ಬೆಂಗಳೂರು: ರಾಜ್ಯದಲ್ಲಿ ಗೂಂಡಾಗಿರಿ ಸರ್ಕಾರ ಅಧಿಕಾರದಲ್ಲಿದೆ. ಅದು ಬಹಳ ದಿನ ನಡೆಯುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು (ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾಳೆ ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾ ಸಂದರ್ಶನ ಮಾಡಲಾಗುವುದು. ಅಲ್ಲಿ ನಮ್ಮ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಿದರು.
ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು, ಜನಪ್ರತಿನಿಧಿಗಳು ಧರಣಿ ಮಾಡಲಿದ್ದಾರೆ. ಆ.13 ರಂದು ಸದನ ಪ್ರಾರಂಭವಾಗಲಿದೆ. ಆ ಬಳಿಕ ಸ್ಪೀಕರ್ ಚುನಾವಣೆ ನಡೆಯಲಿದೆ. ಸೋಮವಾರದಿಂದ ಅಧಿವೇಶನವಿದ್ದು, ವಿಧಾನಸಭೆ ಒಳಗಡೆಯೂ ನಾಗೇಂದ್ರರ ವಿಚಾರ ಪ್ರಸ್ತಾಪಿಸಿ ರಾಜೀನಾಮೆಗೆ ಆಗ್ರಹಿಸಲಿದ್ದೇವೆ ಎಂದು ತಿಳಿಸಿದರು.
ನಾಗೇಂದ್ರ ವಿರುದ್ಧ ಕೇಸ್ ಖುಲಾಸೆ ಆಗಿದೆಯೇ? ಹಾಗಿದ್ದರೆ ಮತ್ತೆ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬಹುದಿತ್ತು. ಈಶ್ವರಪ್ಪ ಅವರ ವಿಚಾರದಲ್ಲಿ ಕೈಕೈ ಮಿಲಾಯಿಸಿದ್ದರು. ಲಕ್ಷ್ಮಣ ಸವದಿ ವಿಚಾರದಲ್ಲೂ ವಿಡಿಯೋ ನೋಡಿ ಸಮಸ್ಯೆ ಆಗಿತ್ತು. ಅವರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದೇವಾ? ನೀವು ಹೇಗೆ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದ್ದೀರಿ ಎಂದು ಕೇಳಿದರು.
ನನಗೆ ಗೊತ್ತಿರುವ ಪ್ರಕಾರ ಸಚಿವ ನಾಗೇಂದ್ರ, ದಿನವು ಕೋರ್ಟ್‌ನಲ್ಲಿಯೇ ಇರಬೇಕು. ಅವರ ವಿರುದ್ಧ ಹಲವಾರು ಪ್ರಕರಣಗಳಿವೆ ಎಂದರು.
ಸಿಬಿಐ, ಇಡಿ, ಸಿಐಡಿ ಹಾಗೂ ಲೋಕಾಯುಕ್ತದ 31 ಕೇಸುಗಳಿವೆ. ಚೆನ್ನೈನಲ್ಲೂ ಮೊಕದ್ದಮೆಗಳಿವೆ. ತಿಂಗಳಿಗೆ 31 ದಿನಗಳು ಅಷ್ಟೇ ಪ್ರಕರಣಗಳಿದ್ದು, ಆ ಮನುಷ್ಯ ಅಸೆಂಬ್ಲಿಗೆ ಬರುವುದು ಯಾವಾಗ? ಖಾತೆ ನೋಡುವುದು ಯಾವಾಗ ಎಂದು ಪ್ರಶ್ನಿಸಿದರು.