ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಣೆ: ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ
Cm D.K.Shivakumar: ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರು: ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Cm D.K.Shivakumar) ಹೇಳಿದ್ದಾರೆ. ಈ ಬಗ್ಗೆ 'ಎಕ್ಸ್'ನಲ್ಲಿಯೂ ಪೋಸ್ಟ್ ಮಾಡಿದ್ದಾರೆ.
ಮೈಸೂರು ಅರಮನೆ ಆವರಣದಲ್ಲಿ ನಂದಿಧ್ವಜ ಪೂಜೆಯ ಸಂದರ್ಭದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಪಿ.ಎಂ.ನರೇಂದ್ರ ಸ್ವಾಮಿ, ಹೆಚ್.ಸಿ.ಬಾಲಕೃಷ್ಣ, ಕೆ.ಎಸ್.ಬಸವಂತಪ್ಪ ಅವರಿಗೆ ಪೂಜಾ ಆವರಣ ಪ್ರವೇಶಿಸಲು, ಪೊಲೀಸ್ ಅಧಿಕಾರಿಗಳು ನಿರ್ಬಂಧಿಸಿದ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇನೆ ಎಂದಿದ್ದಾರೆ.
ಮಂತ್ರಿಗಳಿಗೆ ಪ್ರವೇಶ ನಿರಾಕರಿಸುವ ಮೂಲಕ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿರುವುದು ಖಂಡನೀಯ. ತಕ್ಷಣ ಮಧ್ಯಪ್ರವೇಶಿಸಿ ಸಚಿವರಿಗೆ ಪೂಜಾ ಆವರಣ ಪ್ರವೇಶಿಸಲು ಅನುವು ಮಾಡಿಕೊಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿಚಾರಣೆ ನಡೆಸಿ, ಹೊಣೆಗಾರ ಅಧಿಕಾರಿಗಳ ಕುರಿತು ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕರ್ತವ್ಯ ನಿರ್ವಹಣೆಯಲ್ಲಿ ಶಿಸ್ತು, ಸಂಯಮ ಹಾಗೂ ಜನಪ್ರತಿನಿಧಿಗಳ ಗೌರವ ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ. ಅಧಿಕಾರದ ಹೆಸರಿನಲ್ಲಿ ನಡೆಯುವ ಯಾವುದೇ ಉಡಾಫೆ ಅಥವಾ ಉದ್ಧಟತನವನ್ನು ಸರ್ಕಾರ ಸಹಿಸುವುದಿಲ್ಲ. ವಿಚಾರಣಾ ವರದಿ ಬಂದ ನಂತರ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.