Puttur: ಹಕೀಂ ಕೂರ್ನಡ್ಕ ವಿರುದ್ಧ ಶಾಸಕರ ಬೆಂಬಲಿಗರ ಆಕ್ರೋಶ.. ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದ ಅಶೋಕ್ ರೈ
Puttur: ಇಲ್ಲಿನ ಪ್ರೆಸ್‌ಕ್ಲಬ್‌ನ ಮುಂಭಾಗ ಮಂಗಳವಾರ ಹೈಡ್ರಾಮ ನಡೆಯಿತು. ಅಶೋಕ್ ಕುಮಾರ್ ರೈ ವಿರುದ್ಧ ಹಕೀಂ ಕೂರ್ನಡ್ಕ, ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಲು ಬಂದಾಗ, ಶಾಸಕರ ಬೆಂಬಲಿಗರು ಹಕೀಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದು ಅಶೋಕ್ ರೈ ಪರಿಸ್ಥಿತಿ ನಿಯಂತ್ರಿಸಿದರು.
ಪುತ್ತೂರು: ಇಲ್ಲಿನ ಪ್ರೆಸ್‌ಕ್ಲಬ್‌ನ ಮುಂಭಾಗ ಮಂಗಳವಾರ ಹೈಡ್ರಾಮ ನಡೆಯಿತು. ಅಶೋಕ್ ಕುಮಾರ್ ರೈ ವಿರುದ್ಧ ಹಕೀಂ ಕೂರ್ನಡ್ಕ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಲು ಬಂದಾಗ, ಶಾಸಕರ ಬೆಂಬಲಿಗರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಅಶೋಕ್ ರೈ ಕೂಡ ಖುದ್ದು ಸ್ಥಳದಲ್ಲಿದ್ದು, ತಮ್ಮ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಶಾಸಕರ ಬೆಂಬಲಿಗರ ಆಕ್ರೋಶ ಮತ್ತು ವಿರೋಧದ ನಡುವೆಯೂ ಹಕೀಂ ಕೂರ್ನಡ್ಕ ಪತ್ರಿಕಾಗೋಷ್ಢಿಯನ್ನು ನಡೆಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರ ಬೆಂಬಲಿಗರು ಸ್ಥಳದಲ್ಲಿ ಜಮಾಯಿಸಿದ ಹಿನ್ನಲೆ, ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡರು. ಭದ್ರತೆ ದೃಷ್ಟಿಯಿಂದ ಪೊಲೀಸ್ ಜೀಪಿನಲ್ಲಿಯೇ ಹಕೀಂರನ್ನು ಸ್ಥಳದಿಂದ ಕರೆದುಕೊಂಡು ಹೋದರು.
ಶಾಸಕ ಅಶೋಕ್ ರೈ ಪ್ರತಿಕ್ರಿಯಿಸಿದ್ದು, 'ಈ ಘಟನೆಯ ಸಂದರ್ಭದಲ್ಲಿ ನಾನು ಕಚೇರಿಯಲ್ಲಿದ್ದೆ. ನಮ್ಮ ಕಾರ್ಯಕರ್ತರೆಲ್ಲ ಊಟಕ್ಕೆ ಹೋಗುವಾಗ ಹಕೀಂ ಕೂರ್ನಡ್ಕ ಕಾರಿನಲ್ಲಿ ಬಂದು, ನಿಮ್ಮ ಜಾತಕವನ್ನೆಲ್ಲ ಇವತ್ತು ಬಹಿರಂಗಪಡಿಸುತ್ತೇನೆ. ನನ್ನನ್ನು ಉಚ್ಛಾಟನೆ ಮಾಡುವ ಬಗ್ಗೆ ಮಾತನಾಡಿದ್ದು, ನಿಮಗೆಲ್ಲ ಬುದ್ಧಿ ಕಲಿಸುತ್ತೇನೆ ಎನ್ನುತ್ತ ಬಹಳ ಅವಮಾನಿಸುವಂತೆ ಮಾತನಾಡಿದ್ದಾರೆ. ಮಹಿಳೆಯರ ಕುರಿತು ಹೀಯಾಳಿಸುವ ರೀತಿಯಲ್ಲಿ ಮಾತುಗಳನ್ನು ಆಡಿದ್ದಾರೆ. ಈ ವಿಚಾರವಾಗಿ, ನಮ್ಮ ಕಾರ್ಯಕರ್ತರು ಕೇಳುವುದಕ್ಕೆ ಬಂದಿದ್ದಾರೆ. ನಾನು ಕೂಡಲೇ ಸ್ಥಳಕ್ಕೆ ಬಂದು ಎಲ್ಲರನ್ನು ಸಮಾಧಾನಪಡಿಸಿದ್ದೇನೆ' ಎಂದರು.
'ನನಗೂ ಅವರಿಗೂ ಯಾವುದೇ ದ್ವೇಷವಿಲ್ಲ. ಅಲ್ಲಿ ಅಹಿತಕರ ಘಟನೆ ಆಗಬಾರದು ಎನ್ನುವುದು ನನ್ನ ಉದ್ದೇಶವಾಗಿತ್ತು. ಎಲ್ಲರನ್ನು ಸಂತೈಸಿ ಕಳುಹಿಸಿದ್ದೇನೆ. ಅವರು ಕೂಡ ಮಾತನಾಡುವಾಗ, ಬಹಳ ಎಚ್ಚರಿಕೆಯಿಂದ ಇರಬೇಕು. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬಾರದು. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಶಾಸಕರು ಒತ್ತಾಯಿಸಿದರು.