ಕಲಬುರಗಿ ರಸ್ತೆ ಅಭಿವೃದ್ಧಿಗೆ ರೂ.25 ಕೋಟಿ, ರಾಯಚೂರಿನ ಐಐಐಟಿಗೂ ಅನುದಾನ: ಪ್ರಿಯಾಂಕ್ ಖರ್ಗೆ

Priyank Kharge: ಕಲಬುರಗಿ ರಸ್ತೆ ಅಭಿವೃದ್ಧಿಗೆ ರೂ.25 ಕೋಟಿ ಹಾಗೂ ರಾಯಚೂರಿನ ಐಐಐಟಿಗೂ ಅನುದಾನ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Jul 20, 2026 - 12:20
ಕಲಬುರಗಿ ರಸ್ತೆ ಅಭಿವೃದ್ಧಿಗೆ ರೂ.25 ಕೋಟಿ, ರಾಯಚೂರಿನ ಐಐಐಟಿಗೂ ಅನುದಾನ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಉದ್ದೇಶಿಸಲಾಗಿದೆ. ರೂ.25 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

ಈ ಯೋಜನೆಯಡಿ ಒಟ್ಟು 20.65 ಕಿ.ಮೀ ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. ರಾಜ್ಯ ಹೆದ್ದಾರಿ-156ರ ಕಟ್ಟಿಸಂಗವಿ-ಯನಗುಂಟಿ-ನರಿಬೋಳ-ಮಾಲ್-ಕೆ ಕ್ರಾಸ್ ಮಾರ್ಗದ 9.045 ಕಿ.ಮೀ ರಸ್ತೆ ಹಾಗೂ ಕೆಲ್ಲೂರು-ಆಂದೋಳ ನಡುವಿನ ಜಿಲ್ಲಾ ಮುಖ್ಯ ರಸ್ತೆಯ 3.900 ಕಿ.ಮೀ ಯನ್ನು ವಿಸ್ತರಿಸಿ, ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಉತ್ತಮ ರಸ್ತೆ ಎಂದರೆ, ಅದು ಕೇವಲ ಸಂಚಾರದ ಸೌಲಭ್ಯವಲ್ಲ. ಗ್ರಾಮೀಣಾಭಿವೃದ್ಧಿಯ ಬೆನ್ನೆಲುಬು. ಗುಣಮಟ್ಟದ ರಸ್ತೆ ನಿರ್ಮಾಣದಿಂದ ಜನರ ಜೀವನಮಟ್ಟ ಸುಧಾರಿಸುತ್ತದೆ. ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸುರಕ್ಷಿತವಾಗಿ ಸಂಚರಿಸಬಹುದು. ಇದು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಹೊಸ ಚೈತನ್ಯ ನೀಡಲಿದೆ ಎಂದು ತಿಳಿಸಿದರು.

ಈ ರಸ್ತೆ ಅಭಿವೃದ್ಧಿಯಿಂದ ಕಡಕೋಳ, ಕಟ್ಟಿಸಂಗವಿ, ನರಿಬೋಳ, ಕೆಲ್ಲೂರು ಮತ್ತು ಆಂದೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ದೊರೆಯಲಿದೆ. ಈ ಭಾಗದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಯಚೂರಿನ ಐಐಐಟಿಗೂ ಅನುದಾನ: 

ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ (IIIT) ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರ (Centre of Excellence in Artificial Intelligence – CoE-AI) ಸ್ಥಾಪನೆಗೂ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು

ಈ ಕೇಂದ್ರವನ್ನು ಐದು ವರ್ಷಗಳ ಅವಧಿಯಲ್ಲಿ ಒಟ್ಟು ರೂ.12 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದರಲ್ಲಿ 2026-27ರ ಬಜೆಟ್ ಘೋಷಣೆಯಡಿ ರೂ.5 ಕೋಟಿ ಹಾಗೂ LEAP ಕಾರ್ಯಕ್ರಮದಡಿ ರೂ.7 ಕೋಟಿ ಒದಗಿಸಲಾಗುತ್ತದೆ ಎಂದರು.

ಇದು ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಪ್ರಾದೇಶಿಕ ಎಐ (AI) ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಬೆಂಗಳೂರು ಕೇಂದ್ರೀಕೃತ ತಂತ್ರಜ್ಞಾನ ಪರಿಸರದ ಅಸಮತೋಲನ ನಿವಾರಿಸಿ, ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಎಐ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ, ಎಂಎಸ್ಎಂಇ ಹಾಗೂ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ ಎಐ ಆಧಾರಿತ ಪರಿಹಾರಗಳನ್ನು ರೂಪಿಸಲು ಈ ಕೇಂದ್ರ ನೆರವಾಗಲಿದೆ ಎಂದು ಹೇಳಿದರು.