ಷೇರು ಮಾರುಕಟ್ಟೆ: ಈಗ ಹೂಡಿಕೆಗೆ ಸಕಾಲವೇ?

Stock Market: ಷೇರುಗಳನ್ನು ಖರೀದಿಸಲು ಇದು ಸೂಕ್ತ ಸಮಯವೇ ಎಂಬ ಗೊಂದಲವೂ ಅನೇಕರಲ್ಲಿದೆ.. ಇಲ್ಲಿದೆ ಉತ್ತರ

Oct 19, 2026 - 15:48
Oct 19, 2026 - 15:49
ಷೇರು ಮಾರುಕಟ್ಟೆ: ಈಗ ಹೂಡಿಕೆಗೆ ಸಕಾಲವೇ?

ಬೆಂಗಳೂರು: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರವೂ ಭಾರಿ ಕುಸಿತ ಕಂಡುಬಂದಿದೆ. ಸೆನ್ಸೆಕ್ಸ್ ಒಂದು ಹಂತದಲ್ಲಿ 900ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ. ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳಲಿದೆಯೇ ಅಥವಾ ಕುಸಿತ ಇನ್ನಷ್ಟು ಮುಂದುವರಿಯಲಿದೆಯೇ ಎಂಬುದು ಈಗ ಹೂಡಿಕೆದಾರರನ್ನು ಕಾಡುತ್ತಿರುವ ಪ್ರಶ್ನೆ. ಇಂತಹ ಸಂದರ್ಭದಲ್ಲಿ ಷೇರುಗಳನ್ನು ಖರೀದಿಸಲು ಇದು ಸೂಕ್ತ ಸಮಯವೇ ಎಂಬ ಗೊಂದಲವೂ ಅನೇಕರಲ್ಲಿದೆ.

ಕೋವಿಡ್ ಬಳಿಕ ಇದೆ ಮೊದಲ ಬಾರಿಗೆ ದೇಶದ ಷೇರು ಮಾರುಕಟ್ಟೆ ಈ ಮಟ್ಟದ ಕುಸಿತ ಕಂಡಿದೆ. ಈ ಹಿಂದೆ ಹೂಡಿಕೆ ಮಾಡಲು ಸಾಧ್ಯವಾಗದವರಿಗೆ ಇದು ಸುಸಮಯ ಅನ್ನುವ ವಿಶ್ಲೇಷಣೆ ಎಲ್ಲಾ ಕಡೆ ಕೇಳಿ ಬರುತ್ತಿದೆ. ಆದರೆ ಈ ಕುಸಿತ ಎಂದು ನಿಲ್ಲಬಹುದು ಅನ್ನುವ ಪ್ರಶ್ನೆಗೆ ನಾವು ಮೊದಲು ಅರಿತುಕೊಳ್ಳಬೇಕು.
 
ಮಾರುಕಟ್ಟೆಯ ಮೇಲಿನ ಒತ್ತಡಕ್ಕೆ ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತು ಕಚ್ಚಾ ತೈಲದ ಏರಿದ ಬೆಲೆ ಪ್ರಮುಖ ಕಾರಣಗಳಾಗಿವೆ. ತೈಲ ಬೆಲೆ ಎಲ್ಲಿಗೆ ಮುತ್ತಲಿದೆ  ಎಂಬುದಕ್ಕೆ ಸದ್ಯಕ್ಕೆ ಸ್ಪಷ್ಟ ಉತ್ತರವಿಲ್ಲ. 200 ಡಾಲರ್‌ಗೆ ತಲುಪಿದರೂ ಆಶ್ಚರ್ಯಪಡಬೇಕಿಲ್ಲ ಅನ್ನುವ ಮಾತುಗಳಿವೆ. ಒಂದೊಮ್ಮೆ 100 ಡಾಲರ್‌ಗೆ ಮೇಲೆ ಬೆಲೆ ಏರಿದರೆ, ಷೇರು ಮಾರುಕಟ್ಟೆ ನೆಲ ಕಚ್ಚುವುದು ಖಚಿತ.

ಇದರೊಂದಿಗೆ ಅಮೆರಿಕದ ಬಾಂಡ್‌ಗಳ ಮೇಲಿನ ಇಳುವರಿ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರ ಮಾರಾಟ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆಯೂ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿವೆ. ಅಕ್ಟೋಬರ್ ತಿಂಗಳಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಹಿಂಪಡೆದಿದ್ದಾರೆ.

ಮಧ್ಯಪ್ರಾಚ್ಯದ ಸಂಘರ್ಷ ಶಮನಗೊಂಡು ಕಚ್ಚಾ ತೈಲದ ಬೆಲೆ ಇಳಿಕೆಯಾದರೆ ಮಾರುಕಟ್ಟೆ ಗಗನಕ್ಕೇರಬಹುದು. ಆದರೆ ಯುದ್ಧ ಯಾವಾಗ ಕೊನೆಗೊಳ್ಳಲಿದೆ ಎಂದು ನಿಖರವಾಗಿ ಊಹಿಸುವುದು ಕಷ್ಟ. ಹೀಗಾಗಿ, ಮಾರುಕಟ್ಟೆಯ ಚೇತರಿಕೆಯ ನಿರೀಕ್ಷೆಯೊಂದನ್ನೇ ಆಧರಿಸಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ.

ಇಷ್ಟೆಲ್ಲಾ ಅನಿಶ್ಚಿತತೆಯ ನಡುವೆಯೂ ಮಾರುಕಟ್ಟೆ ಚೇತರಿಸಿಕೊಳ್ಳಲು ಕೆಲವು ಅಂಶಗಳು ಪೂರಕವಾಗಬಹುದು. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮೊದಲ ಹಂತದ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂಬ ವರದಿಗಳು ಆಶಾವಾದ ಮೂಡಿಸಿವೆ. ಒಪ್ಪಂದ ಅಂತಿಮಗೊಂಡು ಅನುಷ್ಠಾನಕ್ಕೆ ಬಂದರೆ ಕೆಲವು ವಲಯಗಳಿಗೆ ಅನುಕೂಲವಾಗಬಹುದು. ಆದರೆ ಮಾತುಕತೆಗಳ ಅಂತಿಮ ಫಲಿತಾಂಶದ ಬಗ್ಗೆ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಇದರೊಂದಿಗೆ ದೀರ್ಘಕಾಲೀನ ಬಂಡವಾಳ ಗಳಿಕೆ ತೆರಿಗೆ (LTCG) ಮತ್ತು ಷೇರು ವಹಿವಾಟು ತೆರಿಗೆ (STT) ಕುರಿತ ಚರ್ಚೆಯೂ ಹೂಡಿಕೆದಾರರ ಗಮನ ಸೆಳೆದಿದೆ. ಈ ತೆರಿಗೆಗಳಲ್ಲಿ ಬದಲಾವಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡಲಾಗುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಕುರಿತು ಚರ್ಚೆಗೆ ಸರ್ಕಾರ ಮುಕ್ತವಾಗಿದೆ ಎಂದು ಹೇಳಿದ್ದಾರೆ. ಆದರೆ ತೆರಿಗೆ ಕಡಿತ ಅಥವಾ ರದ್ದತಿ ಕುರಿತು ಯಾವುದೇ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಬಹುದು ಎಂಬ ನಿರೀಕ್ಷೆಯಿದೆ.

ಹಾಗಾದರೆ, ಈಗ ಹೂಡಿಕೆದಾರರು ಏನು ಮಾಡಬೇಕು?

ಮಾರುಕಟ್ಟೆಯ ಏರಿಳಿತದ ಬಗ್ಗೆ ಆತಂಕವಿರುವವರು ನಿಯಮಿತವಾಗಿ ಹೂಡಿಕೆ ಮಾಡುವ ವಿಧಾನವನ್ನು ಪರಿಗಣಿಸಬಹುದು. ಮ್ಯೂಚುವಲ್ ಫಂಡ್‌ಗಳಲ್ಲಿ SIP ಮೂಲಕ ಹೂಡಿಕೆ ಮಾಡುವುದು ಒಂದು ಆಯ್ಕೆ. ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವವರು ಕೂಡ ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಹೂಡುವ ಬದಲು ಹಂತ ಹಂತವಾಗಿ ಹೂಡಿಕೆ ಮಾಡುವ ಬಗ್ಗೆ ಯೋಚಿಸಬಹುದು. ಇದರಿಂದ ಖರೀದಿ ಬೆಲೆಯ ಏರಿಳಿತದ ಪರಿಣಾಮವನ್ನು ಸಮತೋಲನಗೊಳಿಸಲು ನೆರವಾಗಬಹುದು.

ನಿಮ್ಮ ಬಳಿ ಹೆಚ್ಚುವರಿ ಹಣವಿದ್ದು, ಕನಿಷ್ಠ ಮೂರು ವರ್ಷಗಳ ಕಾಲ ಹೂಡಿಕೆಯನ್ನು ಮುಂದುವರಿಸುವ ಸಾಮರ್ಥ್ಯವಿದ್ದರೆ, ಉತ್ತಮ ಕಂಪನಿಗಳ ಷೇರುಗಳನ್ನು ಆಯ್ದುಕೊಳ್ಳುವ ಬಗ್ಗೆ ಪರಿಶೀಲಿಸಬಹುದು.

ಆಕಾಶದಿಂದ ಬೀಳುವ ಉಲ್ಕೆಯಿಂದ ದೂರವಿರುವುದು ಎಷ್ಟು ಮುಖ್ಯವೋ, ಅಪರೂಪದ ಅವಕಾಶವನ್ನು ಗುರುತಿಸುವುದೂ ಅಷ್ಟೇ ಮುಖ್ಯ. ಆದರೆ ಷೇರು ಮಾರುಕಟ್ಟೆಯಲ್ಲಿ ಪ್ರತಿಯೊಂದು ಬೆಲೆ ಕುಸಿತವೂ ಅವಕಾಶವಾಗಿರುವುದಿಲ್ಲ. ಸರಿಯಾದ ಕಂಪನಿಯನ್ನು ಸೂಕ್ತ ಬೆಲೆಯಲ್ಲಿ ಗುರುತಿಸುವುದೇ ಹೂಡಿಕೆದಾರರ ನಿಜವಾದ ಸವಾಲು.

ನೀವು ಈಗಿನ ಪರಿಸ್ಥಿತಿಯಲ್ಲಿ ಪರಿಗಣಿಸಬಹುದಾದ ಕೆಲವು ಷೇರುಗಳು ಇಲ್ಲಿವೆ.

  • ರಿಲಯನ್ಸ್ ಇಂಡಸ್ಟ್ರೀಸ್
  • ಅದಾನಿ ಪೋರ್ಟ್ಸ್ 
  • ಬ್ರಿಟಾನಿಯಾ ಇಂಡಸ್ಟ್ರೀಸ್ 
  • ಅವೆನ್ಯೂ ಸೂಪರ್‌ಮಾರ್ಟ್ಸ್ (ಡಿ-ಮಾರ್ಟ್)
  • ಫೋರ್ಟಿಸ್ ಹೆಲ್ತ್‌ಕೇರ್
  • ಮ್ಯಾಕ್ಸ್ ಹೆಲ್ತ್‌ಕೇರ್ ಇನ್‌ಸ್ಟಿಟ್ಯೂಟ್
  • ವಿ-ಗಾರ್ಡ್ ಇಂಡಸ್ಟ್ರೀಸ್
  • ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್
  • ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ
  • ಎಸಿಸಿ
  • ಹೆಚ್‌ಡಿಎಫ್‌ಸಿ ಬ್ಯಾಂಕ್
  • ಇಂಡಿಯಾ ಸಿಮೆಂಟ್ಸ್
  • ಎಸ್‌ಜೆವಿಎನ್
  • ಬಿಇಎಲ್
  • ಐಡಿಬಿಐ 

ಈ ಪಟ್ಟಿಯಲ್ಲಿರುವ ಕಂಪನಿಗಳೆಲ್ಲವೂ ಈಗಲೇ ಖರೀದಿಸಲು ಸೂಕ್ತವಾಗಿವೆ ಎಂದರ್ಥವಲ್ಲ. ಪ್ರತಿಯೊಂದು ಕಂಪನಿಯ ಮೌಲ್ಯಮಾಪನ, ಆರ್ಥಿಕ ಸ್ಥಿತಿ ಮತ್ತು ಭವಿಷ್ಯದ ಬೆಳವಣಿಗೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಿದ ಬಳಿಕವೇ ಹೂಡಿಕೆ ನಿರ್ಧಾರ ಕೈಗೊಳ್ಳಬೇಕು. ಮಾರುಕಟ್ಟೆ ಕುಸಿತದ ಸಮಯದಲ್ಲಿ ತಾಳ್ಮೆ, ವೈವಿಧ್ಯಮಯ ಹೂಡಿಕೆ ಮತ್ತು ಅಪಾಯವನ್ನು ಅರ್ಥಮಾಡಿಕೊಂಡು ನಿರ್ಧಾರ ಕೈಗೊಳ್ಳುವುದು ಅತ್ಯಂತ ಮುಖ್ಯ.

ಲೇಖಕರು: ಸುರಭಿ
ಇಮೇಲ್: bhatsurabhi311@gmail.com

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.