ಡಾ.ಬರಗೂರು ರಾಮಚಂದ್ರಪ್ಪಗೆ ಪುವೆಂಪು ಪ್ರಶಸ್ತಿ
Puvempu Award: ಮಂಜೇಶ್ವರದಲ್ಲಿ ನಡೆದ 'ಪುವೆಂಪು ನೆನಪು-2026' ಸಮಾರಂಭದಲ್ಲಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ, ಅವರಿಗೆ ಪುವೆಂಪು ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಮಂಜೇಶ್ವರ: ಇಲ್ಲಿನ ಗಿಳಿವಿಂಡು ಪಾರ್ತಿಸುಬ್ಬ ವೇದಿಕೆಯಲ್ಲಿ ಇಂದು ತುಳುರತ್ನ - ಬಹುಭಾಷಾ ವಿದ್ವಾಂಸ ಡಾ.ಪಿ.ವೆಂಕಟರಾಜ ಪುಣಿಂಚಿತ್ತಾಯರ ಜನ್ಮ ದಿನಾಚರಣೆ ಅಂಗವಾಗಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುವೆಂಪು ಪ್ರತಿಷ್ಠಾನ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ವತಿಯಿಂದ 'ಪುವೆಂಪು ನೆನಪು-2026' ಸಮಾರಂಭವನ್ನು ಆಯೋಜಿಸಲಾಗಿತ್ತು.
ಶಾಸಕ ಎ.ಕೆ.ಎಂ ಆಶ್ರಫ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸಭಾಪತಿ ಸಲೀಮ್ ಅಹಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ & ಗಿಳಿವಿಂಡು ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಪ್ಪ ಮೊಯ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಹಿರಿಯ ಸಾಹಿತಿ ರಮಾನಂದ ಬನಾರಿ, ಗಡಿ ಪ್ರಾಧಿಕಾರ ಸದಸ್ಯ ಅಶೋಕ್ ಚಂದರಗಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ ಎನ್.ಚನಿಯಪ್ಪ ನಾಯ್ಕ, ರಾಜ್ಯ ಕಾರ್ಮಿಕ ಇಲಾಖೆ ಕನಿಷ್ಠ ವೇತನ ಆಯೋಗದ ಅಧ್ಯಕ್ಷ ಟಿ.ಎಂ.ಶಾಹೀದ್, ರವಿ ನಾಯ್ಕಾಪು, ರವೀಶ ತಂತ್ರಿ, ರವಿನಾರಾಯಣ ಭಟ್ ಸೇರಿದಂತೆ ಕನ್ನಡ ಪರ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಗೀತೆಗಳನ್ನು ಆಯೋಜಿಸಲಾಗಿತ್ತು. ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರಿಗೆ 'ಪುವೆಂಪು ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಇದೇ ವೇಳೆ ಹೊರನಾಡ ಕನ್ನಡಿಗರಿಗೆ ಶಿಕ್ಷಣ ಹಾಗೂ ಸಾಂಸ್ಕೃತಿಕ ಯೋಜನೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಡಾ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.