ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟ; ಇಬ್ಬರು ರೌಡಿಶೀಟರ್‌ಗಳ ಬಂಧನ, ಕರು ರಕ್ಷಣೆ

ವಿಚಾರಣೆ ವೇಳೆ, ಆರೋಪಿಗಳು ಕಳೆದ ಒಂದು ವಾರದಿಂದ ಬೇರೆ ಬೇರೆ ಕಡೆಗಳಿಂದ ದನಗಳನ್ನು ಕಳ್ಳತನ ಮಾಡಿಕೊಂಡು ಬಂದು, ಸಾಹುಲ್ ಹಮೀದ್ ರವರ ಮನೆಯ ಬಳಿ ಕಡಿದು ಮಾಂಸ ಮಾಡಿ ಮಾರಾಟ ಮಾಡಲು ಅಥವಾ ಇತರರಿಗೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ.

May 16, 2026 - 06:33
ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟ; ಇಬ್ಬರು ರೌಡಿಶೀಟರ್‌ಗಳ ಬಂಧನ, ಕರು ರಕ್ಷಣೆ

ಮೂಡಬಿದ್ರೆ: ಮಾರುತಿ ಬ್ರೀಜಾ ಕಾರಿನಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಮತ್ತು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶರವೇಗದ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬಂಧಿತರಿಂದ ಒಂದು ಗಂಡು ಕರು ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೇ 14ರಂದು ಮುಂಜಾನೆ 7 ಗಂಟೆಗೆ ಮೂಡಬಿದ್ರೆ ಠಾಣಾ ಪಿಎಸ್‌ಐ ಕೃಷ್ಣಪ್ಪ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಮಾರುತಿ ಬ್ರೀಜಾ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

ತಕ್ಷಣ ಎಚ್ಚೆತ್ತ ಪೊಲೀಸ್ ತಂಡ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ನಾಕಾಬಂಧಿ ಹೂಡಿ ವಾಹನ ತಪಾಸಣೆ ಆರಂಭಿಸಿತು. ಬೆಳಿಗ್ಗೆ 7.30ರ ಸುಮಾರಿಗೆ ಆ ಕಡೆಯಿಂದ ಬಂದ ಬೂದು ಬಣ್ಣದ ಮಾರುತಿ ಬ್ರೀಜಾ ಕಾರಿಗೆ (KA19MK4265) ನಿಲ್ಲಿಸಲು ಸೂಚಿಸಿದಾಗ, ಚಾಲಕ ವಾಹನವನ್ನು ನಿಲ್ಲಿಸದೇ ಅತಿವೇಗವಾಗಿ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ.

ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ ಪೊಲೀಸರು

ಪೊಲೀಸರು ತಕ್ಷಣವೇ ಸದ್ರಿ ವಾಹನವನ್ನು ಬೆನ್ನಟ್ಟಿದ್ದಾರೆ. ಆರೋಪಿಗಳು ಕಾರನ್ನು ಗುಂಡುಕಲ್ಲು 5 ಸೈಂಟ್ಸ್ ರಸ್ತೆಯ ಕಡೆಗೆ ತಿರುಗಿಸಿ, ಅಲ್ಲಿನ ನಿವಾಸಿ ಸಾಹುಲ್ ಹಮೀದ್ ಎಂಬುವರ ಮನೆ ಕಂಪೌಂಡ್ ಒಳಗೆ ನಿಲ್ಲಿಸಿ ಓಡಿಹೋಗಲು ಯತ್ನಿಸಿದ್ದಾರೆ. ಆದರೆ  ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರಿನೊಳಗೆ ಕರು ಹಿಂಸಾತ್ಮಕ ಬಂಧನ!

ಬಂಧಿತ ಆರೋಪಿಗಳನ್ನು ಮೂಡಬಿದ್ರೆ ಠಾಣಾ ಎಂ.ಓ.ಬಿ (ರೌಡಿಶೀಟರ್) ಆಗಿರುವ ಹಂಡೇಲಿನ ಮೊಹಮ್ಮದ್ ಆರಿಫ್ ಮತ್ತು ಆತನ ಸಹಚರ ಗಂಟಾಲಕಟ್ಟೆಯ ಇಮ್ರಾನ್ @ ಇಬ್ರಾಹಿಂ ಎಂದು ಗುರುತಿಸಲಾಗಿದೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ, ಹಿಂಬದಿ ಸೀಟನ್ನು ತೆಗೆದು ಅದರ ಮೇಲೆ ನೀಲಿ ಪ್ಲಾಸ್ಟಿಕ್ ಹಾಸಿ, ಒಂದು ಗಂಡು ಕರುವಿನ ಕಾಲು ಮತ್ತು ತಲೆಯನ್ನು ಹಗ್ಗದಿಂದ ಕ್ರೂರವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ.

ವಿಚಾರಣೆ ವೇಳೆ, ಆರೋಪಿಗಳು ಕಳೆದ ಒಂದು ವಾರದಿಂದ ಬೇರೆ ಬೇರೆ ಕಡೆಗಳಿಂದ ದನಗಳನ್ನು ಕಳ್ಳತನ ಮಾಡಿಕೊಂಡು ಬಂದು, ಸಾಹುಲ್ ಹಮೀದ್ ರವರ ಮನೆಯ ಬಳಿ ಕಡಿದು ಮಾಂಸ ಮಾಡಿ ಮಾರಾಟ ಮಾಡಲು ಅಥವಾ ಇತರರಿಗೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ.


ಆರೋಪಿಗಳ ಹಿನ್ನೆಲೆ: ಇಬ್ಬರ ಮೇಲೂ ಇವೆ ಸಾಲು ಸಾಲು ಪ್ರಕರಣಗಳು

ಬಂಧಿತ ಇಬ್ಬರೂ ಆರೋಪಿಗಳು ಹಳೆಯ ಅಪರಾಧ ಹಿನ್ನೆಲೆ ಹೊಂದಿದ್ದು, ಇವರ ಮೇಲೆ ಈಗಾಗಲೇ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ.

1. ಮೊಹಮ್ಮದ್ ಆರಿಫ್ ಮೇಲಿರುವ ಪ್ರಕರಣಗಳು:

ಬಜ್ಪೆ ಪೊಲೀಸ್ ಠಾಣೆ: ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ (ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ).
ಬಣಕಲ್ ಪೊಲೀಸ್ ಠಾಣೆ: ದನ ಕಳ್ಳತನ, ಗೋಹತ್ಯೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ.
ಮೂಡಬಿದ್ರೆ ಪೊಲೀಸ್ ಠಾಣೆ: ಎರಡು ಪ್ರತ್ಯೇಕ ಜಾನುವಾರು ಕಳ್ಳತನ ಪ್ರಕರಣಗಳು (ತನಿಖೆಯ ಹಂತದಲ್ಲಿದೆ).

2. ಇಮ್ರಾನ್ @ ಇಬ್ರಾಹಿಂ ಮೇಲಿರುವ ಪ್ರಕರಣಗಳು:

ಮೂಡಬಿದ್ರೆ ಪೊಲೀಸ್ ಠಾಣೆ: ಎನ್‌ಡಿಪಿಎಸ್ (ಮಾದಕ ದ್ರವ್ಯ) ಕಾಯ್ದೆಯಡಿ ಒಂದು ಪ್ರಕರಣ, ಕೆ.ಪಿ ಆಕ್ಟ್ ಅಡಿ ಎರಡು ಜೂಜಾಟದ ಪ್ರಕರಣಗಳು ಹಾಗೂ ಮೊಹಮ್ಮದ್ ಆರಿಫ್ ಜೊತೆಗೂಡಿ ನಡೆಸಿದ ಎರಡು ಜಾನುವಾರು ಕಳ್ಳತನ ಪ್ರಕರಣಗಳು.

ಕಾರ್ಕಳ ನಗರ ಪೊಲೀಸ್ ಠಾಣೆ: ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣ ದಾಖಲಾಗಿದೆ.

ಸದ್ಯ ಪೊಲೀಸರು ಜಾನುವಾರು, ಕಾರು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.