ರಾಜ್ಯ ಸರಕಾರದಿಂದ ನ್ಯಾಯಾಂಗಕ್ಕೂ ಅಪಚಾರ: ಎಚ್.ಡಿ. ಕುಮಾರಸ್ವಾಮಿ

ದಾವಣಗೆರೆ ಉಪ ಚುನಾವಣೆ ಫಲಿತಾಂಶ ನಂತರ ಕಾಂಗ್ರೆಸ್ಸಿಗೆ ದಿಢೀರ್ ಜ್ಞಾನೋದಯ, ಒಂದು ವರ್ಗದ ಓಲೈಕೆಗೆ ಹಿಜಾಬ್ ವಿಚಾರ ಮುನ್ನೆಲೆಗೆ ತಂದ ಕಾಂಗ್ರೆಸ್ ಸರ್ಕಾರ ಎಂದ ಕೇಂದ್ರ ಸಚಿವ ಕುಮಾರಸ್ವಾಮಿ

May 14, 2026 - 20:16
ರಾಜ್ಯ ಸರಕಾರದಿಂದ ನ್ಯಾಯಾಂಗಕ್ಕೂ ಅಪಚಾರ: ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು, ಮೇ 14:  ದಾವಣಗೆರೆ ಉಪ ಚುನಾವಣೆಯ ಫಲಿತಾಂಶ ಹೊರಬಂದ ನಂತರ ಕಾಂಗ್ರೆಸ್ ಪಕ್ಷಕ್ಕೆ ದಿಢೀರ್ ನಾನು ಜ್ಞಾನೋದಯವಾಗಿ ವಿವಾದಿತ ಹಿಜಾಬ್ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದೆ, ನ್ಯಾಯಾಂಗಕ್ಕೂ ಈ ಸರ್ಕಾರ ಅಪಚಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜಿಪಿ ಭವನದಲ್ಲಿ ಗುರುವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ಹಿಜಾಬ್ ಬಗ್ಗೆ ನಾನು ಅಸೆಂಬ್ಲಿಯಲ್ಲಿ ಹಿಂದೆಯೇ ಚರ್ಚೆ ಮಾಡಿದ್ದೇನೆ. ವಿಸ್ತೃತವಾಗಿ ಮಾತನಾಡಿದ್ದೇನೆ. ನಾನು ಏನು ಹೇಳಿದ್ದೇನೆ ಎಂಬುದು ಎಲ್ಲರಿಗೂ ತಿಳಿದಿದೆ. ಹೊಸದಾಗಿ ಹೇಳುವುದು ಏನು ಇಲ್ಲ ಎಂದರು.

ಇತ್ತೀಚಿಗೆ ನಡೆದ ಪರೀಕ್ಷೆಯಲ್ಲಿ ಒಬ್ಬ ಹುಡುಗನ ಮೈ ಮೇಲಿದ್ದ ಜನಿವಾರ ತೆಗೆಸಿದರು. ಸಮರ್ಥನೆ ಮಾಡಲು ಆಗುಗುತ್ತದೆಯೇ? ಎಲ್ಲವನ್ನು ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಲಾಭದ ದೃಷ್ಟಿ ಬಿಟ್ಟರೆ ಸಮಾಜದ ಶಾಂತಿ ಮುಖ್ಯವಲ್ಲ. ದಾವಣಗೆರೆ ಉಪ ಚುನಾವಣೆಯಲ್ಲಿ ಒಂದು ಸಮುದಾಯದ ಜನರು ಮತ ಚಲಾವಣೆ ಮಾಡಿರುವ ರೀತಿಯನ್ನು ನೋಡಿ ಇವರು ಗಾಬರಿಗೆ ತುತ್ತಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ನಾನು ಎಲ್ಲ ಧರ್ಮಗಳನ್ನ ಗೌರವಿಸುತ್ತೇನೆ. ನನ್ನ ಅಭಿಪ್ರಾಯ ಏನು ಎಂಬುದನ್ನು ನೂರಾರು ಬಾರಿ ಅನೇಕ ವೇದಿಕೆಗಳಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ಇವರು ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದೆ. ಆ ಮೂರು ವರ್ಷದಿಂದ ಹಿಜಾಬ್ ವಿಚಾರದಲ್ಲಿ ಏನು ಮಾಡುತ್ತಿದ್ದರು? ದಾವಣೆಗೆರೆಯಲ್ಲಿ ಆಗಿದ್ದು ನೋಡಿ ನಿರ್ಧಾರ ಮಾಡಿದ್ದಾರೆ. 16ನೇ ತಾರೀಖು ಮುಸ್ಲೀಂ ಸಮಾವೇಶ ಇದೆ, ಅದಕ್ಕೆ ಹೆದರಿ ಈ ನಿರ್ಧಾರ ಮಾಡಿದ್ದಾರೆ. ಅಷ್ಟು ಧೈರ್ಯ ಇದ್ದಿದ್ದರೆ ಅಧಿಕಾರಕ್ಕೆ ಬಂದ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಮೂರು ವರ್ಷದಿಂದ ಯಾಕೆ ಸುಮ್ಮನೆ ಇದ್ದರು? ಒಂದು ವರ್ಗವನ್ನು ಸಮಾಧಾನ, ಓಲೈಕೆ ಮಾಡುವುದಕ್ಕೆ ಈ ನಿರ್ಧಾರ ಮಾಡಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆಯಲ್ಲಿದೆ. ಹಿಜಾಬ್ ಬಗ್ಗೆ ತಡೆಯಾಜ್ಜೆ ಜಾರಿಯಲ್ಲಿದೆ. ಅದು ತೆರವಾಗದೇ ಇವರು ಇಂಥ ಆದೇಶ ಮಾಡುತ್ತಾರೆ. ಇದು ನ್ಯಾಯಾಂಗಕ್ಕೆ ಮಾಡಿದ ಅಪಚಾರ ಎಂದು ಅವರು ಕುಟುಕಿದರು.