ಪ್ರತಿ ರೈತರಿಗೆ ರೂ.2,500 ಇನ್‌ಪುಟ್ ಸಬ್ಸಿಡಿ: ಕೇಂದ್ರದ ನೆರವಿನ ಬಳಿಕ ಮುಂದಿನ ಪರಿಹಾರ ಕ್ರಮ.. ಡಿಸಿಎಂ

Dr.G Parameshwara: ಪ್ರತಿ ರೈತರಿಗೆ ರೂ.2,500 ಇನ್‌ಪುಟ್ ಸಬ್ಸಿಡಿ ನೀಡಲಾಗುವುದು. ಕೇಂದ್ರದ ನೆರವಿನ ಬಳಿಕ ಮುಂದಿನ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

Sep 25, 2026 - 13:01
ಪ್ರತಿ ರೈತರಿಗೆ ರೂ.2,500 ಇನ್‌ಪುಟ್ ಸಬ್ಸಿಡಿ: ಕೇಂದ್ರದ ನೆರವಿನ ಬಳಿಕ ಮುಂದಿನ ಪರಿಹಾರ ಕ್ರಮ.. ಡಿಸಿಎಂ

ಬೆಂಗಳೂರು: ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ, ತಕ್ಷಣದ ನೆರವು ನೀಡಲು ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ಪ್ರತಿಯೊಬ್ಬರಿಗೂ ರೂ.2,500 ಇನ್‌ಪುಟ್ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸುಮಾರು 45 ರಿಂದ 50 ಲಕ್ಷ ರೈತರಿಗೆ ಈ ನೆರವು ತಲುಪಲಿದೆ. ಸರ್ಕಾರದ ಬೊಕ್ಕಸಕ್ಕೆ ಸುಮಾರು ರೂ.1,250 ಕೋಟಿ ವೆಚ್ಚವಾಗಲಿದೆ. ಕೇಂದ್ರದಿಂದ ಎನ್‌ಡಿಆರ್‌ಎಫ್ ನೆರವು ನಿರೀಕ್ಷಿಸುತ್ತಿದ್ದರೂ, ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ತಕ್ಷಣವೇ ಈ ನೆರವು ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ (Dr.G.Parameshwara) ಹೇಳಿದರು.

ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ರೈತರಿಗೆ ಈಗಾಗಲೇ ಹಲವು ರೀತಿಯ ನೆರವು ನೀಡುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಸುಮಾರು ರೂ.22,000 ಕೋಟಿ ವಿದ್ಯುತ್ ಸಬ್ಸಿಡಿ ಕೊಡಲಾಗುತ್ತಿದೆ. ರೂ.1,250 ಕೋಟಿ ಮೊದಲ ಹಂತದ ನೆರವು ಸಣ್ಣ ಮೊತ್ತವಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ದೊರೆಯುವ ಪರಿಹಾರದ ಆಧಾರದ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬರದಿಂದ ರಾಜ್ಯದಲ್ಲಿ ಉಂಟಾಗಿರುವ ಒಟ್ಟು ನಷ್ಟದ ಪ್ರಮಾಣ, ರೂ.40,000 ಕೋಟಿಗೂ ಅಧಿಕವಾಗುವ ಸಾಧ್ಯತೆಯಿದೆ. ಈಗಾಗಲೇ ಮೊದಲ ಹಂತದ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮನವಿ ಸಲ್ಲಿಸಲಾಗುವುದು. ಅಂತಿಮವಾಗಿ ಸಂಪೂರ್ಣ ನಷ್ಟದ ಅಂದಾಜು ಸಿದ್ಧಪಡಿಸಿ, ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ವಯ ರಾಜ್ಯಕ್ಕೆ ಎಷ್ಟು ಪರಿಹಾರ ಬೇಕು ಎಂಬುದನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವು ನೀಡುವ ರೀತಿಯ ಆಧಾರದ ಮೇಲೆ ಮುಂದಿನ ಪರಿಹಾರ ಕ್ರಮಗಳನ್ನು ನಿರ್ಧರಿಸಲಾಗುವುದು. ಈ ಹಂತದಲ್ಲಿ ಪರಿಷ್ಕೃತ ಪರಿಹಾರ ಮೊತ್ತದ ಕುರಿತು ಯಾವುದೇ ಬದ್ಧತೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಐಎಎಸ್ ಅಧಿಕಾರಿಯೊಬ್ಬರನ್ನು ಒಳಗೊಂಡ ತಂಡವನ್ನು ಕಳುಹಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ತಂಡದ ಭೇಟಿ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿ, ತನ್ನ ಮಾರ್ಗಸೂಚಿಗಳ ಪ್ರಕಾರ ಬರ ಪರಿಸ್ಥಿತಿ ಹಾಗೂ ನಷ್ಟವನ್ನು ಮೌಲ್ಯಮಾಪನ ಮಾಡಿದ ಬಳಿಕ ಮುಂದಿನ ಪರಿಹಾರದ ಪ್ರಮಾಣ ಸ್ಪಷ್ಟವಾಗಲಿದೆ ಎಂದು ಹೇಳಿದರು.

ಬರ ಪರಿಹಾರಕ್ಕೆ ಸಂಬಂಧಿಸಿದಂತೆ, ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ತಾವು ಸ್ಪಷ್ಟಪಡಿಸಿದ್ದೇವೆ. ಸರ್ವಪಕ್ಷ ಸಭೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ತಿಳಿಸಿದರು. 

ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಮತ್ತು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ, ಕರ್ನಾಟಕದ ಬರ ಪರಿಸ್ಥಿತಿ & ರೈತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲಾಗುವುದು. ವಿರೋಧ ಪಕ್ಷದವರು ಬರಲು ಸಿದ್ಧರಿದ್ದರೆ, ಅವರನ್ನು ಸಹ ಜೊತೆಯಲ್ಲಿ ಕರೆದೊಯ್ಯಲು ಸರ್ಕಾರ ಸಿದ್ಧವಾಗಿದೆ. ನಿಯೋಗದ ದೆಹಲಿ ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಮಾಹಿತಿ ನೀಡಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.