ನೂಲಿನಲ್ಲಿ ನೇಯ್ದ ಕನಸುಗಳ ಲೋಕ ಸೃಷ್ಟಿಸುವ ಕಾಸರಗೋಡಿನ ಯುವ ಕಲಾವಿದೆ ಚಿತ್ರಲಕ್ಷ್ಮಿ

ಶ್ರೀಲಕ್ಷ್ಮಿಗೆ ಬಾಲ್ಯದಿಂದಲೇ ಚಿತ್ರಕಲೆ ಮೇಲೆ ಅಪಾರ ಆಸಕ್ತಿ. ಪುಸ್ತಕದ ಅಂಚುಗಳಲ್ಲಿ ಆರಂಭವಾದ ಚಿಕ್ಕ ಚಿಕ್ಕ ರೇಖೆಗಳು, ಮುಂದೆ ಅದ್ಭುತ ಚಿತ್ರಗಳಾಗಿ ರೂಪುಗೊಂಡವು. ಇದಕ್ಕೆ ಕೇವಲ ಆಸಕ್ತಿ  ಮಾತ್ರವಲ್ಲದೆ, ಅದನ್ನು ಸಾಧನೆಯಾಗಿ ರೂಪಿಸಲು ಅವಳು ತೋರಿದ ಪರಿಶ್ರಮ, ತಾಳ್ಮೆ ಮತ್ತು ಧೈರ್ಯವೇ ಇಂದು ಅವಳನ್ನು “ಚಿತ್ರಲಕ್ಷ್ಮಿ” ಎಂದು ಗುರುತಿಸಿಕೊಳ್ಳುವಂತೆ ಮಾಡಿದೆ ಎಂದು ಹೇಳಬಹುದು.. ಕರ್ನಾಟಕದಲ್ಲಿ ದಾರದ ಚಿತ್ರ  ಕಲೆಯನ್ನು ಪರಿಚಯಿಸಿದ ಪ್ರಸಿದ್ದ ಚಿತ್ರಗಾರ ಬಿಕೆಎಸ್ ವರ್ಮ ಅವರ ಏಕೈಕ ಶಿಷ್ಯ ನೀರ್ನಳ್ಳಿ ಗಣಪತಿ ಅವರ ಏಕೈಕ ಶಿಷ್ಯೆ ಎಂದರೆ ಶ್ರೀಲಕ್ಷ್ಮಿ.

Mar 30, 2026 - 14:35
Mar 30, 2026 - 16:53
ನೂಲಿನಲ್ಲಿ ನೇಯ್ದ ಕನಸುಗಳ ಲೋಕ ಸೃಷ್ಟಿಸುವ ಕಾಸರಗೋಡಿನ ಯುವ ಕಲಾವಿದೆ ಚಿತ್ರಲಕ್ಷ್ಮಿ

 ಬರಹ: ಕೆಎಂ ಪವಿತ್ರಾ ಮುರ್ಡೇಶ್ವರ 

ಕಲೆ ಎಂದರೆ ಮನದ ಭಾವನೆಗಳನ್ನು ಬಣ್ಣಗಳಲ್ಲಿ ವ್ಯಕ್ತಪಡಿಸುವ ಒಂದು ಅದ್ಭುತ ಸಾಧನ. ಈ ಮಾತಿಗೆ ಜೀವಂತ ಉದಾಹರಣೆಯಾಗಿ ಹೊರಹೊಮ್ಮಿರುವವರು ಕಾಸರಗೋಡಿನ ನೆಟ್ಟಣಿಗೆ ಗ್ರಾಮದವರಾದ ಶ್ರೀಲಕ್ಷ್ಮಿ. ಇವರು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಂದ ಚಿತ್ರಲಕ್ಷ್ಮಿ ಎಂಬ ಹೆಸರನ್ನು ಆಶೀರ್ವದಿಸಿಕೊಂಡು ಈಗ ಚಿತ್ರಲಕ್ಷ್ಮಿ ಎಂದೇ ಪ್ರಸಿದ್ಧರಾಗಿದ್ದಾರೆ.

ಭಾರತವು ಹಲವಾರು ವೈವಿಧ್ಯಮಯ ಕಲೆಗಳ ತವರೂರು. ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿಶಿಷ್ಟ ಕಲಾ ಪರಂಪರೆಯನ್ನು ಹೊಂದಿದೆ. ಇಂತಹ ಅನೇಕ ಕಲಾರೂಪಗಳ ಮಧ್ಯೆ, ಇತ್ತೀಚಿನ ದಿನಗಳಲ್ಲಿ ಗಮನಸೆಳೆಯುತ್ತಿರುವ ಒಂದು ವಿಶಿಷ್ಟ ಕಲೆ ಎಂದರೆ ದಾರದಲ್ಲಿ ಚಿತ್ರ ಬಿಡಿಸುವ ಕಲೆ ಅಥವಾ ಕುಂಚ ಕಲೆ..ಈ ವಿಶಿಷ್ಟ ಕಲೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡವರು ಚಿತ್ರಲಕ್ಷ್ಮಿ.

18-01-2006 ರಲ್ಲಿ ಕಾಸರಗೋಡಿನ ನೆಟ್ಟಣಿಗೆ ಗ್ರಾಮದ ಗೋಪಾಲಕೃಷ್ಣ ಭಟ್ಟ ಮತ್ತು ಸೌಮ್ಯಪ್ರಭಾ ದಂಪತಿಗೆ ಹುಟ್ಟಿದ  ಶ್ರೀಲಕ್ಷ್ಮಿಗೆ ಬಾಲ್ಯದಿಂದಲೇ ಚಿತ್ರಕಲೆ ಮೇಲೆ ಅಪಾರ ಆಸಕ್ತಿ. ಪುಸ್ತಕದ ಅಂಚುಗಳಲ್ಲಿ ಆರಂಭವಾದ ಚಿಕ್ಕ ಚಿಕ್ಕ ರೇಖೆಗಳು, ಮುಂದೆ ಅದ್ಭುತ ಚಿತ್ರಗಳಾಗಿ ರೂಪುಗೊಂಡವು. ಇದಕ್ಕೆ ಕೇವಲ ಆಸಕ್ತಿ  ಮಾತ್ರವಲ್ಲದೆ, ಅದನ್ನು ಸಾಧನೆಯಾಗಿ ರೂಪಿಸಲು ಅವಳು ತೋರಿದ ಪರಿಶ್ರಮ, ತಾಳ್ಮೆ ಮತ್ತು ಧೈರ್ಯವೇ ಇಂದು ಅವಳನ್ನು “ಚಿತ್ರಲಕ್ಷ್ಮಿ” ಎಂದು ಗುರುತಿಸಿಕೊಳ್ಳುವಂತೆ ಮಾಡಿದೆ ಎಂದು ಹೇಳಬಹುದು..
ಕರ್ನಾಟಕದಲ್ಲಿ ದಾರದ ಚಿತ್ರ  ಕಲೆಯನ್ನು ಪರಿಚಯಿಸಿದ ಪ್ರಸಿದ್ದ ಚಿತ್ರಗಾರ ಬಿಕೆಎಸ್ ವರ್ಮ ಅವರ ಏಕೈಕ ಶಿಷ್ಯ ನೀರ್ನಳ್ಳಿ ಗಣಪತಿ ಅವರ ಏಕೈಕ ಶಿಷ್ಯೆ ಎಂದರೆ ಶ್ರೀಲಕ್ಷ್ಮಿ.
ಈಕೆಯ ವಿಶೇಷತೆ ಎಂದರೆ ಅವಳ ಲೈವ್ ಪೇಂಟಿಂಗ್ ಕಲೆ. ವೇದಿಕೆಯ ಮೇಲೆ ನೇರವಾಗಿ ಚಿತ್ರವನ್ನು ಮೂಡಿಸುವ ಅವಳ ಸಾಮರ್ಥ್ಯ ಜನರನ್ನು ಬೆರಗುಗೊಳಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಖಾಲಿ ಕ್ಯಾನ್ವಾಸ್ ಮೇಲೆ ಜೀವಂತ ಚಿತ್ರ ಮೂಡಿಸುವುದು ಅವಳ ಕೈಚಳಕದ ವಿಶೇಷತೆಯಾಗಿದೆ..  ಹಾಗೆಯೇ  ದಾರದ ಚಿತ್ರ ಕಲೆಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡ ಯುವ ಪ್ರತಿಭೆಯಾಗಿದ್ದಾರೆ.


ಇಷ್ಟೇ ಅಲ್ಲದೇ ಬಹುಮುಖ ಪ್ರತಿಭೆ ಎಂಬಂತೆ ಇವಳು ಕೇವಲ ಚಿತ್ರಕಲೆ ಮಾತ್ರವಲ್ಲದೆ ಯೋಗಾಸನ,   ಸಂಗೀತ, ಯಕ್ಷಗಾನ ಮತ್ತು ಕುದುರೆ ಸವಾರಿಯಲ್ಲೂ ಮೇಲುಗೈ..
ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಭಟ್ ಇವರಲ್ಲಿ ಯೋಗಾಭ್ಯಾಸವನ್ನು ಮಾಡಿ ಹಲವಾರು ವೇದಿಕೆಯಲ್ಲಿ ಪ್ರದರ್ಶನವನ್ನು ನೀಡಿದ್ದಾರೆ. ಪ್ರಸ್ತುತ ಶ್ರೀಲಕ್ಷ್ಮಿಯವರು ವಿದ್ವತ್ ಶ್ರೀಮತಿ ಜಯಲಕ್ಷ್ಮಿ ಭಟ್ ಇವರಲ್ಲಿ ಸಂಗೀತಾಭ್ಯಾಸವನ್ನು ಮಾಡುತ್ತಿದ್ದಾರೆ..

ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಹಾಗೂ ಪಿಯುಸಿಯನ್ನು ಗೋಕರ್ಣದ ವಿಷ್ಣುಗುಪ್ತ ವಿದ್ಯಾಪೀಠದಲ್ಲಿ ಪೂರ್ಣಗೊಳಿಸಿದ್ದಾರೆ.
ಪ್ರಸ್ತುತ ಮಂಗಳೂರಿನ ಮಹಾಲಸಾ ಕಾಲೇಜಿನಲ್ಲಿ  ಬ್ಯಾಚುಲರ್ ಆಫ್ ವಿಶುಯಲ್ ಆರ್ಟ್ಸ್ನಲ್ಲಿ ತೃತೀಯ ವರ್ಷದ ಪದವಿಯನ್ನು ಓದುತ್ತಿದ್ದಾರೆ.

ಇಂದಿನ ಯುವಜನತೆಗೆ ಚಿತ್ರಲಕ್ಷ್ಮಿಯ ಕಥೆ ಒಂದು ಪ್ರೇರಣೆ. ಹೊಸತನದತ್ತ ಹೆಜ್ಜೆ ಇಟ್ಟರೆ, ಸಾಮಾನ್ಯವಾದ ಸಾಧನವೂ ಅದ್ಭುತ ಕಲೆಯಾಗಿ ಮಾರ್ಪಡಬಹುದು ಎಂಬುದನ್ನು ಅವಳ ಬದುಕು ನಮಗೆ ತಿಳಿಸುತ್ತದೆ.  ಹಾಗೆಯೇ  ಕಲೆ ಎಂಬುದು ಕೇವಲ ಪ್ರತಿಭೆಯಲ್ಲ, ಅದಕ್ಕೆ ಪರಿಶ್ರಮ, ತಾಳ್ಮೆ ಮತ್ತು ನಂಬಿಕೆಯೂ ಅಗತ್ಯವೆಂಬುದು ಇವಳಿಂದ ಕಲಿಯಬೇಕಾಗಿದೆ..
ಇಂತಹ ಕಲಾವಿದರ ಸಾಧನೆಗಳು ನಮ್ಮ ಸಮಾಜಕ್ಕೆ ಪ್ರೇರಣೆಯಾಗಿದ್ದು, ಕಲೆಯ ಮೂಲಕವೂ ಯಶಸ್ಸಿನ ಶಿಖರ ತಲುಪಬಹುದು ಎಂಬುದನ್ನು ಸ್ಪಷ್ಟಪಡಿಸುತ್ತವೆ.