ಮತಗಳ್ಳತನ ವಿರುದ್ಧ ಕ್ವಿಟ್ ವೋಟ್ ಚೋರಿ ಚಳುವಳಿ ಅಗತ್ಯ: ಸಿಎಂ ಡಿಕೆಶಿ
Bengaluru: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು (ಭಾನುವಾರ) ನಡೆದ 'ಕ್ವಿಟ್ ಇಂಡಿಯಾ ದಿನ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು.
ಬೆಂಗಳೂರು: ದೇಶದಲ್ಲಿ ಮತಗಳ್ಳತನ ನಡೆಯುತ್ತಿದ್ದು, ಇದರ ವಿರುದ್ಧ ಕ್ವಿಟ್ ವೋಟ್ ಚೋರಿ ಚಳುವಳಿ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು (ಭಾನುವಾರ) ನಡೆದ 'ಕ್ವಿಟ್ ಇಂಡಿಯಾ ದಿನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ನೀವು ಎಲ್ಲಾ ಕೆಲಸ ಬದಿಗಿಟ್ಟು ಮತಗಳ್ಳತನ ವಿರುದ್ಧ ಹೋರಾಟ ಮಾಡಿ, ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡುವೆ. ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, 1 ಕೋಟಿ ಮತದಾರರನ್ನು ಡಿಲೀಟ್ ಮಾಡಲು ಪ್ರಯತ್ನ ನಡೆಯುತ್ತಿದೆ. ಬದುಕಿಗಾಗಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಿ' ಎಂದು ಹೇಳಿದರು.

'ನಾವು ಗ್ಯಾರಂಟಿ ಯೋಜನೆಗಳನ್ನು ಜನರಿಗಾಗಿ ನೀಡಿದ್ದು, ಮತದಾನದ ಹಕ್ಕು ಇಲ್ಲದವರಿಗೆ ಈ ಯೋಜನೆಗಳು ಲಭ್ಯವಾಗುವುದು ಕಷ್ಟವಾಗುತ್ತದೆ. ಈಗಾಗಲೇ ಬಿಹಾರದಲ್ಲಿ ಮತದಾನದ ಹಕ್ಕು ಇರುವವರಿಗೆ ಮಾತ್ರ ಸರ್ಕಾರಿ ಯೋಜನೆ ನೀಡಲಾಗುತ್ತಿದೆ. ಹೀಗಾಗಿ, ಎಲ್ಲರ ಮತದಾನದ ಹಕ್ಕನ್ನು ಉಳಿಸಬೇಕು. ಗಣತಿ ನಮೂನೆ ತುಂಬಿ ಹಿಂತಿರುಗಿಸಿ. ಇದು ರಾಹುಲ್ ಗಾಂಧಿ ಅವರನ್ನು ಈ ದೇಶದ ಪ್ರಧಾನಮಂತ್ರಿಯಾಗಲು ಪೂರಕ ಹೆಜ್ಜೆಯಾಗಲಿದೆ' ಎಂದರು.
'ನಾನು ಮುಖ್ಯಮಂತ್ರಿಯಾಗಿದ್ದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಕಾರ್ಯಕರ್ತರಿದ್ದರೆ ಪಕ್ಷ, ಪಕ್ಷ ಇದ್ದರೆ ಸರ್ಕಾರ. ಇದನ್ನು ನಾವೆಲ್ಲರೂ ನೆನಪಿನಲ್ಲಿಡಬೇಕು. ಅಧಿಕಾರ ತಾತ್ಕಾಲಿಕ ಎಂಬುದನ್ನು ಮರೆಯಬಾರದು' ಎಂದು ತಿಳಿಸಿದರು.
'ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಜೀವನದ ಉಸಿರು. ದೇಶದ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದ ಪವಿತ್ರವಾದ ದಿನವಿಂದು. ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನದಲ್ಲಿ ಪವಿತ್ರವಾದ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂದು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷವಾಕ್ಯ ಮೊಳಗಿತ್ತು. ಇಂದು ಸರ್ವಾಧಿಕಾರಿ ಮನಸ್ಥಿತಿ - ಅಧಿಕಾರ ಬಿಟ್ಟು ತೊಲಗಿ ಎಂದು ಘೋಷವಾಕ್ಯ ಕೂಗಬೇಕಿದೆ. ಅಂದು ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು, ಇಂದು ಪ್ರತಿಭಟನೆ ನಮ್ಮ ಜನ್ಮಸಿದ್ಧ ಹಕ್ಕು ಎಂದು ಹೇಳಬೇಕಾಗಿದೆ' ಎಂದರು.
'ಇದೇ ದಿನ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಂಕಲ್ಪ ಮಾಡಲಾಯಿತು. ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಮೌಲಾನ ಅಬುಲ್ ಕಲಾಂ ಸೇರಿದಂತೆ ಎಲ್ಲಾ ನಾಯಕರು ಈ ಚಳುವಳಿಯಲ್ಲಿ ಹೆಜ್ಜೆ ಹಾಕಿದ್ದರು' ಎಂದು ಸ್ಮರಿಸಿದರು.
'ಕಾಂಗ್ರೆಸ್ ಪಕ್ಷ ಎಂದಿಗೂ ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಹೊರಗೆಹಾಕಬೇಕು ಎಂಬ ದೊಡ್ಡ ಷಡ್ಯಂತ್ರ ನಡೆಯಿತು. ನಮ್ಮ ಇಂಡಿಯಾ ಒಕ್ಕೂಟ 25 ಸೀಟುಗಳ ಅಂತರದಲ್ಲಿ ಅಧಿಕಾರದಿಂದ ವಂಚಿತವಾಯಿತು. ಯಾವುದೇ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಅಧಿಕಾರ ಶಾಶ್ವತವಲ್ಲ' ಎಂದು ತಿಳಿಸಿದರು.
'ಈ ದೇಶದ ಸಮಗ್ರತೆ, ಐಕ್ಯತೆ, ಶಾಂತಿಗಾಗಿ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದರು. ನಮ್ಮ ರಾಜ್ಯದಲ್ಲೂ ಚಾಮರಾಜನಗರದಿಂದ ರಾಯಚೂರುವರೆಗೆ ಪಾದಯಾತ್ರೆ ನಡೆಯಿತು. ಈ ಯಾತ್ರೆ ಸಾಗಿದ ಎಲ್ಲಾ ಕಡೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದರು. ಆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ 136 ಸೀಟು ಗೆಲ್ಲಲು ಸಾಧ್ಯವಾಯಿತು' ಎಂದರು.
'ನಮ್ಮ ಗುರಿ 2028 ಮತ್ತು 2029 ಆಗಿದೆ. ಕಾಂಗ್ರೆಸ್ ಶಕ್ತಿ - ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ - ದೇಶದ ಇತಿಹಾಸ. ಹೀಗಾಗಿ, ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣದಲ್ಲಿ ಸಾಧ್ಯವಾಯಿತಾ? ಇಲ್ಲ' ಎಂದು ಹೇಳಿದರು.