ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ: ಡಿ.ಕೆ. ಸುರೇಶ್

“ಕಾಂಗ್ರೆಸ್ ಪಕ್ಷ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲಲಿದೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.ಸದಾಶಿವನಗರ ನಿವಾಸದ ಬಳಿ ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದರು.

Oct 22, 2024 - 13:19
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ: ಡಿ.ಕೆ. ಸುರೇಶ್

ಬೆಂಗಳೂರು : “ಕಾಂಗ್ರೆಸ್ ಪಕ್ಷ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲಲಿದೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.ಸದಾಶಿವನಗರ ನಿವಾಸದ ಬಳಿ ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದರು.ಕಾರ್ಯಕರ್ತರು ನಿಮ್ಮ ಸ್ಪರ್ಧೆಗೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ, ಚನ್ನಪಟ್ಟಣದಲ್ಲಿ ಗೆಲ್ಲುವ ವಿಶ್ವಾಸವಿದೆಯೇ ಎಂದು ಕೇಳಿದ ಪ್ರಶ್ನೆಗೆ, “ನನ್ನ ಮುಕ್ತವಾದ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ. ಅವರು ತೀರ್ಮಾನ ಮಾಡಿದ ನಂತರ ನಾನು ತೀರ್ಮಾನ ಮಾಡುತ್ತೇನೆ. ಪಕ್ಷದ ಆದೇಶವನ್ನು ನಾನು ಪಾಲಿಸಬೇಕು, ನಮ್ಮ ಮುಖಂಡರೂ ಪಾಲಿಸಬೇಕು” ಎಂದರು.ಯೋಗೇಶ್ವರ್ ಅವರು ಕಾಂಗ್ರೆಸ್ ಸೇರುವ ಚರ್ಚೆಯ ಬಗ್ಗೆ ಕೇಳಿದಾಗ, “ಯೋಗೇಶ್ವರ್ ಅವರು ಪರಿಷತ್ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು ಹಾಗೂ ಅದು ಅಂಗೀಕಾರವಾಗಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದ್ದೇನೆ. ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಚನ್ನಪಟ್ಟಣದಲ್ಲಿ ಇಂದು ಸಭೆ ಮಾಡುತ್ತಿರುವುದು ಗೊತ್ತಿದೆ. ಇದರ ಹೊರತಾಗಿ ಅವರು ಕಾಂಗ್ರೆಸ್ ಸೇರುವ ಕುರಿತು ಯಾವುದೇ ವಿಚಾರ ಗೊತ್ತಿಲ್ಲ” ಎಂದು ತಿಳಿಸಿದರು. ಸೋಮವಾರ ರಾತ್ರಿ ರಾಮನಗರ ಜಿಲ್ಲಾ ಮುಖಂಡರ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಿದೆ ಎಂದು ಕೇಳಿದಾಗ, “ನಮ್ಮ ಪಕ್ಷದ ಮುಂದಿನ ನಡೆ ಹೇಗಿರಬೇಕು ಎಂದು ಜಿಲ್ಲೆ ಶಾಸಕರು ಹಾಗೂ ಮುಖಂಡರ ಜತೆ ನಾವು ಚರ್ಚೆ ಮಾಡಿದ್ದು, ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದ್ದು, ಪಕ್ಷದಿಂದಲೇ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದ್ದಾರೆ” ಎಂದು ಮಾಹಿತಿ ನೀಡಿದರು.

ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸುರೇಶ್ ಅವರು ಸ್ವಾಗತಿಸುತ್ತಾರಾ ಎಂಬ ಪ್ರಶ್ನೆಗೆ, “ಚನ್ನಪಟ್ಟಣದಲ್ಲಿ ಕಳೆದ ಮೂರು ತಿಂಗಳಿನಿಂದ ಜೆಡಿಎಸ್ ಹಾಗೂ ಬಿಜೆಪಿಯಿಂದ ಬರುವ ಎಲ್ಲಾ ಮುಖಂಡರನ್ನು ನಾವು ಸ್ವಾಗತಿಸಿದ್ದೇವೆ. ಪಕ್ಷದ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿ ಬರುವವರಿಗೆ ಸ್ವಾಗತವಿದೆ. ಯೋಗೇಶ್ವರ್ ಅಥವಾ ಮತ್ತೊಬ್ಬರು ಎಂದು ಪ್ರತ್ಯೇಕಿಸಿ ಹೇಳುವುದಿಲ್ಲ. ಯೋಗೇಶ್ವರ್ ಅವರ ಪಕ್ಷ ಸೇರ್ಪಡೆ ವಿಚಾರ ನನ್ನ ಮುಂದೆ ಇಲ್ಲ. ಅವರು ಹಿರಿಯ ನಾಯಕರು ಮಾಜಿ ಸಚಿವರು, ಸಾಕಷ್ಟು ಅನುಭವ ಇರುವವರು. ಅವರ ಎನ್ ಡಿಎ ಮೈತ್ರಿ ಗಟ್ಟಿಯಾಗಿದ್ದು, ಅವರು ಯಾವ ತೀರ್ಮಾನ ಮಾಡುತ್ತಾರೆ ಕಾದು ನೋಡೋಣ” ಎಂದು ತಿಳಿಸಿದರು. ಯೋಗೇಶ್ವರ್ ಅವರು ಪಕ್ಷಕ್ಕೆ ಸೇರುವುದಾದರೆ ಯಾವಾಗ ಸೇರಬಹುದು ಎಂದು ಕೇಳಿದಾಗ, “ನೀವು ಯಾವಾಗ ಹೇಳುತ್ತೀರೋ ಆಗ ಬರುತ್ತಾರೆ” ಎಂದರು.ಗುರುವಾರ ಯೋಗೇಶ್ವರ್ ಅವರು ಸೇರ್ಪಡೆಯಾಗಲಿದ್ದಾರೆ ಎಂದು ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದಾಗ, “ಚನ್ನಪಟ್ಟಣದ ಕಾರ್ಯಕರ್ತರು ನನಗೆ ಕರೆ ಮಾಡಿ ಯೋಗೇಶ್ವರ್ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಲು ಸಭೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಸಭೆಯ ವಾಸ್ತವಾಂಶ ಏನು ಎಂದು ಸಂಜೆಯ ಒಳಗಾಗಿ ತಿಳಿಯಲಿದೆ” ಎಂದು ತಿಳಿಸಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.