ಕಾವೇರಿ ವಿಷಯದಲ್ಲಿ ರಾಜ್ಯದ ಹಿತ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಆರ್.ಅಶೋಕ

R.Ashoka: ಕಾವೇರಿ ವಿಷಯದಲ್ಲಿ ರಾಜ್ಯದ ಹಿತ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.

Sep 9, 2026 - 17:06
ಕಾವೇರಿ ವಿಷಯದಲ್ಲಿ ರಾಜ್ಯದ ಹಿತ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಆರ್.ಅಶೋಕ

ಬೆಂಗಳೂರು: ಪ್ರತಿನಿತ್ಯ 6,000 ಕ್ಯೂಸೆಕ್ ಕಾವೇರಿ ನೀರನ್ನು ಬಿಡುವಂತೆ 'ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ' ನಿರ್ದೇಶನ ನೀಡಿರುವುದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ (R.Ashoka) ಆರೋಪಿಸಿದ್ದಾರೆ.  

ಕರ್ನಾಟಕದ ಕಾವೇರಿ ಕಣಿವೆ ಜಲಾಶಯಗಳ ವಾಸ್ತವ ಸ್ಥಿತಿ, ಕುಡಿಯುವ ನೀರಿನ ಅಗತ್ಯ, ರೈತರ ಪರಿಸ್ಥಿತಿ ಮತ್ತು ಮುಂದಿನ ದಿನಗಳ ನೀರಿನ ಲಭ್ಯತೆಯನ್ನು ವೈಜ್ಞಾನಿಕ ಅಂಕಿ-ಅಂಶಗಳೊಂದಿಗೆ ಪ್ರಾಧಿಕಾರದ ಮುಂದೆ ಸಮರ್ಥವಾಗಿ ಮಂಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದು ಕೇವಲ ಆಡಳಿತಾತ್ಮಕ ಲೋಪವಲ್ಲ, ಕರ್ನಾಟಕದ ಜಲ ಹಕ್ಕುಗಳನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ತೋರಿದ ಗಂಭೀರ ನಿರ್ಲಕ್ಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

15 ದಿನ 6,000 ಕ್ಯೂಸೆಕ್ ಎಂದರೆ 7.5 ಟಿಎಂಸಿ ಆಗುತ್ತದೆ. ನಾವು ಸಂಕಷ್ಟದಲ್ಲಿ ಇರುವಾಗ ನೀರು ಬಿಡುಗಡೆ ಅಸಾಧ್ಯ. ತಕ್ಷಣ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ವಾಸ್ತವ ಸ್ಥಿತಿ ಮನವರಿಕೆ ಮಾಡಬೇಕು. ಯಾವುದೇ ಕಾರಣಕ್ಕೂ ಈಗ ನೀರು ಬಿಡುಗಡೆ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು, ಈ ವೈಫಲ್ಯದ ಹೊಣೆ ಹೊತ್ತು ರಾಜ್ಯದ ಜನರಿಗೆ ಉತ್ತರ ನೀಡಬೇಕು. ಪ್ರಾಧಿಕಾರದ ಮುಂದೆ ಕರ್ನಾಟಕದ ಪರ ಯಾವ ಅಂಶಗಳನ್ನು ಮಂಡಿಸಲಾಯಿತು? ರಾಜ್ಯದ ಜಲಾಶಯಗಳ ನೈಜ ಸ್ಥಿತಿಯ ವರದಿಯನ್ನು ಸಲ್ಲಿಸಲಾಗಿತ್ತೇ? ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೆ, ಬೆಂಗಳೂರಿನ ಕುಡಿಯುವ ನೀರು ಹಾಗೂ ಕರ್ನಾಟಕದ ರೈತರ ಮೇಲೆ ಆಗುವ ಪರಿಣಾಮವನ್ನು ಸಮರ್ಪಕವಾಗಿ ವಿವರಿಸಲಾಗಿತ್ತೇ? ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಕಾವೇರಿ ನೀರು ಕರ್ನಾಟಕದ ರೈತರ ಬದುಕು, ಬೆಂಗಳೂರಿನ ಕುಡಿಯುವ ನೀರು ಹಾಗೂ ರಾಜ್ಯದ ಭವಿಷ್ಯದ ಜಲ ಭದ್ರತೆಯ ಪ್ರಶ್ನೆಯಾಗಿದೆ. ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟು ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಸರ್ಕಾರ ಕೂಡಲೇ ಪ್ರಾಧಿಕಾರದ ಮುಂದೆ ಪುನರ್‌ಪರಿಶೀಲನೆಗೆ ಒತ್ತಾಯಿಸಿ, ಅಗತ್ಯವಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗಬೇಕು. ಕರ್ನಾಟಕದ ನೀರಿನ ಮೇಲೆ ಮೊದಲ ಹಕ್ಕು ಕರ್ನಾಟಕದ ಜನರದು ಎಂಬ ನಿಲುವನ್ನು ಸರ್ಕಾರ ಸ್ಪಷ್ಟವಾಗಿ ಮತ್ತು ನಿರ್ದಾಕ್ಷಿಣ್ಯವಾಗಿ ಪ್ರತಿಪಾದಿಸಬೇಕು ಆಗ್ರಹಿಸಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.