Karnataka Weather: ರಾಜ್ಯದಲ್ಲಿ ಇವತ್ತು ಮಳೆ ಇದ್ಯಾ?
Karnataka Weather: ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
Karnataka Weather: ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ (ಸುಳ್ಯ ತಾಲೂಕು ಹೊರತುಪಡಿಸಿ) ಬೆಳಗ್ಗೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡದ ಘಟ್ಟಪ್ರದೇಶಗಳ ಸುತ್ತಮುತ್ತ ನಿನ್ನೆ ಸಂಜೆ ಗುಡುಗು ಮಳೆಯಾಗಿತ್ತು. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ತಾಲೂಕುಗಳಲ್ಲಿಯೂ ಸಾಧಾರಣ ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ, ಕರಾವಳಿಯ ಜಿಲ್ಲೆಗಳಲ್ಲಿ ಮೇಲ್ಮೈ ಸುಳಿಗಾಳಿ ಕಾರಣ ಹಗಲು ಮೋಡದ ವಾತಾವರಣ ಇರಲಿದೆ. ಗುಡುಗು ಸಹಿತ ತುಂತುರು ಅಥವಾ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿ ತೀರದಲ್ಲಿ ಮಳೆ ಪ್ರಮಾಣ ಜಾಸ್ತಿ ಇರಬಹುದು. ಮಧ್ಯಾಹ್ನ ನಂತರ ಮಳೆ ಕಡಿಮೆ ಆಗಬಹುದು.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದ ತಾಲೂಕುಗಳಲ್ಲಿಯೂ ಮಳೆಯಾಗುವ ನಿರೀಕ್ಷೆಯಿದೆ. ಸಂಜೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಘಟ್ಟಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ಇದ್ದರೂ, ಪಶ್ಚಿಮದ ಗಾಳಿ ಇದ್ದಾಗ ಪೂರ್ವದ ಮೋಡದ ಮಳೆಯ ಸಾಧ್ಯತೆಗಳು ಕಡಿಮೆ ಆಗಬಹುದು. ಅಕ್ಟೋಬರ್ 10 ವರೆಗೆ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಸಂಜೆಯ ಗುಡುಗು ಮಳೆ ಮುಂದುವರೆಯಬಹುದು.
ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಇವತ್ತು ಸಾಧಾರಣ ಮಳೆ ಮುನ್ಸೂಚನೆಯಿದೆ. ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳ ಸಾಗರ, ಹೊಸನಗರ, ತೀರ್ಥಹಳ್ಳಿ, ಶೃಂಗೇರಿ, ಮೂಡಿಗೆರೆ, ಸಕಲೇಶಪುರ ಹಾಗೂ ಮಡಿಕೇರಿ ತಾಲೂಕುಗಳಲ್ಲಿ ಮಳೆ ಪ್ರಮಾಣ ಜಾಸ್ತಿ ಇರಲಿದ್ದು ಉತ್ತಮ ಮಳೆಯಾಗಬಹುದು. ಮಲೆನಾಡಿನಲ್ಲಿ ಒಂದೆರಡು ದಿನ ಸಾಧಾರಣ ಮಳೆ ನಂತರ, ಅಕ್ಟೋಬರ್ 10 ವರೆಗೆ ಅಲ್ಲಲ್ಲಿ ಮಳೆ ಮುಂದುವರೆದು ನಂತರ ಮಳೆ ಪೂರ್ತಿ ಕಡಿಮೆ ಆಗಬಹುದು.
ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ಹೆಚ್ಚಿನ ಪ್ರದೇಶಗಳಲ್ಲಿ (ತುಂತುರು - ಸಾಮಾನ್ಯ - ಸಾಧಾರಣ) ಮಳೆಯಾಗಬಹುದು. ನಾಳೆ, ನಾಡಿದ್ದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಆ 8 ರಿಂದ ಮಳೆ ಪೂರ್ತಿ ಕಡಿಮೆಯಾಗಬಹುದು.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು, ಅಲ್ಲಲ್ಲಿ ತುಂತುರು - ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ ಸಮೀಪ ಅರಬ್ಬೀ ಸಮುದ್ರದಲ್ಲಿ ಸಣ್ಣ ಪ್ರಮಾಣದ ಸರ್ಕ್ಯುಲೇಷನ್ ಇರುವ ಹಿನ್ನೆಲೆ ಇವತ್ತು ಮಳೆಯಾಗುವ ಸಾಧ್ಯತೆಯಿದೆ.