Diwali: ಬೆಳಕಿನ ಹಬ್ಬ ದೀಪಾವಳಿ ಹಬ್ಬಗಳಲ್ಲಿ ಅತೀ ಮಹತ್ವದ ಹಬ್ಬವಾಗಿದೆ. ಭಾರತೀಯರೆಲ್ಲರೂ ಸಂಭ್ರಮದಿಂದ ಆಚರಿಸುವ ಹಬ್ಬವೆಂದರೆ ಅದು ದೀಪಾವಳಿ. ತಮ ಅಳಿಸಿ ಜ್ಯೋತಿ ಬೆಳಗಿಸಿ ಬಾಂಧವ್ಯ ಮೂಡಿಸುವ ಹಬ್ಬ ದೀಪಾವಳಿ ಎಂದರೂ ತಪ್ಪಾಗಲಾರದು.
ದೀಪಾವಳಿ ಹಬ್ಬಕ್ಕೆ ಅದರದ್ದೇ ಆದ ವಿಶೇಷತೆ ಅಡಗಿದೆ. ಕೃಷಿ ಬದುಕಿನ ಆಗರವಾಗಿದ್ದ ನಮ್ಮ ತುಳುನಾಡಿನ ಸಂಸ್ಕೃತಿ ಪರ್ಬ ಎಂಬ ಹೆಸರಿನ ಹಿರಿಮೆ ದೀಪಾವಳಿಯ ಮಹತ್ವವನ್ನು ತಿಳಿಸುತ್ತದೆ. ಬರ ಬರುತ್ತಾ ಭತ್ತ ಬೆಳೆಯುವ ಗದ್ದೆ ದೂರವಾಗಿ ಕೃಷಿ ಚಟುವಟಿಕೆ ಮರೆಯಾಗಿ ಯಾಂತ್ರಿಕ ಜೀವನ ಶೈಲಿಯಲ್ಲಿ ದೀಪಾವಳಿ ಸಂಭ್ರಮ ಆಡಂಬರದ ರೀತಿಯಲ್ಲಿ ಆಚರಣೆ ಮಾಡುತ್ತಿರುವುದು ವಿಷಾದನೀಯ ಬೆಳವಣಿಗೆ.
ಮೂರು ದಿನಗಳ ದೀಪಾವಳಿಯು ನರಕ ಚತುರ್ದಶಿ ಯಿಂದ ಆರಂಭವಾಗಿ ಬಲಿ ಚಕ್ರವರ್ತಿಯ ಆಗಮನ, ಲಕ್ಷ್ಮಿ ಪೂಜೆ , ಗೋಪೂಜೆ, ಬಲೀಂದ್ರ ಪೂಜೆ, ಕೂ ಕೂ ಎಂದು ಕೂ ಹಾಕುತ್ತಾ ಬಲಿಯೇಂದ್ರ ನನ್ನು ಸಂಧಿ, ಪಾಡ್ದನ ಹೇಳುತ್ತಾ ಕರೆಯುವ ವಿಶಿಷ್ಟತೆ, ಮರಣ ಹೊಂದಿರುವ ಹಿರಿಯರಿಗೆ ಪಾಡ್ಯ ಬಡಿಸುವ ರೀತಿ ನಮ್ಮ ಕೃಷಿ ಅವಲಂಬಿತ ಹಿರಿ ಜೀವಿಗಳು ಬದುಕಿ ಬಂದ, ಬಾಳಿದ ರೀತಿಯನ್ನು ದೀಪಾವಳಿ ಹಬ್ಬ ತಿಳಿಸಿಕೊಡುತ್ತದೆ. ದೀಪಾವಳಿ ವಿಶೇಷ ತಿನಿಸು ಮೂರು ದಿನಗಳಲ್ಲಿ ಮುಗಿಯದ ದೋಸೆ ಅಟ್ಟಿ ಈಗಿನ ಕಾಲದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೋಸೆ ಮಾಡುವವರೇ ಇಲ್ಲ ಎಂಬ ಕಾಲಘಟ್ಟದಲ್ಲಿ ನಾವಿದ್ದೇವೆ.ಬೆಲ್ಲ, ತೆಂಗಿನಕಾಯಿ ತುರಿ ಮಿಶ್ರಿತ ಅವಲಕ್ಕಿ, ಬಾಳೆಹಣ್ಣು ದೀಪಾವಳಿ ಹಬ್ಬಕ್ಕೆ ಮೆರಗು ತರುವ ಸರಳ ಪೌಷ್ಟಿಕ ಆಹಾರಗಳು.
ಹಬ್ಬಗಳು ಪರಸ್ಪರ ಸಾಮರಸ್ಯ, ಅನುಬಂಧ ಸಾರುವ ದ್ಯೋತಕವಾಗಿ ಪ್ರತಿಧ್ವನಿಸಿ ಬೇಕು.ಜಾತಿ , ವರ್ಗ ಸಂಘರ್ಷಗಳ ಮಧ್ಯೆ ಜಾತಿ ಗುಂಪುಗಳ ಹಲವು ಆಡಂಬರದ ನಡುವೆ ಹಬ್ಬಗಳ ಆಚರಣೆ ತನ್ನ ಮೌಲ್ಯ, ಗಟ್ಟಿತನ ಕಳೆದುಹೋಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನವೀಯ ಮೌಲ್ಯಗಳಲ್ಲಿ ಹಾಗೂ ಕೌಟುಂಬಿಕ ಆತ್ಮೀಯತೆ ಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಬೆಳಗ ಬೇಕಾಗಿದೆ.ಮನೆ ಮನಗಳಲ್ಲಿ ಪ್ರೀತಿ ಒಲುಮೆಯ ಬಾಂಧವ್ಯ, ಅನುರಾಗ ಬೆಸೆಯುವ ಹಣತೆಯ ದೀಪ ಹಚ್ಚೋಣ ... ಹಲವಾರು ರೀತಿಯ ಸಾಮಾಜಿಕ,ಆರ್ಥಿಕ ರಾಜಕೀಯ, ಶೈಕ್ಷಣಿಕ ಸಮಸ್ಯೆಗಳು ದೂರವಾಗಿ ಅಭಿವೃದ್ಧಿ, ಪ್ರಗತಿ ಹಾದಿಯ ದೀಪಾವಳಿ ಮೂಡಲಿ ಎಂಬ ಆಶಯದೊಂದಿಗೆ ಸಮಸ್ತ ರಿಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..
ಲೇಖಕರು: ಹಂಸರಾಗ ಶೆಟ್ಟಿ
ಗೋಳಿತೊಟ್ಟು