Lalbagh Flower Show-2026: ಹೂವಿನ ಲೋಕದಲ್ಲಿ ಗಂಗರ ವೈಭವ: ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನ

Bengaluru Lalbagh Flower Show-2026: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿ ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಆಳಿದ ಗಂಗ ವಂಶದ ವೈಭವವನ್ನು ಅನಾವರಣಗೊಳಿಸಲಾಗುತ್ತದೆ.

Jul 24, 2026 - 12:02
Lalbagh Flower Show-2026: ಹೂವಿನ ಲೋಕದಲ್ಲಿ ಗಂಗರ ವೈಭವ: ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿ ಕೇವಲ ಹೂವುಗಳ ಹಬ್ಬವಾಗಿ ಉಳಿಯದೆ, ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಆಳಿದ 'ಗಂಗ' ವಂಶದ ವೈಭವವನ್ನು ಅನಾವರಣಗೊಳಿಸಲಾಗುತ್ತದೆ. 

ಆ.6 ರಿಂದ 17 ರವರೆಗೆ, ಭರ್ತಿ 12 ದಿನಗಳ ಕಾಲ ಈ ಫಲಪುಷ್ಪ ಪ್ರದರ್ಶನ ಜರುಗಲಿದ್ದು, ತೋಟಗಾರಿಕೆ ಇಲಾಖೆ ರೂ.2.45 ಕೋಟಿ ವ್ಯಯಿಸುತ್ತಿದೆ. ವಿಶೇಷವಾಗಿ ಗಂಗರ ಕಾಲದ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪ, ಧಾರ್ಮಿಕ ಪರಂಪರೆ ಹಾಗೂ ನೀರಾವರಿ ವ್ಯವಸ್ಥೆಯನ್ನು ವಿವಿಧ ಬಗೆಯ ಹೂವುಗಳ ಮೂಲಕ ಕಲಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನವಾಗಿದೆ.

ಕ್ರಿ.ಶ 324 ರಿಂದ 999 ರವರೆಗೆ ಸರಿ ಸುಮಾರು 675 ವರ್ಷಗಳ ಕಾಲ, ದಕ್ಷಿಣ ಕರ್ನಾಟಕದಲ್ಲಿ ಗಂಗರು ರಾಜ್ಯಭಾರ ಮಾಡಿದದ್ದು, ಕನ್ನಡದ ಹೆಮ್ಮೆಯ ರಾಜವಂಶಗಳಲ್ಲಿ ಒಂದಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಕೃಷಿ, ನೀರಾವರಿ ಮತ್ತು ಶಿಲ್ಪಕಲೆಗೆ ಅವರು ನೀಡಿದ ಕೊಡುಗೆ ತುಂಬಾ ದೊಡ್ಡದು. ಅದನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ 'ಗಂಗರ ವೈಭವ'ವನ್ನು ಈ ಬಾರಿಯ ಪ್ರದರ್ಶನದ ಮುಖ್ಯ ವಿಷಯವಾಗಿ ಆಯ್ದುಕೊಳ್ಳಲಾಗಿದೆ.

ಪ್ರಮುಖ ಆಕರ್ಷಣೆಗಳೇನು?

ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಗಂಗರು ಕಾಲದಲ್ಲಿ ನಿರ್ಮಾಣಗೊಂಡ ತಲಕಾಡಿನ ಅರ್ಕೇಶ್ವರ ದೇವಾಲಯ, ಕೋಲಾರದ ಕೆರೆ-ಕುಂಟೆಗಳು, ಶ್ರವಣಬೆಳಗೊಳದ ಜೈನ ಬಸದಿ, ಗೊಮ್ಮಟೇಶ್ವರ ಪ್ರತಿಮೆ, ಚಿಕ್ಕಜಾಲದ ಭೋಗ ನಂದೀಶ್ವರ ದೇವಾಲಯದ ಮಾದರಿಗಳು ಹೂವುಗಳಿಂದ ಅರಳಲಿವೆ. ಗಾಜಿನ ಮನೆಯಲ್ಲಿ ಗಂಗರ ವಾಸ್ತುಶಿಲ್ಪ, ವೀರಗಲ್ಲುಗಳು, ಶಿಲಾಶಾಸನಗಳು, ಶಾಸನಗಳ ಪ್ರತಿಕೃತಿಗಳು ಮತ್ತು ಅವರ ಕಾಲದ ಕಲಾ ವೈಭವವನ್ನು ಪ್ರತಿಬಿಂಬಿಸುವ ವಿಶೇಷ ಪ್ರದರ್ಶನವಿರಲಿದೆ

ಗಂಗರ ರಾಜವಂಶದ ಸ್ಥಾಪಕ ದಡಿಗ, ಶ್ರೀಪುರುಷ, ರಾಚಮಲ್ಲ ಮತ್ತು ಮಾರಸಿಂಹ ಸೇರಿದಂತೆ ಪ್ರಮುಖ ರಾಜರ ಕಲಾಕೃತಿಗಳು ನೋಡಲು ಕಾಣ ಸಿಗುತ್ತವೆ. ಇದು ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತಿಹಾಸಕ್ತರಿಗೆ ವಿಶೇಷ ಅನುಭವ ನೀಡಲಿದೆ.