ಅದ್ಬುತ ಧ್ವನಿಯ ಮೂಲಕ ತುಳುನಾಡಿನ ಸೊಬಗು ಕಟ್ಟಿಕೊಟ್ಟ ದಿವ್ಯಶ್ರೀ ರೈ

Divyashree Rai: ದಿವ್ಯಶ್ರೀ ರೈ ವಜ್ರದುಂಬಿ, ತಮ್ಮ ಅದ್ಬುತ ಧ್ವನಿಯ ಮೂಲಕ ತುಳುನಾಡಿನ ಸೊಬಗು ಕಟ್ಟಿಕೊಟ್ಟಿದ್ದಾರೆ.

Sep 23, 2026 - 17:52
ಅದ್ಬುತ ಧ್ವನಿಯ ಮೂಲಕ ತುಳುನಾಡಿನ ಸೊಬಗು ಕಟ್ಟಿಕೊಟ್ಟ ದಿವ್ಯಶ್ರೀ ರೈ

ಪುತ್ತೂರು: ಇತ್ತೀಚೆಗೆ ನಡೆದ ಮಂಗಳೂರು ಸಚಿವ ಸಭೆಯಲ್ಲಿ ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಸ್ಥಾನಮಾನ ನೀಡುವ ಘೋಷಣೆ ಹೊರಬಂದ ಹಿನ್ನೆಲೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟವಾದ ತುಳುನಾಡಿನ ಕುರಿತ ವಿಡಿಯೋಗೆ ದಿವ್ಯಶ್ರೀ ರೈ ನೀಡಿದ ಧ್ವನಿ ಎಲ್ಲರ ಗಮನವನ್ನು ಸೆಳೆದಿದೆ. 

ಶಿಕ್ಷಣ, ಪತ್ರಿಕೋದ್ಯಮ, ನಿರೂಪಣೆ ಮತ್ತು ವಾಯ್ಸ್‌ಓವರ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ದಿವ್ಯಶ್ರೀ ರೈ ವಜ್ರದುಂಬಿ, ಸದ್ಯ ವಿವೇಕಾನಂದ ಕಾಲೇಜಿನಲ್ಲಿ ಸ್ನಾತಕೋತ್ತರ ಸಮೂಹ ಸಂವಹನ & ಪತ್ರಿಕೋದ್ಯಮ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಸ್ಪಷ್ಟ ಉಚ್ಚಾರಣೆ, ಭಾವಪೂರ್ಣ ಧ್ವನಿ ಹಾಗೂ ನಿರೂಪಣಾ ಶೈಲಿಯ ಮೂಲಕ ತುಳುನಾಡಿನ ಸಂಸ್ಕೃತಿ, ನೆಲ ಮತ್ತು ಭಾಷೆಯ ಸೊಬಗನ್ನು ಕಟ್ಟಿಕೊಟ್ಟಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ನಿರೂಪಕಿ ಹಾಗೂ ವಾಯ್ಸ್‌ಓವರ್ ಆರ್ಟಿಸ್ಟ್ ಆಗಿ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಅವರು, ಹಲವು ಸಾರ್ವಜನಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. 'ಸುದ್ದಿ ಬಿಡುಗಡೆ' ಪತ್ರಿಕೆಯ ದೀಪಾವಳಿ ವಿಶೇಷಾಂಕದ ಮುಖಪುಟ ರೂಪದರ್ಶಿಯಾಗಿಯೂ ಕಾಣಿಸಿಕೊಂಡಿದ್ದಾರೆ.

ಧ್ವನಿ ಕಲಾವಿದೆಯಾಗಿ ದಿವ್ಯಶ್ರೀ ಪಯಣವು ಗಮನಾರ್ಹವಾಗಿದೆ. 'ಕೋಕೋ ಎಫ್ಎಂ' ಸೇರಿದಂತೆ ವಿವಿಧ ವೇದಿಕೆಗಳಿಗಾಗಿ ಸಾಕ್ಷ್ಯಚಿತ್ರಗಳು, ವಿಶೇಷ ವರದಿಗಳು, ಸ್ಪೆಷಲ್ ಸ್ಟೋರಿಗಳು ಮತ್ತು ಹಲವು ಜಾಹೀರಾತುಗಳಿಗೆ ಧ್ವನಿ ನೀಡಿದ್ದಾರೆ. ಪತ್ರಿಕೋದ್ಯಮದ ಅಧ್ಯಾಪನದ ಜೊತೆಗೆ, ಮಾಧ್ಯಮ ಕ್ಷೇತ್ರದ ಪ್ರಾಯೋಗಿಕ ಅನುಭವವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಅವರ ವಿಶೇಷತೆಯಾಗಿದೆ.

2023ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ ದಿವ್ಯಶ್ರೀ, ಶೈಕ್ಷಣಿಕ ಸಾಧನೆಯೊಂದಿಗೆ, ಮಾಧ್ಯಮ ಕ್ಷೇತ್ರದಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಮೂಲತಃ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ತ್ಯಾಗರಾನಗರ ನಿವಾಸಿ ವಿಠಲ ರೈ ಮತ್ತು ಶಾಲಿನಿ ರೈ ದಂಪತಿಯ ಪುತ್ರಿಯಾಗಿರುವ ದಿವ್ಯಶ್ರೀಗೆ ಕುಟುಂಬದ ಪ್ರೋತ್ಸಾಹವು ಬೆನ್ನೆಲುಬಾಗಿದೆ. ಅವರ ಸಾಧನೆಯ ಪಯಣದಲ್ಲಿ ಸಹೋದರಿ ಮಧುಶ್ರೀ ರೈ ಬೆಂಬಲವು ಮಹತ್ವದ ಪಾತ್ರ ವಹಿಸಿದೆ.

ಶಿಕ್ಷಣದಿಂದ ಜ್ಞಾನ, ಪತ್ರಿಕೋದ್ಯಮದಿಂದ ಅನುಭವ, ನಿರೂಪಣೆಯಿಂದ ಅಭಿವ್ಯಕ್ತಿ ಹಾಗೂ ಧ್ವನಿಯಿಂದ ವಿಭಿನ್ನ ಗುರುತು-ಹೀಗೆ ಹಲವು ಆಯಾಮಗಳಲ್ಲಿ ಬೆಳೆಯುತ್ತಿರುವ ದಿವ್ಯಶ್ರೀ ರೈ ಪಯಣ, ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವತಿಯರಿಗೆ ಪ್ರೇರಣೆಯಾಗಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.