ಸಂತ ಫಿಲೋಮಿನಾ ಕಾಲೇಜು: ಹಿಂದಿ ದಿವಸ್ ಆಚರಣೆ
St Philomena College: ಸಂತ ಫಿಲೋಮಿನಾ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ, ರಜತ ಮಹೋತ್ಸವ ಸಭಾಭವನದಲ್ಲಿ ಈಚೆಗೆ 'ಹಿಂದಿ ದಿವಸ್' ಏರ್ಪಡಿಸಲಾಗಿತ್ತು.
ಪುತ್ತೂರು: ಭಾಷೆಯನ್ನು ಗೌರವಿಸುವುದರೊಂದಿಗೆ, ಅದರ ನಿಜವಾದ ಉದ್ದೇಶವನ್ನು ಅರಿಯಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.
ಕಾಲೇಜಿನ ಹಿಂದಿ ವಿಭಾಗದ ವತಿಯಿಂದ, ರಜತ ಮಹೋತ್ಸವ ಸಭಾಭವನದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ 'ಹಿಂದಿ ದಿವಸ್' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
'ಹಿಂದಿ ಭಾರತದ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ವಿವಿಧ ಭಾಷೆಗಳನ್ನು ಕಲಿಯುವುದರಿಂದ ಲಭ್ಯವಾಗುವ ಅವಕಾಶಗಳತ್ತ ಗಮನ ಹರಿಸಬೇಕು. ಜೀವನದಲ್ಲಿ ಕಲಿಯಬೇಕಾದ ಪ್ರಮುಖ ವಿಷಯಗಳಲ್ಲಿ, ತಮ್ಮ ಭಾಷೆಯನ್ನು ಗೌರವಿಸುವುದು ಮತ್ತು ಭಾಷೆಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಎನ್ ಭಾಗವಹಿಸಿದ್ದರು. ಅವರು ಹಿಂದಿ ದಿವಸದ ಮಹತ್ವವನ್ನು ವಿವರಿಸಿದರು. ಸೆ.14 ರಂದು ಭಾರತೀಯ ಸಂವಿಧಾನ ಸಭೆಯು ಹಿಂದಿ ಭಾಷೆಯನ್ನು ದೇಶದ ಅಧಿಕೃತ ಆಡಳಿತ ಭಾಷೆಯಾಗಿ ಅಂಗೀಕರಿಸಿದ ನೆನಪಿಗಾಗಿ, ಪ್ರತಿವರ್ಷ 'ಹಿಂದಿ ದಿವಸ್' ಆಚರಿಸಲಾಗುತ್ತದೆ. ಭಾರತದ ವೈವಿಧ್ಯಮಯ ಸಂಸ್ಕೃತಿ ಹಾಗೂ ವಿವಿಧ ಭಾಷಿಕ ಸಮುದಾಯಗಳ ನಡುವೆ ಸಂವಹನದ ಸೇತುವೆಯಾಗಿ ಹಿಂದಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
'ಹಿಂದಿ ದಿವಸ್' ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಈ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿ ಸಂಯೋಜಕ ಅಶ್ವಿನ್ ಮೊಂತೇರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಿಂಪಲ್ ಮಿಶೆಲ್ ತಾವ್ರೊ ಸಹಕರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಏಂಜಲ್ ಹಾಗೂ ಬಳಗದವರು ಪ್ರಾರ್ಥಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ಡಿಂಪಲ್ ಜೇನಿಫರ್ ಫೆರ್ನಾಂಡಿಸ್ ಸ್ವಾಗತಿಸಿದರು. ದ್ವಿತೀಯ ಬಿಎ ವಿಭಾಗದ ಮನೀಶ್ ವಂದಿಸಿದರು. ದ್ವಿತೀಯ ಬಿಸಿಎ ವಿಭಾಗದ ಭಾರದ್ವಾಜ್ ಭಂಡಾರ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು.