Mysuru GSS Media: ಮೈಸೂರಿನ ಜಿಎಸ್‌ಎಸ್‌ ಮಾಧ್ಯಮದಿಂದ ಹೊಸ ವೆಂಚರ್‌.. ಶ್ರೀಹರಿ ದ್ವಾರಕನಾಥರ ಕನಸಿಗೆ ಸಿಇಒ ಹುಡುಕಾಟ!

Mysuru GSS Media: ಮೈಸೂರಿನ ಜಿಎಸ್ಎಸ್ ಮಾಧ್ಯಮ ಯೂಟ್ಯೂಬ್ ವಾಹಿನಿ ಸಂಸ್ಥೆ ಇದೀಗ ಮತ್ತೊಂದು ಮಹತ್ವದ ವಿಸ್ತರಣೆಗೆ ಸಜ್ಜಾಗಿದೆ. ಸಿಇಒ ಹುಡುಕಾಟಕ್ಕೆ ಮುಂದಾಗಿದೆ.

Sep 23, 2026 - 18:45
Mysuru GSS Media: ಮೈಸೂರಿನ ಜಿಎಸ್‌ಎಸ್‌ ಮಾಧ್ಯಮದಿಂದ ಹೊಸ ವೆಂಚರ್‌.. ಶ್ರೀಹರಿ ದ್ವಾರಕನಾಥರ ಕನಸಿಗೆ ಸಿಇಒ ಹುಡುಕಾಟ!

ಮೈಸೂರು: ಸುಮಾರು ಎರಡು ಸಾವಿರಕ್ಕೂ ಅಧಿಕ ವಿಡಿಯೋ ಕಂಟೆಂಟ್‌ಗಳ ಮೂಲಕ ತನ್ನದೇ ಆದ ಡಿಜಿಟಲ್ ಹೆಜ್ಜೆಗುರುತು ಮೂಡಿಸಿರುವ ಜಿಎಸ್ಎಸ್ ಮಾಧ್ಯಮ ಯೂಟ್ಯೂಬ್ ವಾಹಿನಿ ಸಂಸ್ಥೆ ಇದೀಗ ಮತ್ತೊಂದು ಮಹತ್ವದ ವಿಸ್ತರಣೆಗೆ ಸಜ್ಜಾಗಿದೆ.

ಸಂಸ್ಥೆಯ ರೂವಾರಿ ಶ್ರೀಹರಿ ದ್ವಾರಕನಾಥರು ಕನ್ನಡದಲ್ಲಿ ಹೊಸ ಮಾದರಿಯ ಡಿಜಿಟಲ್ ಮಾಧ್ಯಮವನ್ನು ರೂಪಿಸುವ ಕನಸಿನೊಂದಿಗೆ, ಸಂಸ್ಥೆಯನ್ನು ಮುನ್ನಡೆಸಬಲ್ಲ ಹೊಸ ಸಿಇಒಗಾಗಿ ಹುಡುಕಾಟ ಆರಂಭಿಸಿದ್ದಾರೆ.

ದೃಶ್ಯಮಾಧ್ಯಮಕ್ಕೆ ಹೆಚ್ಚು ಒತ್ತು ನೀಡಿರುವ ಜಿಎಸ್ಎಸ್, ಈಗಾಗಲೇ ಸಮೃದ್ಧ ವಿಡಿಯೋ ಕಂಟೆಂಟ್ ಮತ್ತು ಸುಸಜ್ಜಿತ ವಿಡಿಯೋ ಸ್ಟುಡಿಯೋ ವ್ಯವಸ್ಥೆಯನ್ನು ಹೊಂದಿದೆ. ಮುಂದಿನ ಹಂತದಲ್ಲಿ ಡಿಜಿಟಲ್ ಮಾಧ್ಯಮವನ್ನು ಇನ್ನಷ್ಟು ವೃತ್ತಿಪರವಾಗಿ ವಿಸ್ತರಿಸಿ, ಕನ್ನಡದಲ್ಲಿ ವಿಶಿಷ್ಟವಾದ ಯೂಟ್ಯೂಬ್ ಆಧಾರಿತ ನ್ಯೂಸ್ ಪ್ಲಾಟ್‌ಫಾರ್ಮ್ ರೂಪಿಸುವುದು ಶ್ರೀಹರಿಯವರ ಉದ್ದೇಶ.

ರಾಷ್ಟ್ರೀಯ ಮಟ್ಟದಲ್ಲಿ ಪಾಲ್ಕಿ ಶರ್ಮಾ ಉಪಾಧ್ಯಾಯ ಅವರಂತಹ ಪತ್ರಕರ್ತರು ಡಿಜಿಟಲ್ ವೇದಿಕೆಯಲ್ಲಿ ರೂಪಿಸಿರುವ ಸ್ವತಂತ್ರ ಮಾಧ್ಯಮ ಮಾದರಿಯಿಂದ ಪ್ರೇರಣೆ ಪಡೆದಿರುವ ಶ್ರೀಹರಿ, ಅದೇ ರೀತಿಯ ವಿಶ್ವಾಸಾರ್ಹತೆ, ವಿಶ್ಲೇಷಣೆ ಮತ್ತು ಗುಣಮಟ್ಟವನ್ನು ಕನ್ನಡದಲ್ಲೂ ಕಟ್ಟಿಕೊಡುವ ಕನಸು ಕಾಣುತ್ತಿದ್ದಾರೆ. ಈ ಕನಸಿಗೆ ಜೊತೆಯಾಗಬಲ್ಲ ದೂರದೃಷ್ಟಿಯುಳ್ಳ, ಡಿಜಿಟಲ್ ಮಾಧ್ಯಮದ ಸಂಪೂರ್ಣ ಕಾರ್ಯವೈಖರಿ ಅರ್ಥೈಸಿಕೊಂಡಿರುವ ನಾಯಕತ್ವದ ಹುಡುಕಾಟದಲ್ಲಿದ್ದಾರೆ.

ಮೂಲತಃ ಬೆಂಗಳೂರಿನ ಜಯನಗರದವರಾದ ಶ್ರೀಹರಿ ಸುಮಾರು ಎರಡು ದಶಕಗಳ ಹಿಂದೆ ಉದ್ಯೋಗ ಮತ್ತು ಉದ್ಯಮದ ಹಿನ್ನೆಲೆಯಲ್ಲಿ ಮೈಸೂರಿಗೆ ಕಾಲಿಟ್ಟವರು. ಬ್ಯಾಂಕಿಂಗ್ ಕ್ಷೇತ್ರದ ದಶಕಗಳ ಅನುಭವದೊಂದಿಗೆ ಮೈಸೂರಿನಲ್ಲಿ ತಮ್ಮ ಉದ್ಯಮ ಕ್ಷೇತ್ರವನ್ನು ಯಶಸ್ವಿಯಾಗಿ ವಿಸ್ತರಿಸಿಕೊಂಡಿರುವ ಅವರು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಚಿರಪರಿಚಿತ ಹೆಸರು. 'ಯೋಗಾತ್ಮ ಶ್ರೀಹರಿ' ಎಂದೇ ಗುರುತಿಸಿಕೊಂಡಿರುವ ಅವರು ಉತ್ತಮ ಯೋಗಪಟುವೂ ಹೌದು.

ಪತ್ರಿಕೋದ್ಯಮದೊಂದಿಗೂ ತಮ್ಮನ್ನು ಬೆಸೆದುಕೊಂಡಿರುವ ಶ್ರೀಹರಿ, ಮೈಸೂರಿನ ಪತ್ರಕರ್ತರಾದ ಸಿ.ಕೆ.ಮಹೇಂದ್ರ ಹಾಗೂ ನಾರಾಯಣ ಅವರೊಂದಿಗೆ ನವ ಮಾಧ್ಯಮ ಸಂಸ್ಥೆಯನ್ನು ಕಟ್ಟುವ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐದು ವರ್ಷಗಳ ಹಿಂದೆ ಪತ್ರಿಕೋದ್ಯಮದೊಂದಿಗೆ ಆರಂಭವಾದ ಈ ಪಯಣ ಇಂದು ಸಮಾಜದಲ್ಲಿ ಗೌರವಯುತ ಮಾಧ್ಯಮ ಸಂಸ್ಥೆಯಾಗಿ ರೂಪುಗೊಂಡಿರುವುದು ಅವರಿಗೆ ಸಂತಸ ತಂದಿದೆ.

'ಆಕಸ್ಮಿಕವಾಗಿ ಪತ್ರಿಕೋದ್ಯಮಕ್ಕೆ ಬಂದರೂ, ಅದನ್ನು ವಿಭಿನ್ನವಾಗಿ ಕಟ್ಟಿಕೊಡಬೇಕು ಎಂಬ ಆಸಕ್ತಿ ಆರಂಭದಿಂದಲೂ ಇತ್ತು. ಹಲವು ಸವಾಲುಗಳ ನಡುವೆಯೂ ನಾವು ಇಂದು ಉತ್ತಮವಾಗಿ ಮುನ್ನಡೆಯುತ್ತಿದ್ದೇವೆ' ಎನ್ನುವ ಶ್ರೀಹರಿ, ಡಿಜಿಟಲ್ ಮಾಧ್ಯಮದ ಬೆಳವಣಿಗೆಯನ್ನು ಅವಕಾಶವಾಗಿ ನೋಡುತ್ತಾರೆ.

ಡಿಜಿಟಲ್ ಮಾಧ್ಯಮದ ಬೆಳವಣಿಗೆಯಿಂದ ಪತ್ರಿಕೋದ್ಯಮಕ್ಕೆ ಅಪಾಯವಿದೆಯೇ ಎಂಬ ಪ್ರಶ್ನೆಗೆ, 'ಮುಂದಿನ 20 ವರ್ಷಗಳವರೆಗೆ ಡಿಜಿಟಲ್ ಮಾಧ್ಯಮ ಪತ್ರಿಕೋದ್ಯಮಕ್ಕೆ ಅಪಾಯವಿಲ್ಲ. ಬದಲಾಗಿ, ಎರಡೂ ಮಾಧ್ಯಮಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬೆಳೆಯಬಹುದು' ಎಂಬ ವಿಶ್ವಾಸ ಅವರದು.

ಈಗಾಗಲೇ ವಿಡಿಯೋ ಸ್ಟುಡಿಯೋ ಸೇರಿದಂತೆ ಅಗತ್ಯ ಮೂಲಸೌಕರ್ಯ ಹೊಂದಿರುವ ಜಿಎಸ್ಎಸ್ ಮಾಧ್ಯಮ ತಂಡಕ್ಕೆ ಸಮರ್ಥ ನಾಯಕತ್ವ ನೀಡುವುದು ಮುಂದಿನ ಸವಾಲು. ಅದಕ್ಕಾಗಿ ಡಿಜಿಟಲ್ ಮಾಧ್ಯಮದ ಸಾಧ್ಯತೆಗಳನ್ನು ಅರ್ಥಮಾಡಿಕೊಂಡು, ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ ಹೊಂದಿರುವ ಸಿಇಒಗಾಗಿ ಶ್ರೀಹರಿ ಹುಡುಕಾಟ ನಡೆಸುತ್ತಿದ್ದಾರೆ.

ಮಾಧ್ಯಮದ ಕನಸಿಗೆ ರೆಕ್ಕೆಗಳಿವೆ, ಅದಕ್ಕೆ ಹಾರಾಟದ ದಿಕ್ಕು ತೋರಿಸುವ ನಾಯಕನ ಹುಡುಕಾಟ ಈಗ ಆರಂಭವಾಗಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ರವಿಶಂಕರ್‌ ಬೆಟ್ಟಂಪಾಡಿ ಮಾಧ್ಯಮ ಕ್ಷೇತ್ರದಲ್ಲಿ 20 ವರ್ಷಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿದ್ದು, ಕನ್ನಡದ ಹಲವು ಪ್ರಮುಖ ಪತ್ರಿಕೆಗಳು ಹಾಗೂ ನ್ಯೂಸ್‌ ಚಾನೆಲ್‌ನಲ್ಲಿ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಡೇ2ಡೇ ನ್ಯೂಸ್‌ನ COO ಹಾಗೂ ಬಿಸಿನೆಸ್‌ ಹೆಡ್‌ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ.