‘ಟ್ಯಾಬ್ಲೆಟ್ ಆರೀಫ್’ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ

ಬಂಧಿತ ಆರೋಪಿಯನ್ನು ಪಡೀಲ್ ನಿವಾಸಿ ಮೊಹಮ್ಮದ್ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು (21) ಎಂದು ಗುರುತಿಸಲಾಗಿದೆ. ಈತ ಮೃತ ರೌಡಿಶೀಟರ್ “ಟೊಪ್ಪಿ ನೌಫಾಲ್” ಎಂಬಾತನ ಸಹೋದರನಾಗಿದ್ದಾನೆ.

May 25, 2026 - 21:48
‘ಟ್ಯಾಬ್ಲೆಟ್ ಆರೀಫ್’ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ

ಮಂಗಳೂರು, ಮೇ 25: ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೈನ್ ಅಲಿಯಾಸ್ “ಟ್ಯಾಬ್ಲೆಟ್ ಆರೀಫ್” ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಪಡೀಲ್ ನಿವಾಸಿ ಮೊಹಮ್ಮದ್ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು (21) ಎಂದು ಗುರುತಿಸಲಾಗಿದೆ. ಈತ ಮೃತ ರೌಡಿಶೀಟರ್ “ಟೊಪ್ಪಿ ನೌಫಾಲ್” ಎಂಬಾತನ ಸಹೋದರನಾಗಿದ್ದಾನೆ.

27-03-2026ರಂದು ಬೆಳಗಿನ ಜಾವ ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಟ್ಯಾಬ್ಲೆಟ್ ಆರೀಫ್‌ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ, ಕೆಡವಿ ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಿ ಕೊಲೆ ಮಾಡಿದ್ದರು. ಕೃತ್ಯದ ಬಳಿಕ ಆರೋಪಿಗಳು ತಾವು ಬಳಸಿದ್ದ ಕಾರನ್ನು ಬಂಟ್ವಾಳ ತಾಲೂಕಿನ ಬುಡೋಳಿ ಎಂಬಲ್ಲಿ ಬಿಟ್ಟು ಪರಾರಿಯಾಗಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ತನಿಖೆಯನ್ನು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು.

ಆರೋಪಿಯ ಪಾತ್ರ ಮತ್ತು ಅಪರಾಧ ಹಿನ್ನೆಲೆ:
ಬಂಧಿತ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು, ಕೊಲೆಗೆ ಹಣಕಾಸಿನ ನೆರವು ನೀಡಿದ್ದ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

2026ರ ಫೆಬ್ರವರಿ ತಿಂಗಳಲ್ಲಿ ಆರೀಫ್ ಹುಸೇನ್ ಕೊಲೆಗೆ ಸಂಚು ರೂಪಿಸಿದ್ದ ವೇಳೆ ಈತ ಭಾಗಿಯಾಗಿದ್ದ ಎನ್ನಲಾಗಿದೆ.
ಹಳೇ ಪ್ರಕರಣಗಳು: ಈತನ ವಿರುದ್ಧ ಈಗಾಗಲೇ 2025ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ ಹಾಗೂ 2024ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣಗಳು ದಾಖಲಾಗಿವೆ.
ಈಗಾಗಲೇ 11 ಮಂದಿ ಜೈಲು ಪಾಲು:
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈಗಾಗಲೇ 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರ ವಿವರ: ಮೊಹಮ್ಮದ್ ರಿಫಾತ್ ಆಲಿ, ಇಬ್ರಾಹಿಂ ಖಲೀಲ್, ಅಶ್ಫಕ್ @ ಜುಟ್ಟು ಅಶ್ಫಕ್, ಉಮ್ಮರ್ ಫಾರೂಕ್ ಇರ್ಫಾನ್, ಮೊಹಮ್ಮದ್ ಶಾಕೀರ್, ಮೊಹಮ್ಮದ್ ರಿಜ್ವಾನ್ @ ರಿಜ್ವಾನ್, ಮೊಹಮ್ಮದ್ ಇರ್ಷಾದ್ @ ಅಕುಡು, ಮಹಮ್ಮದ್ ಹರ್ಷಾದ್, ನಿಶಾಕ್ @ ಪುಚ್ಚೆ ನಿಶಾಕ್, ಬಿ. ಜುನೈದ್ @ ಕೊಕ್ಕಡ ಜುನೈದ್ ಮತ್ತು ಮೊಹಮ್ಮದ್ ಸುಹೇಲ್ @ ಚಿಯಾ.
ಪ್ರಸ್ತುತ ಬಂಧಿತರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದು, ಇವರೆಲ್ಲರ ವಿರುದ್ಧ ಕಠಿಣ “ಕೋಕಾ ಕಾಯಿದೆ” (KCOCA) ಅಡಿಯಲ್ಲಿ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.