Brahmin Mahasabha: ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಶೂನ್ಯ ಸ್ಥಾನ: ಕಾಂಗ್ರೆಸ್ ನಡೆಗೆ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಬೇಸರ
No Brahmin MLA Inducted into the Cabinet ಸಿಎಂ ಡಿಕೆ ಶಿವಕುಮಾರ್ ಅವರ ಸಂಪುಟ ವಿಸ್ತರಣೆಯಲ್ಲಿ ಬ್ರಾಹ್ಮಣ ಸಮುದಾಯದ ಯಾವುದೇ ಶಾಸಕರಿಗೆ ಅವಕಾಶ ನೀಡದೆ ಸಮುದಾಯವನ್ನು ಕಡೆಗಣಿಸಿರುವುದಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತೀವ್ರ ಬೇಸರ ವ್ಯಕ್ತಪಡಿಸಿದೆ.
ಬೆಂಗಳೂರು: ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಪ್ರಾತಿನಿಧ್ಯವೇ ಇಲ್ಲದಂತಾಗಿರುವುದು ತೀವ್ರ ಆಘಾತ ಮತ್ತು ಆಶ್ಚರ್ಯವನ್ನುಂಟು ಮಾಡಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(Akhila Karnataka Bhramana Mahasabha) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ್ ಅವರು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸಚಿವ ಸಂಪುಟದಿಂದ ಬ್ರಾಹ್ಮಣರನ್ನು ಹೊರಗಿಟ್ಟಿರುವ ಬಗ್ಗೆ ಎಂದು ಆರಂಭವಾಗುವ ಪತ್ರದಲ್ಲಿ ಸಮುದಾಯದ ಕೊಡುಗೆಯನ್ನು ವಿವರಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದಿಂದ ಅನೇಕ ಬ್ರಾಹ್ಮಣರು ಕಾಂಗ್ರೆಸ್ ಪಕ್ಷದ ಪರವಾಗಿ ಹೋರಾಟ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರವೂ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಅನೇಕ ಬ್ರಾಹ್ಮಣರು ನಿಷ್ಠಾವಂತರಾಗಿ ದುಡಿದಿದ್ದಾರೆ. ಕನ್ನಡ ಕುಲ ಪುರೋಹಿತರು ಎಂದು ಹೆಸರುವಾಸಿಯಾದ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣಕ್ಕೆ ನಿಸ್ವಾರ್ಥವಾಗಿ ದುಡಿದ ಬ್ರಾಹ್ಮಣ ಎಂಬುದನ್ನು ಮರೆಯುವಂತಿಲ್ಲ ಎಂದಿದ್ದಾರೆ.
ದಿವಂಗತ ಆರ್. ಗುಂಡೂರಾವ್ ಈ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಮಾಡಿದ್ದಾರೆ. ಬದರಿನಾಥ್, ಹಾರನಹಳ್ಳಿ ರಾಮಸ್ವಾಮಿ, ಎಸ್. ರಮೇಶ್, ಆರ್.ವಿ. ದೇಶಪಾಂಡೆ, ರಮೇಶ್ ಕುಮಾರ್, ದಿನೇಶ್ ಗುಂಡೂರಾವ್ ಹಾಗೂ ಇನ್ನೂ ಅನೇಕರು ಬ್ರಾಹ್ಮಣ ಸಮಾಜದಿಂದ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಒಬ್ಬರು ಮಾತ್ರ ಬ್ರಾಹ್ಮಣರು ಸಚಿವರಾಗಿದ್ದರು. ಮುಂದಿನ ದಿನಗಳಲ್ಲಿ ಒಬ್ಬ ಬ್ರಾಹ್ಮಣರೂ ಸಚಿವ ಸಂಪುಟದಲ್ಲಿ ಇರುವುದಿಲ್ಲ ಎಂದು ಕೆಲ ಹಿರಿಯರು ಬ್ರಾಹ್ಮಣ ಸಭೆಗಳಲ್ಲಿ ಮಾತನಾಡುತ್ತಿದ್ದದ್ದು ಈಗ ಸತ್ಯವಾಗಿ ಬಿಟ್ಟಿದೆ. ಇದು ಬಹಳ ಆಶ್ಚರ್ಯಕರ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬುದು ಕಾಂಗ್ರೆಸ್ ಪಕ್ಷ ಮತ್ತು ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರವಾದರೂ, ಬ್ರಾಹ್ಮಣರನ್ನು ಸಚಿವ ಸಂಪುಟದಿಂದ ಸಂಪೂರ್ಣವಾಗಿ ಹೊರಗಿಡಲು ಕಾರಣವಾದರೂ ಏನು ಎಂಬುದು ತಿಳಿಯದಾಗಿದೆ. ಬ್ರಾಹ್ಮಣರನ್ನು ಹೊರಗಿಡಲು ಮತ್ತು ಕಡೆಗಣಿಸಲು ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆಯೇ ಎಂದು ತಿಳಿಯದಾಗಿದೆ ಎಂದು ಮಹಾಸಭಾ ಅಧ್ಯಕ್ಷರು ಪ್ರಶ್ನಿಸಿದ್ದಾರೆ.
ಬ್ರಾಹ್ಮಣರನ್ನು ಸಚಿವ ಸಂಪುಟದಿಂದ ಹೊರಗಿಡುವ ಈ ನಿರ್ಧಾರದ ಬಗ್ಗೆ ನಮ್ಮ ಬ್ರಾಹ್ಮಣ ಸಮಾಜಕ್ಕೆ ಖಂಡಿತವಾಗಿ ಬೇಸರವಾಗಿದೆ ಎಂದು ತಿಳಿಸುವ ಅನಿವಾರ್ಯತೆ ಉಂಟಾಗಿದೆ. ಆದರೂ "ಸರ್ವೇ ಜನ ಸುಖಿನೋ ಭವಂತು" ಎಂಬಂತೆ ನಮ್ಮ ಬ್ರಾಹ್ಮಣರಿಗೆ ನಿರಾಶೆಯಾದರೂ ನಿಮ್ಮ ಆಡಳಿತ ಸುಸೂತ್ರವಾಗಿ ನಡೆಯಲಿ ಎಂದು ನಾವು ಆಶಿಸುತ್ತೇವೆ ಎಂದು ಅಧ್ಯಕ್ಷ ಎಸ್. ರಘುನಾಥ್ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಸುಧೀರ್ಘ ಪತ್ರದಲ್ಲಿ ತಿಳಿಸಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.