ಪುತ್ತೂರು: ಸಂತ ಫಿಲೋಮಿನಾ ಕಾಲೇಜು - ಗ್ಲೋಬಲ್ ರೀಚ್ ಮಧ್ಯೆ ಒಪ್ಪಂದ
Puttur: ಇಲ್ಲಿನ ಸಂತ ಫಿಲೋಮಿನಾ ಕಾಲೇಜು ಹಾಗೂ ವಿದೇಶಿ ಶಿಕ್ಷಣ ಸಲಹಾ ಸಂಸ್ಥೆ ಗ್ಲೋಬಲ್ ರೀಚ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜು (St Philomena College) ಹಾಗೂ ವಿದೇಶಿ ಶಿಕ್ಷಣ ಸಲಹಾ ಸಂಸ್ಥೆ ಗ್ಲೋಬಲ್ ರೀಚ್ (Global Reach) ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಉನ್ನತ ಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ಅಂತರರಾಷ್ಟ್ರೀಯ ಅವಕಾಶಗಳಿಗೆ ಹೆಚ್ಚಿನ ಪ್ರವೇಶ ಕಲ್ಪಿಸುವ ಸಲುವಾಗಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ವಂ. ಡಾ.ಆಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿದ್ದರು. ಗ್ಲೋಬಲ್ ರೀಚ್ ಸಂಸ್ಥೆ ಪರವಾಗಿ ಶಾನ್ ಪೀಟರ್ ಜೋಸೆಫ್ ಮತ್ತು ಪೂರ್ಣಿಮಾ ಎಂ ಪಾಲ್ಗೊಂಡಿದ್ದರು.

ಪ್ರಾಂಶುಪಾಲರು ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಜಾಗತಿಕ ಅವಕಾಶಗಳು ಹಾಗೂ ಅನುಭವಗಳಿಗೆ ಅವರನ್ನು ಸಜ್ಜುಗೊಳಿಸುವುದು ಕಾಲೇಜಿನ ಪ್ರಮುಖ ಧೇಯವಾಗಿದೆ. ಗ್ಲೋಬಲ್ ರೀಚ್‌ನೊಂದಿಗಿನ ಈ ಸಹಭಾಗಿತ್ವವು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಹೊಸ ಆಯಾಮ ನೀಡಲಿದೆ. ಎಂದು ಹೇಳಿದರು.
ಒಪ್ಪಂದದಡಿ ಆಯೋಜಿಸಲಾಗುವ ಕಾರ್ಯಾಗಾರಗಳು, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳು ಹಾಗೂ ಅಂತರರಾಷ್ಟ್ರೀಯ ಶಿಕ್ಷಣ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ಟ್ವಿನ್ನಿಂಗ್ & ಪ್ಲೇಸ್‌ಮೆಂಟ್ ಆಫೀಸರ್ ಡಾ.ಗೀತಾ ಪೂರ್ಣಿಮಾ ಕೆ ಸ್ವಾಗತಿಸಿದರು. ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಘಟಕದ ನಿರ್ದೇಶಕ ಡಾ. ವಿನಯಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ.ಎಡ್ವಿನ್ ಎಸ್. ಡಿಸೋಜ ವಂದಿಸಿದರು. ಟ್ವಿನ್ನಿಂಗ್ & ಪ್ಲೇಸ್‌ಮೆಂಟ್ ಆಫೀಸರ್ ಅಭಿಷೇಕ್ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕರು, ಸಿಬ್ಬಂದಿಗಳು ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಹಾಜರಿದ್ದರು.

ವಿದ್ಯಾರ್ಥಿಗಳಿಗೆ ಜಾಗತಿಕ ಶಿಕ್ಷಣಾವಕಾಶಗಳ ಮಾಹಿತಿ:
ಒಡಂಬಡಿಕೆಗೆ ಸಹಿ ಹಾಕಿದ ನಂತರ, ಗ್ಲೋಬಲ್ ರೀಚ್ ಸಂಸ್ಥೆ ಪ್ರತಿನಿಧಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಲಭ್ಯವಿರುವ ವಿವಿಧ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.
ವಿಶ್ವದ ಪ್ರತಿಷ್ಠಿತ ವಿವಿಗಳಲ್ಲಿ ಪ್ರವೇಶ ಪಡೆಯುವ ವಿಧಾನ, ವಿವಿಧ ವಿದ್ಯಾರ್ಥಿವೇತನಗಳು, ಪ್ರವೇಶ, ವೀಸಾ ಪ್ರಕ್ರಿಯೆ, ವೃತ್ತಿ ಮಾರ್ಗದರ್ಶನ, ಉಚಿತ TOEFL & PTE ತರಬೇತಿಗಳನ್ನು ಕುರಿತು ವಿವರಿಸಿದರು.
ಇದರೊಂದಿಗೆ ಸೈಕೋಮೆಟ್ರಿಕ್ ವೃತ್ತಿ ಮೌಲ್ಯಮಾಪನ, ಭಾರತ-ವಿದೇಶಗಳಲ್ಲಿನ ಇಂಟರ್ನ್‌ಶಿಪ್ ಅವಕಾಶಗಳು, ಅಂತರರಾಷ್ಟ್ರೀಯ ಶಿಕ್ಷಣ ಮೇಳಗಳು ಮತ್ತು ಜಾಗತಿಕ ವಿಶ್ವವಿದ್ಯಾಲಯಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳ ಬಗ್ಗೆಯೂ ತಿಳಿಸಿಕೊಟ್ಟರು.