ಪುತ್ತಿಲ ಪರಿವಾರದಿಂದ ಗಿರಿಜಾ ಕಲ್ಯಾಣೋತ್ಸವ: ಪೂರ್ವಭಾವಿ ಸಭೆ.. ಕಾರ್ಯಕ್ರಮಗಳೇನು?
Puttur: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ, ಡಿ.12 ಮತ್ತು 13 ರಂದು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ 'ಗಿರಿಜಾ ಕಲ್ಯಾಣೋತ್ಸವ' ನಡೆಯಲಿದೆ. ಈ ಹಿನ್ನೆಲೆ, ಮುಕ್ರಂಪಾಡಿ ಸುಭದ್ರಾ ಕಲಾ ಮಂದಿರದಲ್ಲಿ ಭಾನುವಾರ ಪೂರ್ವಭಾವಿ ಸಭೆ ಜರುಗಿತು.
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ, ಡಿ.12 ಮತ್ತು 13 ರಂದು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ 'ಗಿರಿಜಾ ಕಲ್ಯಾಣೋತ್ಸವ' ನಡೆಯಲಿದೆ. ಈ ಹಿನ್ನೆಲೆ, ಮುಕ್ರಂಪಾಡಿ ಸುಭದ್ರಾ ಕಲಾ ಮಂದಿರದಲ್ಲಿ ಭಾನುವಾರ ಪೂರ್ವಭಾವಿ ಸಭೆ ಜರುಗಿತು.
ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪುತ್ತೂರಿನಲ್ಲಿ ಕಳೆದ 3 ವರ್ಷಗಳಿಂದ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಲಾಗಿದ್ದು, ಈ ಬಾರಿ ಪ್ರಥಮ ಬಾರಿಗೆ ಗಿರಿಜಾ ಕಲ್ಯಾಣೋತ್ಸವ ಆಯೋಜಿಸಲಾಗಿದೆ. ಡಿ.12 ರಂದು ಮಹಾಲಿಂಗೇಶ್ವರ ದೇವರಿಗೆ ಲಕ್ಷ ಬಿಲ್ವಾರ್ಚನೆ ನಡೆಯಲಿದೆ ಎಂದು ಹೇಳಿದರು.
ಗಿರಿಜಾ ಕಲ್ಯಾಣೋತ್ಸವದ ಅಂಗವಾಗಿ, ಈ ಬಾರಿಯೂ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ. ಕಳೆದ ಬಾರಿ 13 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬಾರಿ ಡಿ.13 ರಂದು ಬೆಳಗ್ಗೆ 11.20ರ ಶುಭಲಗ್ನದಲ್ಲಿ ವಿವಾಹ ನಡೆಯಲಿದ್ದು, ಈಗಾಗಲೇ ಐದು ಜೋಡಿಗಳು ನೋಂದಾಯಿಸಿಕೊಂಡಿದ್ದಾರೆ. ಮನೆ ಮದುವೆಯಂತೆ ವೈಭವದಿಂದ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು.
ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಡಿ.12 ರಂದು ಸಂಜೆ ಧಾರ್ಮಿಕ ಸಭೆ 'ಕೇಸರಿ ಸಂಗಮ'ವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 11 ಮಂದಿ ಮಠಾಧೀಶರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಎರಡು ದಿನಗಳ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ 2 ಲಕ್ಷ ಮಂದಿಗೆ ಉಪಹಾರ ಮತ್ತು ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಡಿ.12 ರಂದು ರಾತ್ರಿ ಕೇರಳದ ಪ್ರಸಿದ್ಧ ತಂಡದಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿಶೇಷ ಭಜನ್ ಕಾರ್ಯಕ್ರಮ ನಡೆಯಲಿದೆ ಎಂದರು.
ಗಿರಿಜಾ ಕಲ್ಯಾಣೋತ್ಸವ ಸಮಿತಿ ರಚನೆ:
ಈ ಬಾರಿಯ ಗಿರಿಜಾ ಕಲ್ಯಾಣೋತ್ಸವಕ್ಕೆ ಸಮಿತಿಯನ್ನು ರಚಿಸಲಾಗಿದೆ. ಅಧ್ಯಕ್ಷರಾಗಿ ಡಾ.ಅಖಿಲೇಶ್ ಪಾಣಾಜೆ, ಕಾರ್ಯಾಧ್ಯಕ್ಷರಾಗಿ ಅನಿಲ್ ಕುಮಾರ್ ಕಣ್ಣನ್ಮೂಲೆ ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ತೆಂಕಿಲ, ಗೌರವಾಧ್ಯಕ್ಷರಾಗಿ ಮುಗೇರೋಡಿ ಬಾಲಕೃಷ್ಣ ರೈ, ಗುಂಡ್ಯಡ್ಕ ವಾಸು ಪೂಜಾರಿ, ರಘು ಬೆಳ್ಳಿಪ್ಪಾಡಿ, ಮೊನಪ್ಪ ಪುರುಷ ಮುಗೇರಡ್ಕ, ಗಣೇಶ್ ಕಾಮತ್ ಉಪ್ಪಿನಂಗಡಿ ನೇಮಕಗೊಂಡಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀ ರಾಮ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಫಾಟೆ, ಹರೀಶ್ ಮರುವಾಲ, ಕೋಶಾಧಿಕಾರಿ ಸುಜಿತ್ ಕಜಿ, ಸೀತಾ ಪರಿವಾರ ಅಧ್ಯಕ್ಷೆ ಪ್ರೇಮಾ ರಾಧಾಕೃಷ್ಣ ರೈ ಉಪಸ್ಥಿತರಿದ್ದರು.
ಸೀತಾ ಪರಿವಾರದ ಪ್ರಧಾನ ಕಾರ್ಯದರ್ಶಿ ಅನ್ನಪೂರ್ಣ ಎಸ್ ರಾವ್ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಸ್ವಾಗತಿಸಿದರು. ರವಿಕುಮಾರ್ ರೈ ಕೆದಂಬಾಡಿ ನಿರೂಪಿಸಿದರು. ಗಿರಿಜಾ ಕಲ್ಯಾಣೋತ್ಸವ ಸಮಿತಿ ನೂತನ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ವಂದಿಸಿದರು.