ವನ್ಯಜೀವಿಯಿಂದ ಹಾಡಿಯ ಜಾನುವಾರು ಮೃತಪಟ್ಟರೆ ಪರಿಹಾರ: ಈಶ್ವರ ಖಂಡ್ರೆ

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳೆದ ಜೂನ್ ನಲ್ಲಿ ಪ್ರತಿಕಾರಕ್ಕಾಗಿ ದನಕ್ಕೆ ಹಾಕಿದ್ದ ವಿಷದಿಂದ 5 ಹುಲಿಗಳು ಮೃತಪಟ್ಟಿದ್ದವು, ಈ ತಿಂಗಳ ಆದಿಯಲ್ಲೇ ಮತ್ತೊಂದು ಹುಲಿ ವಿಷಪ್ರಾಶನದಿಂದ ಮೃತಪಟ್ಟಿದೆ. ಹಾಡಿಯ ಜನರು ಹತಾಶರಾಗಿ, ಪ್ರತಿಕಾರಕ್ಕಾಗಿ ವಿಷ ಹಾಕುವುದನ್ನು ತಡೆಯಲು ಈ ಸೂಚನೆ ನೀಡಲಾಗಿದೆ ಎಂದರು.

Oct 7, 2025 - 12:19
ವನ್ಯಜೀವಿಯಿಂದ ಹಾಡಿಯ ಜಾನುವಾರು ಮೃತಪಟ್ಟರೆ ಪರಿಹಾರ: ಈಶ್ವರ ಖಂಡ್ರೆ
Eshwara Khandre


ಬೆಂಗಳೂರು, ಅ.6: ರಾಜ್ಯದ ಕೆಲವು ಅರಣ್ಯದೊಳಗೆ ಹಾಡಿಗಳಿದ್ದು, ಇಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳು ಸಾಕಿರುವ ಜಾನುವಾರುಗಳು ವನ್ಯಜೀವಿಗಳಿಂದ ಮೃತಪಟ್ಟರೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳೆದ ಜೂನ್ ನಲ್ಲಿ ಪ್ರತಿಕಾರಕ್ಕಾಗಿ ದನಕ್ಕೆ ಹಾಕಿದ್ದ ವಿಷದಿಂದ 5 ಹುಲಿಗಳು ಮೃತಪಟ್ಟಿದ್ದವು, ಈ ತಿಂಗಳ ಆದಿಯಲ್ಲೇ ಮತ್ತೊಂದು ಹುಲಿ ವಿಷಪ್ರಾಶನದಿಂದ ಮೃತಪಟ್ಟಿದೆ. ಹಾಡಿಯ ಜನರು ಹತಾಶರಾಗಿ, ಪ್ರತಿಕಾರಕ್ಕಾಗಿ ವಿಷ ಹಾಕುವುದನ್ನು ತಡೆಯಲು ಈ ಸೂಚನೆ ನೀಡಲಾಗಿದೆ ಎಂದರು.
ಮುಖ್ಯಮಂತ್ರಿಗಳಿಗೆ ಹುಲಿ ಸಾವಿನ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅರಣ್ಯದೊಳಗಿನ ಹಾಡಿಯಲ್ಲಿರುವ ಜಾನುವಾರುಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪ್ರವಾಹದಲ್ಲಿ ಸಾವಿಗೀಡಾಗುವ ಜಾನುವಾರುಗಳಿಗೆ ನೀಡುವ ಪರಿಹಾರದ ಮೊತ್ತವನ್ನೇ ಈ ಜಾನುವಾರುಗಳಿಗೂ ನೀಡಲು ನಿರ್ಧರಿಸಲಾಗಿದ್ದು, ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಮುಖ್ಯಮಂತ್ರಿಗಳೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದರು.
ತಾವು ಸಾಕಿದ ಜಾನುವಾರುಗಳು ಮೃತಪಟ್ಟಾಗ ಸಹಜವಾಗಿಯೇ ಆಕ್ರೋಶಕ್ಕೆ ಒಳಗಾಗುತ್ತಾರೆ. ಆದರೆ ವನ್ಯಜೀವಿ ಹತ್ಯೆ ಅಪರಾಧವಾಗಿದ್ದು, ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ. ಕಳೆದ 1ರಂದು ನಡೆದ ಹುಲಿ ಹತ್ಯೆಯ 4  ಶಂಕಿತರನ್ನು 48 ಗಂಟೆಯೊಳಗೆ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಈ ಕುಕೃತ್ಯದಲ್ಲಿ ಯಾರೇ ಎಸಗಿದ್ದರೂ ಅವರಿಗೆ ಕಾನೂನು ರೀತ್ಯ ತಕ್ಕ ಶಿಕ್ಷೆ ಆಗುತ್ತದೆ, ತ್ವರಿತವಾಗಿ ಶಿಕ್ಷೆ ಆದರೆ ಅದು ಸ್ಪಷ್ಟ ಸಂದೇಶ ರವಾನಿಸುತ್ತದೆ. ಹೀಗಾಗಿ ತ್ವರಿತವಾಗಿ ಚಾರ್ಜ್ ಶೀಟ್ ಸಲ್ಲಿಸಲು ಸೂಚಿಸಲಾಗಿದೆ ಎಂದರು.
ಒಂದೊಮ್ಮೆ ಹುಲಿ ಹತ್ಯೆ ತಡೆಯುವಲ್ಲಿ ಅರಣ್ಯ ಇಲಾಖೆಯ ಯಾವುದೇ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರೆ, ಕರ್ತವ್ಯ ಲೋಪ ಆಗಿದ್ದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದು. ಈಗಾಗಲೇ ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಲಾಗಿದ್ದು, ವರದಿ ಬಂದ ಬಳಿಕ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಜನಸಂಪರ್ಕ ಸಭೆಗೆ ಸೂಚನೆ:
ಕಾಡಿನಂಚಿನ ಮತ್ತು ಕಾಡಿನೊಳಗೆ ಹಾಡಿಯಲ್ಲಿರುವ ಜನರ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಮತ್ತು ವನ್ಯಜೀವಿಗಳೊಂದಿಗೆ ಅವರು ಸಹಬಾಳ್ವೆ ನಡೆಸಲು ಉತ್ತೇಜಿಸುವಂತೆ ಜನಸಂಪರ್ಕ ಸಭೆ ನಡೆಸಲೂ ಸೂಚನೆ ನೀಡಲಾಗಿದೆ ಎಂದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.