ಧರ್ಮಸ್ಥಳ: ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಾರ್ಷಿಕೋತ್ಸವ ಆಚರಣೆ
Dharmasthala: ಉಜಿರೆಯಲ್ಲಿ ಬುಧವಾರ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನಗಳ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಧರ್ಮಸ್ಥಳ: ಕಾಲೇಜಿನ 1 ವರ್ಷದ ಪ್ರಗತಿ ಮತ್ತು ಸಾಧನೆಯನ್ನು ಅವಲೋಕನ ಮಾಡಿಕೊಳ್ಳುವುದರೊಂದಿಗೆ, ಮುಂದಿನ ವರ್ಷದ ಕಾರ್ಯ ಚಟುವಟಿಕೆಗಳಿಗೆ ಯೋಜನೆ ರೂಪಿಸುವುದೇ ವಾರ್ಷಿಕೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ಜಾಮ್‌ನಗರದ ಆಯುರ್ವೇದ ಸಂಶೋಧನಾ ಸಂಸ್ಥೆಯ ಯೋಗ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಅರ್ಪಣ್ ಎ.ಭಟ್ ಹೇಳಿದರು.
ಉಜಿರೆಯ ಅಮೃತ ವರ್ಷಿಣಿ ಸಭಾಭವನದಲ್ಲಿ ಬುಧವಾರ ನಡೆದ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನಗಳ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಅವರು ಮಾತನಾಡಿದರು.

'ನಮ್ಮ ಬದುಕಿನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದ ನಿರ್ವಹಣೆಗೆ ಹೆಚ್ಚಿನ ಮಹತ್ವವಿದೆ. ಪ್ರಾಚೀನ ಕಾಲದಲ್ಲಿ ಜನರು ತಮ್ಮದೇ ಆದ ತತ್ವ-ಸಿದ್ಧಾಂತಗಳು, ಧಾರ್ಮಿಕ ನಂಬಿಕೆಗಳು, ಆಧ್ಯಾತ್ಮಿಕ ಚಿಂತನ-ಮಂಥನದೊಂದಿಗೆ ಸತ್ಯ, ಧರ್ಮ ಹಾಗೂ ನ್ಯಾಯ-ನೀತಿ ಮಾರ್ಗದಲ್ಲಿ ನಡೆದು ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದರು' ಎಂದರು.
'ಧರ್ಮ ಹಾಗೂ ಆಧ್ಯಾತ್ಮ ಭಾರತೀಯರ ಅಸ್ತಿತ್ವಕ್ಕೆ ಮುಖ್ಯ. ಆದರೆ, ಇಂದು ಆಧುನಿಕ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನದ ಪ್ರಗತಿಯಿಂದಾಗಿ ನಾವು ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಸುಖ-ಶಾಂತಿ, ನೆಮ್ಮದಿ ಮರೀಚಿಕೆಯಾಗಿದೆ. ನಮ್ಮ ಪ್ರಾಚೀನ ತತ್ವ-ಸಿದ್ಧಾಂತಗಳು, ಪಾರಂಪರಿಕ ವಿಧಾನಗಳನ್ನು ಮರೆತಿದ್ದೇವೆ. ಪ್ರಕೃತಿ-ಪರಿಸರವನ್ನು ಕಡೆಗಣಿಸುತ್ತಿದ್ದು, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ' ಎಂದು ಹೇಳಿದರು.

'ಧರ್ಮಸ್ಥಳ' ಎಂಬ ಹೆಸರಿಗೆ ಅನ್ವರ್ಥವಾಗಿ ಇಲ್ಲಿ ಸತ್ಯ, ಧರ್ಮ, ನ್ಯಾಯ ಹಾಗೂ ನೀತಿ ಇದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ಬಿ.ಎಂ.ಹೆಗ್ಡೆ ಅವರುಗಳ ಸರ್ವೋದಯ, ಬಹುಮುಖಿ ಸಮಾಜಸೇವೆ ಮತ್ತು ಉತ್ತಮ ವಾಕ್ ಪಟುತ್ವವನ್ನು ಶ್ಲಾಘಿಸಿದರು. ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗಾಭ್ಯಾಸಕ್ಕೆ ಧರ್ಮಸ್ಥಳದ ಹೆಗ್ಗಡೆ ಅವರ ಕೊಡುಗೆಯನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ, ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಕಾಲೇಜಿನ ಆರಂಭ ಹಿನ್ನೆಲೆ, ಜೊತೆಗೆ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಕಾಲೇಜಿನ ಪ್ರಗತಿಗೆ ಕಾರಣರಾದ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ, ಉಪನ್ಯಾಸಕರು ಮತ್ತು ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿದರು. ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಗೆ ಹೆಚ್ಚಿನ ಅರಿವು ಹಾಗೂ ಜಾಗೃತಿ ಮೂಡಿಸಲು ಸಂಶೋಧನಾ ಕಾರ್ಯಗಳು ನಡೆಯಬೇಕು ಎಂದು ಸಲಹೆ ನೀಡಿದರು.

ಈ ಸಮಾರಂಭದಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ, ಡಾ.ಶಿವಪ್ರಸಾದ್ ಶೆಟ್ಟಿ ಹಾಗೂ ಡಾ.ಗೀತಾ ಬಿ ಶೆಟ್ಟಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಡಾ.ಸುಜಾತಾ ವಂದಿಸಿದರು. ಡಾ.ರಿತಿಕಾ ರೈ ಹಾಗೂ ಅನನ್ಯ ನಿರೂಪಿಸಿದರು.