ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ ಹಾಗೂ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 80ನೇ 'ಸ್ವಾತಂತ್ರ್ಯ ದಿನಾಚರಣೆ'ಯನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಂ.ಮ್ಯಾಕ್ಸಿಮ್ ಡಿಸೋಜ ಅವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. 'ನಾವೆಲ್ಲ ಉತ್ತಮವಾದ ಸಮಾಜವನ್ನು ಕಟ್ಟಬೇಕಾಗಿದೆ. ವಿದ್ಯಾರ್ಥಿಗಳು ದೇಶದ ಭವಿಷ್ಯ. ನಮ್ಮಲ್ಲಿರುವ ಜಾತಿ ಮತ ಭೇದಗಳನ್ನು ತೊಡೆದು, ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳಸಿಕೊಳ್ಳಬೇಕು' ಎಂದು ಹೇಳಿದರು.
ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಂ.ಭಗಿನಿ ಲೋರ ಸ್ವಾಗತಿಸಿದರು. ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯ ಕುಮಾರ್ ರೈ, ಶಾಲೆಗಳ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಬಾಬು ಮರಿಕೆ, ಲ್ಯಾನ್ಸಿ ಮಸ್ಕರೇನಸ್, ಶಾಲಾ ವಿದ್ಯಾರ್ಥಿ ನಾಯಕರಾದ ಅನ್ವಿತ್ ರೈ ಹಾಗೂ ಸಮಿಹ ಫಾತಿಮಾ ಉಪಸ್ಥಿತರಿದ್ದರು.
ಎನ್‌ಸಿಸಿ ಭೂ ದಳ, ನೌಕಾದಳ, ಸ್ಕೌಟ್ಸ್, ಬುಲ್ ಬುಲ್, ಸ್ಕೂಲ್ ಬ್ಯಾಂಡ್, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರಿಂದ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಾದ ವೀಣಾ ಮತ್ತು ಸ್ವೀಡಲ್ ಡಿಸೋಜ 'ಸ್ವಾತಂತ್ರ ದಿನಾಚರಣೆ'ಯ ಮಹತ್ವದ ಬಗ್ಗೆ ತಿಳಿಸಿದರು. ಶಿಕ್ಷಕಿ ರಕ್ಷಿತಾ ಬಿ ನಿರೂಪಿಸಿದರು. ಶಿಕ್ಷಕಿ ಧನ್ಯಶ್ರೀ ವಂದಿಸಿದರು. ಉಭಯ ಶಾಲೆಗಳ ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು. ಎಲ್ಲರಿಗೂ ಸಿಹಿ ಹಂಚಲಾಯಿತು.