ಹೊಸತನ ಇಲ್ಲದ ಸಂಪುಟದಲ್ಲಿ ಭ್ರಷ್ಟಾಚಾರಿಗಳು: ವಿ.ಪಕ್ಷ ನಾಯಕ ಆರ್‌.ಅಶೋಕ ಟೀಕೆ

R. Ashoka Press Meet: ಹೊಸತನ ಇಲ್ಲದ ಸಂಪುಟದಲ್ಲಿ ಭ್ರಷ್ಟಾಚಾರಿಗಳು ತುಂಬಿಕೊಂಡಿದ್ದಾರೆ ಎಂದು .ಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.

Aug 4, 2026 - 18:38
ಹೊಸತನ ಇಲ್ಲದ ಸಂಪುಟದಲ್ಲಿ ಭ್ರಷ್ಟಾಚಾರಿಗಳು: ವಿ.ಪಕ್ಷ ನಾಯಕ ಆರ್‌.ಅಶೋಕ ಟೀಕೆ

ಬೆಂಗಳೂರು: ಹೊಸ ಸಚಿವ ಸಂಪುಟದಲ್ಲಿ ಭ್ರಷ್ಟಾಚಾರಿಗಳು ತುಂಬಿಕೊಂಡಿದ್ದು, ಅನೇಕರು ಪೇಮೆಂಟ್‌ ಮೂಲಕ ಬಂದು ಸೇರಿದ್ದಾರೆ. ಸಚಿವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಮುಖ್ಯಮಂತ್ರಿಗೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವಿ.ಪಕ್ಷ ನಾಯಕ ಆರ್‌.ಅಶೋಕ (R. Ashoka) ಟೀಕಿಸಿದರು. 

ಇಂದು ಸುದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಹಿಂದೆಂದೂ ಕಂಡಿರದ ಸಚಿವ ಸಂಪುಟ ರಚನೆಯಾಗಿದೆ. ಪರಿಶಿಷ್ಟರ ರೂ.187 ಕೋಟಿ ಲೂಟಿ ಮಾಡಿ, ಚುನಾವಣೆಗೆ ಬಳಸಿರುವುದು ಖಚಿತವಾಗಿದೆ. ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದರು. ಈ ಪ್ರಕರಣದಲ್ಲಿ ಬಿ.ನಾಗೇಂದ್ರ ಜೈಲಿಗೆ ಹೋದರೂ, ಈಗ ಮತ್ತೆ ಸಚಿವ ಸಂಪುಟ ಸೇರಿದ್ದಾರೆ. ಅವರಿಗೆ ಕ್ಲೀನ್ ಚಿಟ್ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.

ಹಳೆ ಮುಖ್ಯಮಂತ್ರಿಗಳು ಅವರನ್ನು ತೆಗೆದುಹಾಕಿದರೆ, ಹೊಸ ಸಿಎಂ ವಾಷಿಂಗ್‌ ಮಿಶನ್‌ ಬಳಸಿ ತೊಳೆದು ಕರೆದುಕೊಂಡಿದ್ದಾರೆ. ಕರಾವಳಿ-ಮಲೆನಾಡು ಭಾಗಕ್ಕೆ ಪ್ರಾತಿನಿಧ್ಯ ನೀಡಿಲ್ಲ. ಅಲ್ಲಿ ನಾವು ಹೇಗಿದ್ದರೂ ಸೋಲಲಿದ್ದೇವೆ ಎಂಬುದನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಯಾದಗಿರಿ, ರಾಯಚೂರು, ವಿಜಯನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಮೊದಲಾದ ಹಿಂದುಳಿದ ಜಿಲ್ಲೆಗಳಲ್ಲಿ ಸಚಿವರೇ ಇಲ್ಲ. ಬಹಳ ಸಮುದಾಯಗಳನ್ನು ಪ್ರತಿನಿಧಿಸುವವರೂ ಇಲ್ಲ. ಕೆಲವು ಶಾಸಕರು, ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದು, ಒಬ್ಬರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು. 

ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ, ಕೇಸು ದಾಖಲಿಸುತ್ತಾರೆ. ಈಗ ಅನೇಕ ಕಡೆ ಕಾಂಗ್ರೆಸ್‌ ಕಾರ್ಯಕರ್ತರೇ ಕೈಗೇ ಏನೇನೂ ತೆಗೆದುಕೊಂಡು ಸಿಎಂ ಭಾವಚಿತ್ರಕ್ಕೆ ಹೊಡೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಚಿವ ಸಂಪುಟದಲ್ಲಿ ಹೊಸತನವಿಲ್ಲ. ಅದೇ ಮುಖಗಳು, ಭ್ರಷ್ಟಾಚಾರಿಗಳನ್ನು ಮರಳಿ ಸಂಪುಟಕ್ಕೆ ತರಲಾಗಿದೆ. ಇದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಪಟ್ಟಿಯಲ್ಲ, ಪೇಮೆಂಟ್‌ ಲಿಸ್ಟ್‌ ಎಂದು ತಿಳಿದುಬಂದಿದೆ. ಏಕೆಂದರೆ ದಿಢೀರನೆ ಮಂಕಾಳು ವೈದ್ಯ ಹೆಸರು ತೆಗೆದುಹಾಕಿ, ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹೆಸರು ಸೇರಿಸಲಾಗಿದೆ. ಇದು ಕಾಂಚಾಣದ ಮಹಿಮೆ ಎಂದು ತಿಳಿಸಿದರು. 

ಮಹಿಳೆಯರಿಗೆ ಮಾಡಿದ ದ್ರೋಹ: 

ಸಚಿವ ಸಂಪುಟದಲ್ಲಿ ಓರ್ವ ಮಹಿಳೆಗೂ ಸ್ಥಾನ ನೀಡಿಲ್ಲ. ಚುನಾವಣೆಗೆ ಮುನ್ನ ಮಹಿಳೆಯರ ಸಬಲೀಕರಣದ ಬಗ್ಗೆ ಉದ್ದುದ ಮಾತನಾಡಿದ್ದ  ಕಾಂಗ್ರೆಸ್‌ ಹೈಕಮಾಂಡ್, ಈಗ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ. ಶೇಕಡ 12% ಇರುವ ಮುಸ್ಲಿಮರಿಗೆ 3 ಸ್ಥಾನ ನೀಡಲಾಗಿದೆ. 50% ಜನಸಂಖ್ಯೆಯಿರುವ ಮಹಿಳೆಯರಿಗೆ ಶೂನ್ಯ ಸ್ಥಾನ ನೀಡಲಾಗಿದೆ. ಗಾಯತ್ರಿ ಶಾಂತಗೌಡರು ಪ್ರತ್ರಿಕಾಗೋಷ್ಠಿ ಮಾಡಿ ಮಾತಾಡಿದ್ದರು. ಕೊನೆಗೆ ಅವರಿಗೆ ಖಾತೆಯೇ ಇಲ್ಲವಾಯಿತು. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ದ್ರೋಹ ಎಂದರು.

ಕಾಂಗ್ರೆಸ್‌ ನಾಯಕರು ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡಿರುತ್ತಾರೆ. ಅದೇ ಕಾಂಗ್ರೆಸ್‌ ತನ್ನ ಲೆಟರ್‌ಹೆಡ್‌ನಲ್ಲಿ ಸ್ಪೀಕರ್‌, ಡೆಪ್ಯುಟಿ ಸ್ಪೀಕರ್,  ಪರಿಷತ್ತಿನ ಛೇರ್ಮನ್, ವೈಸ್ ಛೇರ್ಮನ್  ಹೆಸರನ್ನು ಉಲ್ಲೇಖ ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದೆ ಎಂದು ಹೇಳಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.