೆಯ ಬೆಳೆಯೂ ಮಳೆ ಕೊರತೆಯಿಂದಾಗಿ ಒಣಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿರುವ ಬೇರೆ ಭಾಗಗಳಿಗೆ ಹೋಲಿಸಿದರೆ, ಗುಂಡ್ಲುಪೇಟೆಯಲ್ಲಿ ಬರದಿಂದ ತೀವ್ರ ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗಿದೆ. ಕೆಲವು ರೈತರು ಮಾತ್ರ ಬೆಳೆಗಳಿಗೆ ವಿಮೆ ಮಾಡಿಸಿದ್ದಾರೆ. ಇನ್ನು ಹಲವು ರೈತರು ಯಾವುದೇ ರೀತಿಯ ವಿಮೆಯನ್ನು ಹೊಂದಿಲ್ಲ. ಹೀಗಾಗಿ, ರೈತರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಬೆಳೆಹಾನಿ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. 

ಮುಖ್ಯಮಂತ್ರಿಗಳು ಸಹ ಗದಗ ಜಿಲ್ಲೆಯ ಬರ ಪರಿಶೀಲನೆ ನಡೆಸಿದ್ದಾರೆ. ನಾನು ಕೂಡ ಅವರೊಂದಿಗೆ, ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ ಬರ ವೀಕ್ಷಣೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲೂ ಬರ ಪರಿಶೀಲನೆ ನಡೆಸಲಿದ್ದೇನೆ. ಪರಿಸ್ಥಿತಿಯನ್ನು ಅವಲೋಕಿಸಿದರೆ ಕಳೆದ ವರ್ಷಕ್ಕಿಂತ ಈ ಬಾರಿ ಭೀಕರ ಬರಗಾಲದ ಎದುರಾಗಿದೆ. ಈ ಹಿನ್ನೆಲೆ, 15ನೇ ತಾರೀಕಿನವರೆಗೆ ಬರ ವೀಕ್ಷಣೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಕಳೆದ ವರ್ಷ ಬರದಿಂದ ರಾಜ್ಯವು ರೂ.39,000 ಕೋಟಿಗಳಷ್ಟು ಬೆಳೆಹಾನಿಯನ್ನು ಅನುಭವಿಸಿತ್ತು. ಆಗ, ನಾವು ರೂ.18,000 ಕೋಟಿಗಳಷ್ಟು ಪರಿಹಾರ ನೀಡುವಂತೆ ಮನವಿ ಮಾಡಿದ್ದೆವು. ಆದರೆ, ಕೇಂದ್ರ ಸರ್ಕಾರ ಸ್ಪಂದಿಸಿರಲಿಲ್ಲ. ಕೊನೆಗೆ ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯ್ತು. ಅಲ್ಲಿ ನಿರ್ದೇಶನ ನೀಡಿದ ಬಳಿಕ, ಕೇಂದ್ರ ಕೇವಲ ರೂ.3,500 ಕೋಟಿ ಅನುದಾನ ನೀಡಿತ್ತು. ಈ ಬಾರಿಯೂ ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇದ್ದು, ಸರ್ಕಾರ ಸಲ್ಲಿಸುವ ವರದಿಗೆ ಅನುಗುಣವಾಗಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಈ ವೇಳೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗ ಶೆಟ್ಟಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್‌ ಹಾಗೂ ಜಿಲ್ಲಾಧಿಕಾರಿ ಶ್ರೀರೂಪಾ ಇದ್ದರು.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.