ಬೆಂಗಳೂರು ಟೆಕ್ ಸಮಿಟ್-2026ರ ಸಿದ್ಧತೆಗಳನ್ನು ಪರಿಶೀಲಿಸಿದ ಸಚಿವ ಪ್ರಿಯಾಂಕ್ ಖರ್ಗೆ
Priyank Kharge: ಬೆಂಗಳೂರು ಟೆಕ್ ಸಮಿಟ್-2026ರ ಸಿದ್ಧತೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಪರಿಶೀಲನೆ ನಡೆಸಿದರು.
ಬೆಂಗಳೂರು: ನ.17 ರಿಂದ 19 ರವರೆಗೆ 'ಬೆಂಗಳೂರಿನ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ'ದಲ್ಲಿ (BIEC) ನಡೆಯಲಿರುವ 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್- 2026ರ ಸಿದ್ಧತೆಗಳನ್ನು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಪರಿಶೀಲನೆ ನಡೆಸಿದರು.
'ಎಐ & ಬಿಯಾಂಡ್’ ಆಶಯದೊಂದಿಗೆ ನಡೆಯಲಿರುವ ಈ 'ಸಮಿಟ್'ನ್ನು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸುತ್ತಿದೆ. ಈ ಸಮಿಟ್‌ನಲ್ಲಿ ತಂತ್ರಜ್ಞಾನ ಕ್ಷೇತ್ರದ ನಾಯಕರು, ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು, ಹೂಡಿಕೆದಾರರು, ಸಂಶೋಧಕರು, ನೀತಿ ನಿರೂಪಕರು ಹಾಗೂ ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
1,800ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುವ ನಿರೀಕ್ಷೆಯಿರುವ ಈ ಸಮಿಟ್‌ನಲ್ಲಿ ಕೃತಕ ಬುದ್ಧಿಮತ್ತೆ (AI), ಡೀಪ್‌ಟೆಕ್, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್‌ಗಳು, ರೊಬೊಟಿಕ್ಸ್ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಪ್ರದರ್ಶನ ನಡೆಯಲಿದೆ. ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳು, ಸ್ಟಾರ್ಟ್‌ಅಪ್‌ಗಳ ಪ್ರದರ್ಶನ, ಹೂಡಿಕೆದಾರರೊಂದಿಗಿನ ಸಂವಾದ, ಜಾಗತಿಕ ಸಹಭಾಗಿತ್ವ ಮತ್ತು ಸಂವಾದಾತ್ಮಕ ಕಲಿಕಾ ಅನುಭವಗಳು ಈ ಸಮಿಟ್‌ನ ಪ್ರಮುಖ ಆಕರ್ಷಣೆಗಳಾಗಿವೆ.
ಬೆಂಗಳೂರು ಟೆಕ್ ಸಮಿಟ್ ಸದಾ ವಿಚಾರಗಳು, ನಾವೀನ್ಯತೆ ಮತ್ತು ಸಹಯೋಗಕ್ಕೆ ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ಈ ಬಾರಿ 'ಎಐ & ಬಿಯಾಂಡ್’ ಆಶಯದಡಿ, ಉದಯೋನ್ಮುಖ ತಂತ್ರಜ್ಞಾನಗಳ ಸಾಧ್ಯತೆಗಳನ್ನು ಜನರು ನೇರವಾಗಿ ಅನುಭವಿಸುವುದರ ಜೊತೆಗೆ, ಸ್ಟಾರ್ಟ್‌ಅಪ್‌ಗಳು, ಸಂಶೋಧಕರು, ಹೂಡಿಕೆದಾರರು ಮತ್ತು ಉದ್ಯಮದ ನಾಯಕರ ನಡುವೆ ಸಂಪರ್ಕ ಹಾಗೂ ಸಹಯೋಗಕ್ಕೆ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಡೀಪ್‌ಟೆಕ್ ಮತ್ತು ರೊಬೊಟಿಕ್ಸ್‌ನಿಂದ ಹಿಡಿದು ಜಾಗತಿಕ ತಂತ್ರಜ್ಞಾನ ಸಹಭಾಗಿತ್ವದವರೆಗೆ, ಟೆಕ್ ಸಮಿಟ್-2026 ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ಉಳಿಯುವ ನಮ್ಮ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸಲಿದೆ ಎಂದು ಸಚಿವರು ಹೇಳಿದರು.