Sadguru Sri Madhusudan Sai: ಸಮಾಜದ ಕೆಲಸಕ್ಕಾಗಿ ಸಾಲ ಮಾಡಿದ್ದೇವೆ, ಭಿಕ್ಷೆ ಎತ್ತಿದ್ದೇವೆ: ಸದ್ಗುರು ಶ್ರೀ ಮಧುಸೂದನ ಸಾಯಿ
Sadguru Sri Madhusudan Sai: ಭಿಕ್ಷೆ ಬೇಡಿಯಾದರೂ, ಸಾಲ ಮಾಡಿಯಾದರೂ ಸಮಾಜದ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಬೆಂಗಳೂರು: ಭಿಕ್ಷೆ ಬೇಡಿಯಾದರೂ, ಸಾಲ ಮಾಡಿಯಾದರೂ ಸಮಾಜದ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ಹೊಸ ಆಸ್ಪತ್ರೆ ಕಟ್ಟಲು ಸಾಕಷ್ಟು ಸಾಲ ಮಾಡಿದ್ದೇವೆ. ಆದರೆ, ಇದು ಹೊರಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಅಸಹಾಯಕ ಜನರ ಪರವಾಗಿ ಮಾಡಿದ ಸಾಲ ಎಂದು 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ (Madhusudan Sai) ಹೇಳಿದರು.
ನಗರದಲ್ಲಿ ಶನಿವಾರ ನಡೆದ 'ಕಂಪ್ಯಾಷನ್ ಇನ್ ಆಕ್ಷನ್' (ಕ್ರಿಯಾರೂಪದ ಕರುಣೆ) ಕಾರ್ಯಕ್ರಮದಲ್ಲಿ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಅವರ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು, ಹಸಿದು ಶಾಲೆಗೆ ಹೋಗಬಾರದು. ಆರೋಗ್ಯ ಸೇವೆಯಿಂದ ದೂರವಾಗಬಾರದು ಎನ್ನುವುದೇ ನನ್ನ ಕನಸು. ಇದಕ್ಕಾಗಿ ಇನ್ನಷ್ಟು ಕಷ್ಟಪಡಲು ನಾನು ತಯಾರಿದ್ದೇನೆ ಎಂದು ಘೋಷಿಸಿದರು.
ನಿಮ್ಮ ಸೇವೆಗಳು ಸುಸ್ಥಿರವಾಗಿ ಹೇಗೆ ಉಳಿಯುತ್ತವೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಸ್‌ಆರ್ ನಿಯಮಗಳ ಸುಧಾರಣೆ ಹಾಗೂ ಕ್ರಮಬದ್ಧ ಪರಿಣಾಮಕಾರಿ ಅನುಷ್ಠಾನದಿಂದ ಸಾಕಷ್ಟು ನಿರೀಕ್ಷಿಸುತ್ತಿದ್ದೇವೆ. ಭಾರತದ ಜನಸಾಮಾನ್ಯರ ಆರ್ಥಿಕ ಸ್ಥಿತಿ ಈಗ ಸುಧಾರಿಸಿದೆ. ಇಲ್ಲಿನ ಜೆನ್-ಜಿ ತಲೆಮಾರು ಕೊಡುವ ವಿಚಾರದಲ್ಲಿ ಧಾರಾಳವಾಗಿದ್ದಾರೆ. ಅವರು ನಮ್ಮ ನೆರವಿಗೆ ಬರುತ್ತಾರೆ. ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯೋಗ್ಯ ಸಂಸ್ಥೆಗಳನ್ನು ಹುಡುಕುತ್ತಿರುವ ಧನಸಮೃದ್ಧ ವಿದೇಶಿ ಸಂಸ್ಥೆಗಳು ಸಹ ನಮ್ಮ ಜೊತೆಗೆ ಕೈಜೋಡಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಮುಂದಿನ ಐದಾರು ವರ್ಷಗಳಲ್ಲಿ ಅರೋಗ್ಯ ಕ್ಷೇತ್ರದಲ್ಲಿ ಗ್ರಾಮಾಂತರ ಮತ್ತು ನಗರದ ಅಂತರ ಕಡಿಮೆಯಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಕ್ಯಾನ್ಸರ್ ಕಾಯಿಲೆಗೆ ಅತ್ಯಂತ ದುಬಾರಿಯಾದ ಇಮ್ಯುನೋಥೆರಪಿ ಚಿಕಿತ್ಸೆ ವ್ಯವಸ್ಥೆ ಆರಂಭಿಸುವ ಆಲೋಚನೆಯಿದೆ. ಎಲ್ಲರಿಗೂ ಈ ಚಿಕಿತ್ಸೆ ಲಭ್ಯವಾಗುವಂತೆ ಕ್ರಮವಹಿಸುತ್ತೇವೆ ಎಂದರು.
ಮುದ್ದೇನಹಳ್ಳಿಯ ನಮ್ಮ ಆಸ್ಪತ್ರೆಯಲ್ಲಿ ಆಧುನಿಕ ಜಿನೋಮಿಕ್ಸ್ ಚಿಕಿತ್ಸೆ ವ್ಯವಸ್ಥೆ ಆರಂಭಿಸಲಾಗಿದ್ದು. ಇದನ್ನು ವಿಸ್ತರಿಸಲು ಕಾರ್ಪೋರೇಟ್ ಕಂಪೆನಿಗಳ ಜತೆ ಚರ್ಚೆ ನಡೆಸುತ್ತಿದ್ದೇವೆ. ಹಲವು ಅಪರೂಪದ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸಾಕ್ರಮ ಕಂಡುಹಿಡಿಯುವ ಕೆಲಸವು ನಡೆಯುತ್ತಿದೆ. ಐಸಿಎಂಆರ್ ಸೇರಿದಂತೆ ಹಲವು ಸಂಸ್ಥೆಗಳು ನಮಗೆ ಅನುದಾನ ನೀಡುತ್ತಿವೆ ಎಂದು ಮಾಹಿತಿ ಹಂಚಿಕೊಂಡರು.
ಕಲಬುರಗಿಯಲ್ಲಿ ಒಂದು ಶಾಲೆ, ಛತ್ತೀಸಗಡದ ರಾಯಪುರದಲ್ಲಿ ಒಂದು ಆಸ್ಪತ್ರೆ, ಕೆಂಗೇರಿಯಲ್ಲಿ 15 ಮಕ್ಕಳಿಗೆ ಬೆಳಗ್ಗೆ ಉಪಾಹಾರ ಕೊಡುವ ಮೂಲಕ ನಮ್ಮ ಸೇವಾ ಪ್ರಯತ್ನಗಳು ಆರಂಭವಾದವು. ಇಂದು ಅದು ಅಗಾಧವಾಗಿ ಬೆಳೆದಿದೆ. ಈವರೆಗೆ 2,400 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಖರ್ಚು ಮಾಡಿದ್ದೇವೆ ಎಂದು ಸ್ಮರಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಉದ್ಯಮಿಗಳಾದ ಮೋಹನ್ ದಾಸ್ ಪೈ, ಸುಂದರ್ ಕಾಮತ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ದಾನ ಮಾಡುವುದು ನಮ್ಮ ಡ್ಯೂಟಿ: ಮೋಹನ್ ದಾಸ್ ಪೈ:
ಎಲ್ಲ ಶ್ರೀಮಂತರೂ ಒಂದು ಬಡ ಕುಟುಂಬದ ಜವಾಬ್ದಾರಿ, ಒಂದು ಮಗುವಿನ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಂಡರೆ, ಖಂಡಿತ ರಾಮರಾಜ್ಯ ಸ್ಥಾಪನೆಯಾಗಲಿದೆ. ನಿಮ್ಮ ಒಟ್ಟು ಆದಾಯದ ಶೇ 10 ರಿಂದ 20 ರಷ್ಟು ಮೊತ್ತವನ್ನು ದಾನ ಮಾಡಿ ಎಂದು ಆರಿನ್ ಕ್ಯಾಪಿಟಲ್‌ನ ಅಧ್ಯಕ್ಷ ಡಾ ಟಿ.ಎ.ಮೋಹನ್‌ದಾಸ್ ಪೈ ಮನವಿ ಮಾಡಿದರು.
ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಮೂಲಕ ಹಲವು ಮಹತ್ವದ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ನಾವೆಲ್ಲರೂ ಬಲಿಷ್ಠ, ಸಮೃದ್ಧ ಭಾರತದ ಕನಸು ಕಾಣುತ್ತಿದ್ದೇವೆ. ನಾವು ಯಾವ ಕುಟುಂಬದಲ್ಲಿ ಹುಟ್ಟಿದ್ದೇವೆ ಎನ್ನುವುದು ನಮ್ಮ ಆಯ್ಕೆಯಲ್ಲ. ನಮ್ಮ ಪೋಷಕರಿಗೆ ಆರ್ಥಿಕ ಸಬಲತೆ ಇದ್ದರೆ, ನಾವು ವಿದ್ಯಾವಂತರಾದರೆ ಇನ್ನೊಬ್ಬರಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಬೇಕು. ಅದು ನಮ್ಮ ಔದಾರ್ಯವಲ್ಲ ಎಂದು ತಿಳಿಸಿದರು.
ಮಗು ಉಳಿಯಿತೆಂಬ ಆನಂದವನ್ನು ಪೋಷಕರ ಕಣ್ಣಲ್ಲಿ ನೋಡುವುದು ದ್ವಿಶತಕ ಸಿಡಿಸುವುದಕ್ಕಿಂತ ದೊಡ್ಡ ಸಂತೋಷ: ಗವಾಸ್ಕರ್
ಮಗು ಉಳಿಯಬಹುದು ಎನ್ನುವ ಭರವಸೆಯನ್ನೇ ಕಳೆದುಕೊಂಡಿದ್ದ ಪೋಷಕರಿಗೆ ಆ ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿದಾಗ ಆಗುವ ಸಂತೋಷ, ಅವರ ಮೊಗದಲ್ಲಿ ಅರಳುವ ನಗು, ಆನಂದಭಾಷ್ಪವನ್ನು ನೋಡುವುದು ಕ್ರಿಕೆಟ್ ಮೈದಾನದಲ್ಲಿ ದ್ವಿಶತಕ ಬಾರಿಸುವುದಕ್ಕಿಂತ ಹೆಚ್ಚಿನ ತೃಪ್ತಿ ನೀಡುತ್ತದೆ ಎಂದು ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಗುರು ಮಧುಸೂದನ ಸಾಯಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಮೂಲಕ ನಾವು ಇಂಥ ಮಕ್ಕಳ ಆರೋಗ್ಯ ಕಾಪಾಡುವುದಷ್ಟೇ ಅಲ್ಲ, ಶಿಕ್ಷಣದ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತಿದ್ದೇವೆ' ಎಂದು ವಿವರಿಸಿದರು.
ಮಕ್ಕಳಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಈ ಪ್ರಯತ್ನವು ನನ್ನ ಜೀವನದ ಮೂರನೇ ಇನ್ನಿಂಗ್ಸ್. ಇದು ನನ್ನ ಬದುಕಿನ ಸಾರ್ಥಕ ಇನ್ನಿಂಗ್ಸ್ ಕೂಡ ಹೌದು. ಜನ್ಮಜಾತ ಹೃದಯ ದೋಷಗಳೊಂದಿಗೆ ಹುಟ್ಟಿದ ಮಕ್ಕಳಿಗೆ 'ಶ್ರೀ ಸತ್ಯಸಾಯಿ ಸಂಜೀವಿನಿ ಆಸ್ಪತ್ರೆ'ಗಳಲ್ಲಿ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಇಲ್ಲಿ ಶೇ 99 ರಷ್ಟು ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ ಎಂದು ಅಭಿಮಾನದಿಂದ ಹೇಳಿದರು.
'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಮೂಲಕ ಒಂದು ಕೋಟಿಗೂ ಹೆಚ್ಚು ಮಕ್ಕಳಿಗೆ ಉಚಿತ ಪೌಷ್ಟಿಕಾಂಶ ದೊರೆಯುತ್ತಿದೆ. ಮುದ್ದೇನಹಳ್ಳಿಯಲ್ಲಿ ಸುಸಜ್ಜಿತ 600 ಹಾಸಿಗೆಗಳ ನೂತನ ಆಸ್ಪತ್ರೆ, ಉಚಿತ ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ಸೌಲಭ್ಯಗಳು ಸರ್ವರಿಗೂ ಉಚಿತವಾಗಿ ದೊರೆಯುತ್ತಿವೆ ಎಂದು ತಿಳಿಸಿದರು.
ತಮ್ಮದೇ ಕ್ರಿಕೆಟ್ ಬದುಕಿನ ಚೊಚ್ಚಿನ ಟೆಸ್ಟ್ ಪಂದ್ಯವನ್ನು ನೆನಪಿಸಿಕೊಂಡ ಅವರು, 1971ರಲ್ಲಿ ನನ್ನ ಚೊಚ್ಚಿನ ಟೆಸ್ಟ್ ಪಂದ್ಯದಲ್ಲಿ ಸರ್ ಗಾರಿಫೀಲ್ಡ್ ಸೋಬರ್ಸ್ ತಮ್ಮ ಕೈಗೆ ಬಂದಿದ್ದ ಕ್ಯಾಚ್ ಬಿಟ್ಟು, ನನಗೆ ಜೀವದಾನ ನೀಡಿದರು. ಎರಡನೇ ಟೆಸ್ಟ್‌ನಲ್ಲಿ ಜಾಯ್ ಕೇರ್ ಇದೇ ರೀತಿ ನನಗೆ ಮರುಜೀವ ನೀಡಿದರು. ನಾನು ಕ್ರಮವಾಗಿ ಅರ್ಧಶತಕ ಮತ್ತು ಶತಕ ಬಾರಿಸಿದೆ. ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಈ ಜೀವದಾನಗಳು ಗಟ್ಟಿಮಾಡಿದವು. ಅದು ಸತ್ಯ ಸಾಯಿಬಾಬಾ ಅವರ ಕೃಪಾಶೀರ್ವಾದ. ಅದನ್ನೇ ನಾನು ಇಂದು ಇತರ ಜೀವಗಳಲ್ಲಿ ಕಾಣಲು ಬಯಸುತ್ತಿದ್ದೇವೆ ಎಂದು ಸ್ಮರಿಸಿದರು.
ದಾನಿಗಳ ದೇಣಿಗೆಯ ಸದುಪಯೋಗಕ್ಕೆ ಸಂಸ್ಥೆ ಬದ್ಧ:
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಪ್ರಾಜೆಕ್ಟ್ ಮ್ಯಾನೇಜರ್ ಭರತ್ ಕುಮಾರ್ ಮಾತನಾಡಿ, ನೂತನ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ದಾಖಲೆ ಅವಧಿಯಲ್ಲಿ ಮುಗಿಸಿರುವುದು ಸಾರ್ಥಕತೆ ತಂದಿದೆ. ನಾವು ನಿಮ್ಮ ದೇಣಿಗೆಗೆ ರಕ್ಷಕರಂತೆ ಕೆಲಸ ಮಾಡುತ್ತೇವೆ. ಒಂದೆಡೆ ದಾನಿಗಳ ಹಣಕ್ಕೆ, ಆಕಾಂಕ್ಷಿಗಳ ನಿರೀಕ್ಷೆಗೆ ಬಾಧ್ಯರಾಗಿರುತ್ತೇವೆ. ವಿಶ್ವದ ಅತಿದೊಡ್ಡ ಗುಮ್ಮಟ, ಸತ್ಯ ಸಾಯಿ ಬಾಬಾ ಅವರ ಏಕಶಿಲಾ ವಿಗ್ರಹ ಮುದ್ದೇನಹಳ್ಳಿಯಲ್ಲಿದೆ ಎಂದು ಹೇಳಿದರು.
ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಸಲಹೆಗಾರರೂ ಆಗಿರುವ ಕ್ಯಾಲಿಫೋರ್ನಿಯಾದ ಸ್ಟಾನ್‌ಫೋರ್ಡ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಶಿಶುವೈದ್ಯ ವಿಭಾಗದ ಪ್ರಾಧ್ಯಾಪಕ ಡಾ ಕನ್‌ವಾಲ್‌ಜೀತ್ ಮಾತನಾಡಿ, ಒನ್ ವರ್ಲ್ಡ್ ಫ್ಯಾಮಿಲಿ ಮಿಷನ್ ನೇತೃತ್ವದಲ್ಲಿ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಗಳನ್ನು ವಿವರಿಸಿದರು.
ತಮ್ಮ ಅನುಭವ ಹಂಚಿಕೊಂಡ ವೈದ್ಯಕೀಯ ವಿದ್ಯಾರ್ಥಿನಿ ರಿಫಾ, ನಾನು ಹಾಸನ ಜಿಲ್ಲೆಯಿಂದ ಬಂದವಳು. ಮೊಬೈಲ್ ಇಲ್ಲದೆ ಬದುಕಲು ಸಾಧ್ಯವೇ ಎಂದು ಯೋಚಿಸುತ್ತಿದ್ದೆ. ಅದರೆ ಈಗ ವೈದ್ಯಕೀಯ ವಿಜ್ಞಾನದೊಂದಿಗೆ ಕಳರಿಪಯಟ್, ವಾಲೀಬಾಲ್ ಮತ್ತು ಕರ್ನಾಟಕ ಸಂಗೀತ ಕಲಿಯಲು ಅವಕಾಶ ಸಿಕ್ಕಿದೆ. ನಮ್ಮ ಪಾಲಿಗೆ ಪ್ರತಿ ರೋಗಿಯೂ ಮುಖ್ಯ. ಅವರು ಗುಣವಾದರೆ ಅವರ ಬದುಕಿನೊಂದಿಗೆ ಕುಟುಂಬಗಳೂ ಉಳಿಯುತ್ತವೆ ಎನ್ನುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿದರು. ಭಗವದ್ಗೀತೆ ಮತ್ತು ಕುರಾನ್‌ನ ಸಾಲುಗಳನ್ನು ಪರಸ್ಪರ ಹೋಲಿಸಿ ಎರಡರ ಸಂದೇಶ ಒಂದೇ ಎಂದು ತಿಳಿಸಿದರು.