ಯಂತ್ರಗಳಿಂದ ತುಪ್ಪದ ಸಮಗ್ರ ಶಕ್ತಿಯನ್ನು ಅರಿಯಲು ಸಾಧ್ಯವಿಲ್ಲ: ರಾಘವೇಶ್ವರ ಶ್ರೀ

Annabrahma Chaturmasya Dharmasabha: ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಮಂಗಳವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ತುಪ್ಪದ ಮಹತ್ವದ ಕುರಿತಾಗಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡಿದರು.

Sep 23, 2026 - 12:20
ಯಂತ್ರಗಳಿಂದ ತುಪ್ಪದ ಸಮಗ್ರ ಶಕ್ತಿಯನ್ನು ಅರಿಯಲು ಸಾಧ್ಯವಿಲ್ಲ: ರಾಘವೇಶ್ವರ ಶ್ರೀ

ಗೋಕರ್ಣ: ಯಂತ್ರಗಳಿಂದ ತುಪ್ಪವನ್ನು ವಿಶ್ಲೇಷಿಸಿದರೆ, ಅದರ ಸಮಗ್ರ ಶಕ್ತಿ ಗೋಚರವಾಗುವುದಿಲ್ಲ. ತುಪ್ಪ ಕೇವಲ ಭೌತಿಕ ಗುಣಗಳಿರುವ ದ್ರವ್ಯವಲ್ಲ. ಅದರಲ್ಲಿ ಕಣ್ಣು-ಮನಸ್ಸಿಗೆ ಮೀರಿದ ದೈವಿಕ ಶಕ್ತಿಯಿದ್ದು, ತುಪ್ಪದ ದಿವ್ಯ ಗುಣಗಳನ್ನು ಅನುಭವದಿಂದ ಕಂಡುಕೊಳ್ಳಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ (Raghaveshwara Bharati Swamiji) ಹೇಳಿದರು.

ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಮಂಗಳವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ತುಪ್ಪದ ಮಹತ್ವದ ಕುರಿತಾಗಿ ಪ್ರವಚನ ನೀಡಿದರು. 

ಸ್ಮೃತಿ ಮತ್ತು ಬುದ್ಧಿಯನ್ನು ಉದ್ದೀಪನಗೊಳಿಸುವ ಚೈತನ್ಯ ನೈಜ ದೇಶಿ ಗೋವಿನ ತುಪ್ಪಕ್ಕಿದೆ. ಇದು ಜೀವಿಯ ಸಾರವಾದ ಓಜಸ್ಸನ್ನು ಹೆಚ್ಚಿಸುತ್ತದೆ. ಸ್ವರವನ್ನು ಮಧುರವಾಗಿಸುವುದರೊಂದಿಗೆ, ದೇಹಕ್ಕೆ ಬಣ್ಣವನ್ನು ಕೊಡುವ ಸಾಮರ್ಥ್ಯ ತುಪ್ಪಕ್ಕಿದೆ. ತುಪ್ಪ ಸಂತತಿಗೆ ಪೂರಕ, ವಯಸ್ಥಾಪಕ, ಕಣ್ಣಿನ ದೃಷ್ಟಿ ಹೆಚ್ಚಳಕ್ಕೆ ಸಹಕಾರಿ ಮಾತ್ರವಲ್ಲ ಮೋಕ್ಷ ಸಾಧಕನಿಗೆ ತುಪ್ಪ ಅತ್ಯುಪಯುಕ್ತವಾದ ಆಹಾರವು ಹೌದು. ತುಪ್ಪದ ಗುಣಗಳನ್ನು ಹೇಳುತ್ತಾ ಹೋದರೆ ಅದು ತುಪ್ಪದ ಸಹಸ್ರನಾಮವೇ ಆಗುತ್ತದೆ ಎಂದು ತುಪ್ಪದ ಗುಣಗಳನ್ನು ವಿವರಿಸಿದರು.

ನಗರಗಳಲ್ಲಿ ಇಂದು ನಿರ್ವಿಶೀಕರಣ ಅಥವಾ ದೇಹ ಶುದ್ಧೀಕರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ತುಪ್ಪವು ಇದಕ್ಕೆ ಅತ್ತ್ಯುತ್ತಮವಾದ ಪದಾರ್ಥವಾಗಿದ್ದು, ವಾತ, ಪಿತ್ತ, ಉನ್ಮಾದ, ಅಪಸ್ಮಾರ ಸೇರಿದಂತೆ ನೂರಾರು ರೋಗಗಳಲ್ಲಿ ತುಪ್ಪವು ಪರಮೌಷಧವಾಗಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಬಲ ಇರುವವರು ಒರಟಾಗಿರುತ್ತಾರೆ. ಕೋಮಲವಾಗಿರುವವರು ಬಲಹೀನರಾಗಿರುತ್ತಾರೆ. ಆದರೆ ತುಪ್ಪವನ್ನು ಸೇವಿಸಿದರೆ ದೇಹಕ್ಕೆ ಬಲದ ಜೊತೆಗೆ ಮೃದುತ್ವವು ಬರುತ್ತದೆ. ಇದು ತುಪ್ಪದ ವೈಶಿಷ್ಟ್ಯವಾಗಿದ್ದು,  ತುಪ್ಪ ಹೊಸದಾದರೂ, ಹಳೆಯದಾದರೂ ಎರಡೂ ಕೂಡ ದೇಹಕ್ಕೆ ಹಿತ ಎಂದು ಆಯುರ್ವೇದ ಗ್ರಂಥಗಳನ್ನು ಆಧಾರಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬೇರೆ ಬೇರೆ ಪ್ರಾಣಿಗಳ ಹಾಲಿನಿಂದಲೂ ತುಪ್ಪವನ್ನು ಮಾಡಬಹುದಾದರೂ, ದೇಶಿ ಗೋವಿನ ತುಪ್ಪಕ್ಕೆ ಯಾವುದೂ ಸಾಟಿಯಲ್ಲ. ಸುಶ್ರುತರು ಗೋವು, ಆನೆ, ಕುರಿ ಸೇರಿದಂತೆ ಅನೇಕ ತುಪ್ಪಗಳನ್ನು ವಿಶ್ಲೇಷಿಸಿದ್ದು, ಎಲ್ಲವುಗಳಲ್ಲಿಯೂ ಗೋವಿನ ತುಪ್ಪ ಸರ್ವಶ್ರೇಷ್ಠ ಎಂದು ಹೇಳಿದ್ದಾರೆ. ಜಗತ್ತಿನಲ್ಲಿ ಕಣ್ಣಿಗೆ ಒಳ್ಳೆಯದು ಎಂದು ಹೇಳಲಾದ ಸಮಸ್ತ ವಸ್ತುಗಳಲ್ಲಿ ಗೋವಿನ ತುಪ್ಪವೇ ಅತ್ಯಂತ ಶ್ರೇಷ್ಠ ಎಂಬುದು ಆಯುರ್ವೇದದ ಅಭಿಮತ ಎಂದರು.

ನಾವು ಬೇರೆಯವರ ಮನೆಯಲ್ಲಿ ಊಟವನ್ನು ಮಾಡಬಾರದು. ಏಕೆಂದರೆ ಅನ್ನವನ್ನು ಅವರು ಸಂಪಾದಿಸಿರುವ ರೀತಿ, ಅದನ್ನು ತಯಾರಿಸಿರುವ ಕ್ರಮ ನಮಗೆ ತಿಳಿದಿರುವುದಿಲ್ಲ. ಆದರೆ ಪರಾನ್ನವನ್ನು ಊಟ ಮಾಡುವ ಸಂದರ್ಭ ಬಂದಾಗ, ಊಟಕ್ಕೆ ಅಭಿಗಾರವಾಗಿ ತುಪ್ಪವನ್ನು ಹಾಕಿಕೊಂಡು ಊಟಮಾಡಿದರೆ, ಯಾವುದೇ ದೋಷ ಹಾಗೂ ಅಶುಚಿಗಳಿದ್ದರೂ ಅದನ್ನು ನಿವಾರಿಸುತ್ತದೆ. ಅದು ತುಪ್ಪದ ಶಕ್ತಿ ಎಂಬ ಶ್ರೀರಂಗ ಮಹಾಗುರುಗಳ ಮಾತುಗಳನ್ನು ಶ್ರೀಗಳು ಉಲ್ಲೇಖಿಸಿದರು.

ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಕೃಷ್ಣಯಜುರ್ವೇದ ಘನಪಾರಾಯಣದಲ್ಲಿ ಭಾಗವಹಿಸಿದ ಶ್ರೀಗಳು, ಪಾರಾಯಣದಲ್ಲಿ ನಿರತರಾದ ವೇದ ವಿದ್ವಾಂಸರನ್ನು ಆಶೀರ್ವದಿಸಿದರು. ಯಕ್ಷಗಾನ ಕಲಾವಿದ ತೋಟಿಮನೆ ಗಣಪತಿ ಹೆಗಡೆ, ದಿನಪ್ರಧಾನರಾಗಿ ಮಂಜುನಾಥ ಹೆಗಡೆ ಮಗೇಗಾರು ದಂಪತಿಗಳು ಉಪಸ್ಥಿತರಿದ್ದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.