B.Y.Vijayendra: ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ಶಕ್ತಿ ಬಿಜೆಪಿ ಪಾದಯಾತ್ರೆಗಿದೆ.. ಬಿ.ವೈ. ವಿಜಯೇಂದ್ರ ಹೇಳಿಕೆ

B.Y.Vijayendra: ಲಿಂಗಸೂರಿನಿಂದ ಆರಂಭಗೊಂಡಿರುವ ಬಿಜೆಪಿ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು.

Sep 1, 2026 - 21:28
B.Y.Vijayendra: ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ಶಕ್ತಿ ಬಿಜೆಪಿ ಪಾದಯಾತ್ರೆಗಿದೆ.. ಬಿ.ವೈ. ವಿಜಯೇಂದ್ರ ಹೇಳಿಕೆ

ರಾಯಚೂರು (ಲಿಂಗಸೂರು): ಕರ್ನಾಟಕದ ರಾಜಕೀಯ ದಿಕ್ಕನ್ನೇ ಬದಲಿಸುವ ಶಕ್ತಿ ಬಿಜೆಪಿಯ ಐತಿಹಾಸಿಕ ಪಾದಯಾತ್ರೆಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಹೇಳಿದರು.

ಲಿಂಗಸೂರಿನಿಂದ ಆರಂಭಗೊಂಡಿರುವ ಬಿಜೆಪಿ ಪಾದಯಾತ್ರೆ, ಕೇವಲ ರಾಜಕೀಯ ಕಾರ್ಯಕ್ರಮವಲ್ಲ. ಇದು ದಲಿತ ವಿರೋಧಿ, ರೈತ ವಿರೋಧಿ, ಬಡವರ ವಿರೋಧಿ, ಯುವಜನ ವಿರೋಧಿ, ಮಹಿಳಾ ವಿರೋಧಿ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಂದೋಲನ ಎಂದರು.

ಸಿಎಂ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ಯಾಕೆ ಪಾದಯಾತ್ರೆ ಮಾಡುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಡಿಕೆಶಿ ಅವರೇ, ನಿಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ಮೂಡಿರುವ ಆಕ್ರೋಶವೇ ಬಿಜೆಪಿ ಪಾದಯಾತ್ರೆಗೆ ಕಾರಣ. ರಾಜ್ಯದ ಜನರ ಹಕ್ಕು, ನ್ಯಾಯ ಹಾಗೂ ಭವಿಷ್ಯಕ್ಕಾಗಿ ನಾವು ಬೀದಿಗಿಳಿದಿದ್ದೇವೆ. ಭ್ರಷ್ಟಾಚಾರವನ್ನು ರಕ್ಷಿಸುವ ಸರ್ಕಾರವನ್ನು ಕಿತ್ತೊಗೆಯುವವರೆಗೂ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ನಾಗೇಂದ್ರ ರಾಜೀನಾಮೆ: ಮೊದಲ ಹಂತದ ಜಯ:

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ದುರುಪಯೋಗದ ಗಂಭೀರ ಆರೋಪಗಳ ಹಿನ್ನೆಲೆ, ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ಪಡೆಯಬೇಕಾಯಿತು. ಬಿಜೆಪಿ ಹೋರಾಟ ತೀವ್ರಗೊಳಿಸಿದ ಬಳಿಕ, ಸರ್ಕಾರ ಆತುರಾತುರವಾಗಿ ರಾಜೀನಾಮೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಯಿತು ಎಂದರು.

ವಿಪಕ್ಷ ನಾಯಕ ಆರ್.ಅಶೋಕ್ ಅವರು ಅಹೋರಾತ್ರಿ ಹೋರಾಟ ಘೋಷಿಸಿದ ತಕ್ಷಣವೇ ಸದನದ ಕಲಾಪವನ್ನು ಮೊಟಕುಗೊಳಿಸಿ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿತು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ನಡೆಸಿದ ಅಹೋರಾತ್ರಿ ಹೋರಾಟದ ಪರಿಣಾಮವಾಗಿ ಮೊದಲ ಹಂತದ ಜಯ ದೊರೆತಿದೆ ಎಂದು ಹೇಳಿದರು.

ದಲಿತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು ರೂ.187 ಕೋಟಿ ಹಣ ದುರುಪಯೋಗದ ಆರೋಪ ಕೇಳಿಬಂದಿದೆ. ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಾದ ಹಣವೇ ದುರುಪಯೋಗವಾಗಿರುವಾಗ ಸರ್ಕಾರದ ದಲಿತಪರ ಕಾಳಜಿ ಎಲ್ಲಿದೆ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮತದಾನ ಅಕ್ರಮಗಳ ಕುರಿತು ಮಾತನಾಡಿದ್ದಕ್ಕಾಗಿ ರಾಜೀನಾಮೆ ಪಡೆಯಲಾಗಿದೆ. ಆಗ ನಿಮ್ಮ ದಲಿತಪರ ಕಾಳಜಿ ಎಲ್ಲಿತ್ತು? ಎಂದರು.

ದಲಿತರ ಪರ ಭಾಷಣ ಮಾಡುವುದರಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ದಲಿತರ ಹಣ, ಹಕ್ಕು ಮತ್ತು ಬದುಕನ್ನು ರಕ್ಷಿಸುವ ಜವಾಬ್ದಾರಿಯನ್ನು ಸರ್ಕಾರ ನಿಭಾಯಿಸಬೇಕು ಎಂದು ಹೇಳಿದರು.

ಯುವಕರ ಭವಿಷ್ಯದ ಜೊತೆ ಚೆಲ್ಲಾಟ: ಕೆಪಿಎಸ್‌ಸಿ ಅಕ್ರಮಕ್ಕೆ ಕಡಿವಾಣ ಹಾಕಿ:

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳ ಆರೋಪಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ, ಅವುಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.

ಉದ್ಯೋಗಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಯುವಕರ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ನೇಮಕಾತಿ ಅಕ್ರಮಗಳಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವುದರ ಜೊತೆಗೆ ಖಾಲಿಯಿರುವ ಎರಡೂವರೆ ಲಕ್ಷ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.