ಅರಮನೆ ದಸರಾ ಆಚರಣೆ ವೇಳಾಪಟ್ಟಿ ಪ್ರಕಟಿಸಿದ ಪ್ರಮೋದಾದೇವಿ ಒಡೆಯರ್
Dasara Celebration: ಅರಮನೆ ದಸರಾ ಆಚರಣೆ ವೇಳಾಪಟ್ಟಿಯನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ಪ್ರಕಟಿಸಿದರು.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಅರಮನೆಯಲ್ಲೂ ನವರಾತ್ರಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ತಿಳಿಸಿದ್ದಾರೆ.
ಅರಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿದರು. ದಸರಾ ಆಚರಣೆಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದರು.
ಅ.5 ರಿಂದ ನವರಾತ್ರಿ ಆಚರಣೆಗಳು ಶುರುವಾಗಲಿವೆ. ಆ ದಿನ ಬೆಳಗ್ಗೆ 7.30ಕ್ಕೆ ನವಗ್ರಹ ಹೋಮ ಹಾಗೂ ಶಾಂತಿ ಹೋಮ ನಡೆಯಲಿದ್ದು, ಇದರೊಂದಿಗೆ, ಅರಮನೆ ಆವರಣದಲ್ಲಿ ಸ್ವಚ್ಛತಾ ಕಾರ್ಯಗಳು ನಡೆಯಲಿವೆ. ಅದೇ ದಿನ ಬೆಳಗ್ಗೆ 10.10ಕ್ಕೆ ಸಿಂಹಾಸನ ಜೋಡಣೆಗೆ ಚಾಲನೆ ದೊರೆಯಲಿದೆ ಎಂದರು.
ಸಿಂಹಾಸನಾರೋಹಣವು ಅ.11 ರಂದು ಜರುಗಲಿದ್ದು, ಬೆಳಗ್ಗೆ 6 ರಿಂದ 7.12ರ ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ಸಿಂಧ ಜೋಡಣೆ ಮಾಡಲಾಗುವುದು. ಬೆಳಗ್ಗೆ 8.35 ರಿಂದ 9.05 ರೊಳಗೆ ಕಂಕಣ ಧಾರಣೆ,11.45 ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಸಿಂಹಾಸನಾರೋಹಣ ನೆರವೇರಲಿದೆ. ಮಧ್ಯಾಹ್ನ 1.45 ರಿಂದ ಚಾಮುಂಡೇಶ್ವರಿ ಅಮ್ಮನವರನ್ನು ಅರಮನೆಗೆ ಕರೆತಂದು, ನಿತ್ಯ ಪೂಜೆ ಸಲ್ಲಿಸಲಾಗುವುದು ಎಂದು ಹೇಳಿದರು.
ಅ.14 ರಂದು ಬೆಳಗ್ಗೆ 10.10ಕ್ಕೆ ಸರಸ್ವತಿ ಪೂಜೆ, ಅ.17 ರಂದು ಸಂಜೆ ಕಾಳರಾತ್ರಿ ಪೂಜೆ ಮತ್ತು ಅ.18 ರಂದು ದುರ್ಗಾಷ್ಟಮಿ ಪೂಜೆ ನೆರವೇರಲಿದೆ. ಅ.20 ರಂದು ಮಹಾನವಮಿ ಆಚರಣೆ ಇರಲಿದ್ದು, ಗಜಸ್ವಾತ್ತು ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9.15ಕ್ಕೆ ಚಂಡಿ ಹೋಮದ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 12.32 ರಿಂದ 12.52ರ ಶುಭ ಮುಹೂರ್ತದಲ್ಲಿ ಆಯುಧ ಪೂಜೆ ಜರುಗಲಿದ್ದು, ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಹಸು, ಕುದುರೆ, ವಾಹನಗಳು, ಧ್ವಜ ಮತ್ತು ಕತ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಅ.21 ರಂದು ವಿಜಯದಶಮಿ ವೈಭವ:
ವಿಜಯದಶಮಿ ದಿನವಾದ ಅ.21 ರಂದು ಬೆಳಗ್ಗೆ 8ಕ್ಕೆ ಆನೆಗಳು ಅರಮನೆಗೆ ಬರಲಿವೆ. 8.15ಕ್ಕೆ ಕಲ್ಯಾಣ ಮಂಟಪದಲ್ಲಿ ಉತ್ತರ ಪೂಜೆ, ಬೆಳಗ್ಗೆ 9.00 ರಿಂದ 10.10 ರೊಳಗೆ ವಿಜಯದಶಮಿ ಪೂಜೆ ಹಾಗೂ 10.10ಕ್ಕೆ ಶಮೀ ಪೂಜೆ ನಡೆಯಲಿದೆ. ಮಹಾನವಮಿ ಬಳಿಕ ಸಿಂಹಾಸನದ ಸಿಂಹ ವಿಸರ್ಜನೆ ನಡೆಯಲಿದ್ದು, ನ.19 ರಂದು ಸಿಂಹಾಸನವನ್ನು ಯಥಾಸ್ಥಾನಕ್ಕೆ ಇಡಲಾಗುವುದು ಎಂದರು.