ಕಾಂಗ್ರೆಸ್ ಸರಕಾರದಿಂದ ವಿಶ್ವಾಸದ್ರೋಹ- ನಿತಿನ್ ನವೀನ್

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ರಾಷ್ಟ್ರೀಯ ಅಧ್ಯಕ್ಷರಿಂದ ಸಲಹೆ ದೊರೆತಿದೆ, ಅಧ್ಯಕ್ಷರಾಗಿ ಮೊದಲ ಬಾರಿಗೆ ರಾಜ್ಯಕ್ಕೆ ಬಂದಿರುವ ಅವರಿಂದ ಹಲವು ಉಪಯುಕ್ತ ಇತರ ಸಲಹೆಗಳು ಸಿಕ್ಕಿವೆ ಎಂದ ಮಾಜಿ ಸಚಿವ ಸಿ.ಟಿ.ರವಿ

May 24, 2026 - 19:24
ಕಾಂಗ್ರೆಸ್ ಸರಕಾರದಿಂದ ವಿಶ್ವಾಸದ್ರೋಹ- ನಿತಿನ್ ನವೀನ್

ಬೆಂಗಳೂರು, ಮೇ 24: ಕರ್ನಾಟಕದ ಕಾಂಗ್ರೆಸ್ ಸರಕಾರವು ಇಲ್ಲಿನ ಜನರಿಗೆ ಕಳೆದ 3 ವರ್ಷಗಳಲ್ಲಿ ವಂಚಿಸುವ ಕೆಲಸ ಮಾಡಿದೆ. ಇಲ್ಲಿನ ಜನರಿಗೆ ವಿಶ್ವಾಸದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಒಳಜಗಳದಿಂದ ಜನಹಿತದ ಕೆಲಸಗಳನ್ನು ಕಡೆಗಣಿಸಿದ್ದಾರೆ. ಜನಹಿತಕ್ಕೂ ಈ ಸರಕಾರಕ್ಕೂ ಯಾವುದೇ ಸಂಬಂಧ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಸರಕಾರ ನಡೆಸುತ್ತಿರುವ ನಾಯಕರು ಸರಕಾರವನ್ನು ತಮಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಇಲ್ಲಿನ ಸರಕಾರ ದೆಹಲಿ ಕಾಂಗ್ರೆಸ್ಸಿನ ಎಟಿಎಂ ಆಗಿದೆ ಎಂದು ದೂರಿದರು.

ನಮ್ಮ ಪಕ್ಷದ ಜಿಲ್ಲಾ ತರಬೇತಿ ಶಿಬಿರಗಳು ನಡೆಯುತ್ತಿವೆ. ಅದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಪಕ್ಷದ ಚಟುವಟಿಕೆ, ಸಕ್ರಿಯ ಸಂಘಟನೆ ಎಂಬುದನ್ನು ತಿಳಿದುಕೊಂಡಿದ್ದಾಗಿ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾಮೋಹನ್ ದಾಸ್ ಅಗ್ರವಾಲ್, ಪಕ್ಷದ ಪ್ರಮುಖರು ಇದ್ದರು.

ಬಿಜೆಪಿ ಗೆಲುವಿಗೆ ರಾಷ್ಟ್ರೀಯ ಅಧ್ಯಕ್ಷರಿಂದ ಸಲಹೆ

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್ ಅವರು ಸಲಹೆ ಮತ್ತು ಸೂಚನೆಗಳನ್ನು ನೀಡಿದರು ಎಂದು ಮಾಜಿ ಸಚಿವ ಸಿ.ಟಿ.ರವಿ ಅವರು ಹೇಳಿದ್ದಾರೆ.

ನಿತಿನ್ ನವೀನ್ ಅವರೊಂದಿಗೆ ನಡೆದ ಸಭೆಯ ನಂತರ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‍ನ ವೈಫಲ್ಯಗಳನ್ನು ಜನರಿಗೆ ಎತ್ತಿತೋರಿಸಿ ಬಿಜೆಪಿ ವಿಶ್ವಾಸಾರ್ಹ ಪಕ್ಷ ಎಂಬುದನ್ನು ಮನವರಿಕೆ ಮಾಡಿಕೊಡಲು ಎಲ್ಲರೂ ಸಂಘಟನಾತ್ಮಕವಾಗಿ ಶ್ರಮಿಸಬೇಕು. ಪಕ್ಷಕ್ಕಾಗಿ ಕಟಿಬದ್ಧರಾಗಿ ದುಡಿಯಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ಸಲಹೆ ನೀಡಿದರು ಎಂದು ವಿವರ ನೀಡಿದರು.

ನಿತಿನ್ ನವೀನ್ ಅವರು ಅಧ್ಯಕ್ಷರಾದ ನಂತರ ಕರ್ನಾಟಕಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಪಕ್ಷದ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರ ಮಟ್ಟದ ಮೇಲಿನವರೊಂದಿಗೆ ಸಂವಾದ ನಡೆಸಿದರು. ಪಕ್ಷದ ಪರಿಶ್ರಮದಿಂದಾಗಿ ಇಂದು 22ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 400 ಕ್ಕೂ ಹೆಚ್ಚು ಸಂಸದರಿದ್ದಾರೆ, 2000 ಕ್ಕೂ ಹೆಚ್ಚು ಶಾಸಕರಿದ್ದಾರೆ. ಇದು ಪಕ್ಷದ ಮೇಲೆ ಜನರು ಇಟ್ಟು ವಿಶ್ವಾಸದಿಂದ ಸಾಧ್ಯವಾಗಿದೆ. ಇದೇ ನಂಬಿಕೆಯನ್ನು ಮುಂದಿನ ಚುನಾವಣೆಗಳಲ್ಲಿ ಉಳಿಸಿಕೊಳ್ಳಬೇಕು. ಪ್ರತಿಯೊಬ್ಬ ಮುಖಂಡರು, ಶಾಸಕರು ಕಾರ್ಯಕರ್ತರೊಂದಿಗೆ ಆತ್ಮೀಯ ಸಂಬಂಧ ಇಟ್ಟುಕೊಳ್ಳಬೇಕು. ಜನರೊಟ್ಟಿಗೆ ಸಂವಾದ ನಡೆಸಬೇಕು, ಜನಪರ ಕಾರ್ಯಗಳ ಮೂಲಕವೇ ಗೆಲ್ಲಬೇಕು, ಜನಪರ ಹೋರಾಟಗಳ ಮೂಲಕ ಸಮಸ್ಯೆಗಳ ನಿವಾರಣೆಗೆ ಪರಿಹಾರ ಕೊಡಬೇಕು ಎಂಬ ಮಾತನ್ನು ಹೇಳಿದರು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಯಾವ ವಿಶ್ವಾಸವನ್ನು ಮೂಡಿಸಿ ಹೇಗೆ ಅಧಿಕಾರಕ್ಕೆ ಬಂದಿತ್ತೋ ಆ ವಿಶ್ವಾಸವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡಿದವರು ಈಗ ಎಲ್ಲ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೆಚ್ಚಿನ ಸಚಿವರ ಮೇಲೆ ಭ್ರಷ್ಟಾಚಾರ ಆರೋಪಗಳಿವೆ, ಮುಖ್ಯಮಂತ್ರಿಗಳೂ  ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗಿಲ್ಲ. ಜನರ ಬದುಕನ್ನು ಹಸನು ಮಾಡುವ ಭರವಸೆ ಕೊಟ್ಟ ಕಾಂಗ್ರೆಸ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ತರ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿಂದೆ ಕಾಂಗ್ರೆಸ್ ನೀತಿ ಇದೆ. ಕೇವಲ ಗ್ಯಾರಂಟಿ ಪ್ರಚಾರದಲ್ಲಿ ಸರ್ಕಾರ ತೊಡಗಿದೆ. ಆದರೆ ಜನರ ಬದುಕಿಗೆ ಗ್ಯಾರಂಟಿ ಇಲ್ಲದಾಗಿದೆ. ಕಾನೂನು ಸುವ್ಯವಸ್ಥೆ ಹದಗಟ್ಟಿದೆ. ಯುವಕರು ಹತಾಶರಾಗಿದ್ದಾರೆ. ಅತಿ ಹೆಚ್ಚು ಮಹಿಳೆಯರ ನಾಪತ್ತೆ ಪ್ರಕರಣ ಆಗಿದೆ. ಹೀಗೆ ಎಲ್ಲದರಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಇದೊಂದೇ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡದು. ಮುಂದೆ ನಾವೇ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಇರಬೇಡಿ ಎಂದು ಎಚ್ಚರಿಕೆ ನೀಡಿದರು ಎಂದು ನುಡಿದರು.

ತಮಿಳುನಾಡಿನಲ್ಲಿ ಡಿಎಂಕೆ ವೈಫಲ್ಯ ಎದ್ದು ಕಾಣುತ್ತಿತ್ತು. ಇದೊಂದೇ ಎಐಡಿಎಡಿಎಂಕೆ ಅಧಿಕಾರಕ್ಕೆ ಬರಲು ಸಹಾಯ ಮಾಡಬಹುದು ಎಂದು ಭಾವಿಸಲಾಗಿತ್ತು. ಆದರೆ ಟಿವಿಕೆ ಪಕ್ಷ ಮಧ್ಯೆ ಬಂದು ಅಧಿಕಾರ ಪಡೆಯಿತು. ಕರ್ನಾಟಕದಲ್ಲೂ ಬಿಜೆಪಿ ನಾಯಕರು ಮುಂದೆ ನಮ್ಮದೇ ಅಧಿಕಾರ ಎಂದು ಸುಮ್ಮನೆ ಕೂರಬೇಡಿ. ದೇಶದಲ್ಲಿ ಕಾಂಗ್ರೆಸ್‍ಗೆ ಮೋದಿ ಅವರು ಒಳ್ಳೆಯ ಪರ್ಯಾಯ ಹೇಗೆ ಕೊಟ್ಟರೋ ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಬಿಜೆಪಿ ಉತ್ತಮ ಪರ್ಯಾಯ ಎಂದು ಜನ ಭಾವಿಸುವ ರೀತಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು ಎಂದರು.

ಕಾಂಗ್ರೆಸ್ ವೈಫಲ್ಯ ಇಟ್ಟುಕೊಂಡು ನಿರಂತರವಾಗಿ ಹೋರಾಟದ ಮೂಲಕ ತಂಡವಾಗಿ ಕೆಲಸ ಮಾಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಮೂರು ವರ್ಷಗಳ ಆಡಳಿತ ವೈಫಲ್ಯ ಕುರಿತು ಆರೋಪಪಟ್ಟಿ ತಯಾರಿಸಿ ಜನರ ಮುಂದಿಡಲು ಯೋಜನೆ ರೂಪಿಸಿ. ಕರ್ನಾಟಕವು ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ದೇಶದಲ್ಲೇ ಬಲವಾದ ಸಂಘಟನೆ ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಜನಪರ ಹೋರಾಟ ಮಾಡಿದರೆ ಜನರೇ ಅಧಿಕಾರಕ್ಕೆ ಬರುವ ಶಕ್ತಿಯನ್ನು ಕೊಡುತ್ತಾರೆ ಎಂಬುದನ್ನು ಅರಿಯಿರಿ ಎಂದು ಹೇಳಿದರು ಎಂದರು.

ವ್ಯಕ್ತಿ ಹಿತಕ್ಕಾಗಿ ಕೆಲಸ ಮಾಡದೇ ಜನರ ಮತ್ತು ಪಕ್ಷದ ಹಿತ ರಕ್ಷಿಸುವ ಕೆಲಸ ಮಾಡಿ. ರಾಜ್ಯದಲ್ಲಿನ ಆರಾಜಕ ಶಕ್ತಿ ಬಗ್ಗೆಯೂ ಎಚ್ಚರ ವಹಿಸಿ ಎಂದು ಸಲಹೆ ನೀಡಿದರು ಎಂದು ಹೇಳಿದರು. ಕರ್ನಾಟಕದ ಅಸ್ಮಿತೆ ಜೊತೆಗೆ ರಾಷ್ಟ್ರದ ಗೌರವ ಉಳಿಸಿ ನಾವು ಕೆಲಸ ಮಾಡಬೇಕಾಗಿದೆ. ದೇಶದ ಸಮಗ್ರತೆಗೆ ಅಡ್ಡಿಯಾಗದಂತೆ ಎಲ್ಲಾ ರಾಜ್ಯಗಳಲ್ಲಿ ಪ್ರಾದೇಶಿಕ ಅಸ್ಮಿತೆ ಉಳಿಸಿಕೊಂಡು ರಾಷ್ಟ್ರದ ಸಮಗ್ರತೆ ಕಾಪಾಡಿ ಎಂದು ಸಲಹೆ ನೀಡಿದ್ದಾಗಿ ತಿಳಿಸಿದರು.

ಮುಂದಿನ ಮೂರು ದಿನಗಳ ಪ್ರವಾಸದ ವೇಳೆ ವಿವರವಾಗಿ ಚರ್ಚೆ ಮಾಡಲಾಗುವುದು. ವಿಧಾನ ಪರಿಷತ್, ವಿಧಾನಸಭೆ ಉಪ ಚುನಾವಣೆ, ಜಿಬಿಎ ಚುನಾವಣೆ ಕಡೆಗೆ ಗಮನಕೊಡಿ. ಗೆಲ್ಲಲು ಕಾರ್ಯಯೋಜನೆ ತಯಾರಿಸಿ. ಕೋರ್ ಕಮಿಟಿ ಈ ಬಗ್ಗೆ ಅವಲೋಕನ ಮಾಡಲಿ ಎಂದರು. ಎಸ್‍ಐಆರ್ ಸಂಬಂಧ ಕಾಂಗ್ರೆಸ್ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದೆ. ನೆಹರು, ರಾಜೀವ್ ಗಾಂಧಿ, ಇಂದಿರಾಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಎಸ್‍ಐಆರ್ ಮಾಡಿದರೆ ಸರಿ. ಆದರೆ ಬಿಜೆಪಿ ಮಾಡಿದರೆ ತಪ್ಪು ಎನ್ನುವಂತಾಗಿದೆ. ಕಾಂಗ್ರೆಸ್‍ಗೆ ಎಲ್ಲವನ್ನೂ ವಿರೋಧಿಸುವ ಸಿಂಡ್ರೋಮ್ ಇದೆ ಎಂದು ವ್ಯಂಗ್ಯವಾಡಿದರು.