ಎತ್ತ ಸಾಗುತ್ತಿದ್ದೇವೆ ನಾವು?...
Diwali: ಎತ್ತ ಸಾಗುತ್ತಿದ್ದೇವೆ ನಾವು? ಪ್ರಕೃತಿಯ ಮಡಿಲಿನಿಂದ ದೂರವಾಗಿ ಕೃತಕತೆಯ ಜಾಲದೊಳಗೆ ಬಂಧಿಗಳಾಗುತ್ತಿದ್ದೇವೆಯೇ?.. ಇಲ್ಲಿದೆ ದೀಪಾವಳಿ ವಿಶೇಷ ಲೇಖನ.
ಎತ್ತ ಸಾಗುತ್ತಿದ್ದೇವೆ ನಾವು? ಪ್ರಕೃತಿಯ ಮಡಿಲಿನಿಂದ ದೂರವಾಗಿ ಕೃತಕತೆಯ ಜಾಲದೊಳಗೆ ಬಂಧಿಗಳಾಗುತ್ತಿದ್ದೇವೆಯೇ? ಪ್ರಕೃತಿ ಮಾತೆಯ ಮಮತೆಯ ಅಕ್ಕರೆಯ ತೋಳುಗಳಿಂದ ಬಿಡಿಸಿಕೊಂಡು ಕೃತಕತೆಯ ಕಬಂಧ ಬಾಹುಗಳಲ್ಲಿ ಸಿಲುಕಿಕೊಂಡಿದ್ದೇವೆಯೇ? ಎಲ್ಲೆಲ್ಲೂ ಕೃತಕತೆಯ ಅಟ್ಟಹಾಸ ತಾಂಡವ ವಾಡುತ್ತಿರುವಾಗ ಕಾಲಧರ್ಮವನ್ನು ಅನುಸರಿಸುವುದೋ, ಶಿಷ್ಟಾಚಾರವನ್ನು ಅನುಷ್ಠಾನಗೊಳಿಸುವುದೋ ಎಂಬುದನ್ನು ಅರಿಯದೆ ಗೊಂದಲದ ಗೂಡಿನೊಳಗೆ ಬಿದ್ದಿದ್ದೇವೆ.
ಹಿಂದೊಂದು ಕಾಲವಿತ್ತು. ಮನುಷ್ಯ ನಾನು, ನನ್ನದು ಎಂಬ ಸ್ವಾರ್ಥವಿಲ್ಲದೆ ನಾವು, ನಮ್ಮವರು, ನಮಗಾಗಿ ಎಂಬ ಭಾವದೊಂದಿಗೆ ಜೀವಿಸುತ್ತಿದ್ದ. ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬಾಳುತ್ತಿದ್ದ. 'ಕೆರೆಯ ನೀರನ್ನು ಕೆರೆಗೆ ಚೆಲ್ಲು' ಎಂಬ ಮಾತಿಗೆ ಅನ್ವರ್ಥವೆಂಬಂತೆ ನಡೆಯುತ್ತಿದ್ದ. ಆದರೆ ಇಂದಿನ ಬದಲಾದ ಕಾಲಘಟ್ಟದಲ್ಲಿ ಪರಿಸ್ಥಿತಿ ಹಾಗಿಲ್ಲ. ಮಾನವ ಪ್ರಕೃತಿಯಿಂದ ಹೇಗೋ ದೂರವಾಗಿದ್ದಾನೆ. ಇದರ ಜೊತೆಗೆ ತನ್ನವರನ್ನೂ, ಕೊನೆಗೆ ರಕ್ತ ಸಂಬಂಧಿಗಳನ್ನೂ ದೂರ ಮಾಡಿಕೊಂಡು ಸ್ವಾರ್ಥದ ಬದುಕಿನಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದಾನೆ. ದುಡ್ಡೇ ದೊಡ್ಡಪ್ಪ ಎಂಬುದೇ ಕಾಲಧರ್ಮವಾಗಿ ನಿತ್ಯ ಪಠಿಸುವ ಮಂತ್ರವಾಗಿ ದುಡ್ಡಿನ ಹಿಂದೆ ಓಡುವುದೇ ಜೀವನವಾಗಿ ಬಿಟ್ಟಿದೆ. ಮನುಷ್ಯನ ಅಂತ:ಕರಣದಲ್ಲಿ ಈಗ ಯಾವುದೇ ಪ್ರೀತಿ, ವಾತ್ಸಲ್ಯ, ಮಮತೆಗಳಿಗೆ ಜಾಗವೇ ಇಲ್ಲ. ಮಾನಸಿಕ ನೆಮ್ಮದಿ, ಆತ್ಮೀಯರ ಜೊತೆಗಿನ ಒಡನಾಟ, ಸಂಬಂಧಿಗಳೊಂದಿಗಿನ ವಾತ್ಸಲ್ಯ, ಗೆಳೆತನ, ಗುರುಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿ, ಕರುಣೆ, ದಯೆ, ದಾಕ್ಷಿಣ್ಯಗಳೆಂಬಿತ್ಯಾದಿ ಪದಗಳು ಆಧುನಿಕ ಬದುಕಿನಲ್ಲಿ ಮಾನವನ ಜೀವನವೆಂಬ ಶಬ್ದಕೋಶದಿಂದಲೇ ಮರೆಯಾದಂತೆ ಕಾಣುತ್ತಿದೆ.
Time....Time... Time... time is money! ಎಂಬ ಹಂತಕ್ಕೆ ನಾವಿಂದು ಬಂದು ನಿಂತಿದ್ದೇವೆ. ಇಂದಿನ ಮಾನವನಿಗೆ ಕೂತರೂ, ನಿಂತರೂ ಸಂಪಾದನೆಯದ್ದೇ ಚಿಂತೆ; ಮಲಗಿದರೂ ದುಡ್ಡಿನದ್ದೇ ಕನಸು. ದಿನಬೆಳಗಾದರೆ, ತನ್ನವರ ಮುಖವನ್ನೂ ಸರಿಯಾಗಿ ಲಕ್ಷಿಸದೆ, ಹೊಟ್ಟೆಗೆ ಸಿಕ್ಕಿದ್ದನ್ನು ತುಂಬಿಸಿ, ದಿನವಿಡೀ ಒತ್ತಡದಲ್ಲೇ ದುಡಿದು ಮನೆಗೆ ಬಂದು ಕೂರುತ್ತಲೇ ರಾತ್ರಿಯಾಗುತ್ತದೆ. ಮತ್ತೆ ವಿಶ್ರಾಂತಿ..ನಿದ್ದೆ.. ರಾತ್ರಿ ಕಳೆದು ಬೆಳಕು.. ಇದು ಹೀಗೆ ಮುಂದುವರೆಯುತ್ತದೆ. ದುಡಿದೂ ದುಡಿದೂ ಎಲ್ಲಾ ಕಟ್ಟಿಡುವುದು. ಇದು ಎಲ್ಲಿಯವರೆಗೂ ಸಾಧ್ಯ? ಕೈಕಾಲುಗಳಲ್ಲಿ ಶಕ್ತಿ ಇರುವವರೆಗೆ ಮಾತ್ರ. ಆ ಬಳಿಕ ಮತ್ತೇನು? ಅಲ್ಲಿಯವರೆಗೆ ದೇಹ, ಆರೋಗ್ಯದ ಬಗ್ಗೆ ನಿರ್ಲಕ್ಷಿಸಿದ್ದರ ಪ್ರಭಾವ, ಪರಿಣಾಮ - ಕಟ್ಟಿಟ್ಟ ಸಂಪತ್ತಿನ ಕರಗುವಿಕೆ ಆರಂಭ. ಒಟ್ಟಿನಲ್ಲಿ ಆ ಸಂಪತ್ತು ಕೂಡಿಟ್ಟಷ್ಟೇ ಬಂತು ಹೊರತು ಅನುಭವಿಸಲಾಗಲಿಲ್ಲ.
ಯಾಂತ್ರಿಕ ಬದುಕಿನ ಈ ಯುಗದಲ್ಲಿ ಮಾನವ ಯಂತ್ರಗಳೊಂದಿಗೆ ತಾನೂ ಯಂತ್ರವಾಗಿ, ತನ್ನವರಾರು ಪರರಾರು ಎಂಬುದನ್ನೂ ಗುರುತಿಸಲಾರದಷ್ಟು ದೈನ್ಯ ಸ್ಥಿತಿಗೆ ಬಂದಿದ್ದಾನೆ. ಅನಾಗರಿಕತೆಯಿಂದ ನಾಗರಿಕತೆಯತ್ತ ಬಂದಿದ್ದೇವೆ ಎಂದು ನಾವು ಬಾಯಿ ಬಡಿದುಕೊಂಡರೂ, ಅಂದಿಗೂ ಇಂದಿಗೂ ವ್ಯತ್ಯಾಸ ಇಷ್ಟೇ...ಅವರು ಅವಿದ್ಯಾವಂತ ಅನಾಗರಿಕರು; ನಾವು ವಿದ್ಯಾವಂತ ಸಮಾಜದ ಅನಾಗರಿಕ ಪ್ರಜೆಗಳು. ನಾವು ವಿದ್ಯೆಯನ್ನು ಸಂಪತ್ತು ಗಳಿಸಲು ಅಗತ್ಯವಾಗಿ ಬೇಕಾದ ಮಾರ್ಗ ಎಂದು ನೋಡುತ್ತೇವೆಯೇ ವಿನಃ ಜೀವನ ಪಾಠ ಕಲಿಸುವ ದೃಷ್ಟಿಯಿಂದ ಅಲ್ಲ. ಅವಿದ್ಯಾವಂತರೆಲ್ಲರೂ ಅನಾಗರಿಕರಲ್ಲ, ಅವರಿಗೆ ಅಕ್ಷರ ಜ್ಞಾನವಿಲ್ಲವಷ್ಟೇ ಹೊರತು ಜೀವನ ಮೌಲ್ಯಗಳನ್ನು ಬಹಳ ಚೆನ್ನಾಗಿ ಬಲ್ಲವರಾಗಿದ್ದರು. ಆದರೆ ಆಧುನಿಕ ಮಾನವ ತಾನೇ ಸರಿ ತನ್ನದೇ ಸರಿ ಎನ್ನುತ್ತಾನಷ್ಟೇ.
ಇಂದು ಆಧುನಿಕತೆ, ನಾಗರಿಕತೆಯ ಹೆಸರಿನಲ್ಲಿ ಜಗತ್ತು ನಾಗಾಲೋಟದಿಂದ ಮುನ್ನುಗ್ಗುತ್ತಿದೆ. ಜಾಗತೀಕರಣ, ನಗರೀಕರಣ, ಕೈಗಾರಿಕೀಕರಣಗಳು ಜಗತ್ತಿನಾದ್ಯಂತ ಮೊಳಗುತ್ತಿವೆ. ಇವು ಅಭಿವೃದ್ಧಿಯ ಪತಾಕೆಯನ್ನು ಉನ್ನತಿಯ ಸ್ಥಾನಕ್ಕೇರಿಸುವ ಮಾಧ್ಯಮಗಳೋ ಅಥವಾ ಮಾನವನನ್ನು ಅವನ ನೈಜ ಬದುಕಿನಿಂದ ದೂರವಾಗಿಸಿ, ಅವನೇ ಸೃಷ್ಟಿಸಿದ ಯಂತ್ರ ಮಾನವನ ಜಾಗಕ್ಕೆ ಬದಲಿಯಾಗಿ ನಿಲ್ಲಿಸುವ ಪರಿಯೋ.... ಕಾದು ನೋಡಬೇಕಿದೆ!!
ಲೇಖಕರು: ಶ್ರೀದೇವಿ ಎನ್ ಕಾಣಿಯೂರು
ದ್ವಿತೀಯ ಎಂಎಸ್ಸಿ (ಗಣಿತ ಶಾಸ್ತ್ರ)
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರು
ದೂ.ಸಂ: 9902397219