ಸೆ.7ರೊಳಗೆ ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡು ಸಿದ್ಧ: ಸಚಿವ ಜಾರ್ಜ್‌

Coastal-Malnad Tourism Policy: ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡನ್ನು ಸೆ.7ರೊಳಗೆ ಸಿದ್ಧಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರಾದ ಕೆ.ಜೆ.ಜಾರ್ಜ್‌ ತಿಳಿಸಿದರು.

Aug 22, 2026 - 17:57
Aug 22, 2026 - 18:09
ಸೆ.7ರೊಳಗೆ ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡು ಸಿದ್ಧ: ಸಚಿವ ಜಾರ್ಜ್‌

ಬೆಂಗಳೂರು: ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡನ್ನು ಸೆ.7ರೊಳಗೆ ಸಿದ್ಧಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರಾದ  ಕೆ.ಜೆ.ಜಾರ್ಜ್‌ ತಿಳಿಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ಕರಾವಳಿ ಹಾಗೂ ಮಲೆನಾಡು ಭಾಗದ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಪ್ರಸ್ತಾವಿತ ನೀತಿಯಲ್ಲಿ ಅಳವಡಿಸಬೇಕಾದ ಪ್ರಮುಖ ಅಂಶಗಳು, ಪ್ರವಾಸೋದ್ಯಮ ಹೂಡಿಕೆಗೆ ಇರುವ ಅವಕಾಶಗಳು ಮತ್ತು ಸದ್ಯ ಎದುರಾಗುತ್ತಿರುವ ನಿಯಂತ್ರಣಾತ್ಮಕ ಸಮಸ್ಯೆಗಳ ಕುರಿತು ಸಚಿವರು ಸಮಗ್ರವಾಗಿ ಚರ್ಚಿಸಿದರು.

ಕರಾವಳಿ-ಮಲೆನಾಡು ಪ್ರದೇಶಗಳು ಕಡಲತೀರ, ಧಾರ್ಮಿಕ, ಸಾಂಸ್ಕೃತಿಕ ತಾಣಗಳು ಹಾಗೂ ಪ್ರಕೃತಿ ಪ್ರವಾಸೋದ್ಯಮ ಸೇರಿದಂತೆ ವೈವಿಧ್ಯಮಯ ಪ್ರವಾಸೋದ್ಯಮ ಸಂಪನ್ಮೂಲಗಳನ್ನು ಹೊಂದಿವೆ. ಈ ಸಾಮರ್ಥ್ಯವನ್ನು ಬಳಸಿಕೊಂಡು ಸ್ಥಳೀಯ ಆರ್ಥಿಕತೆ, ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ರೀತಿಯಲ್ಲಿ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ನೀತಿ ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಹೂಡಿಕೆಗೆ ಸಿಂಗಲ್‌ ವಿಂಡೋ ವ್ಯವಸ್ಥೆಗೆ ಸಲಹೆ:

ಈ ಸಭೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದಾಗುವವರಿಗೆ, ವಿವಿಧ ಇಲಾಖೆಗಳ ಅನುಮತಿಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಅಗತ್ಯವನ್ನು ಜನಪ್ರತಿನಿಧಿಗಳು ಪ್ರಸ್ತಾಪಿಸಿದರು.

ಶಾಸಕ ವಿ.ಸುನಿಲ್‌ ಕುಮಾರ್‌, ಕರಾವಳಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತೇಜನ ನೀಡಲು ಸಿಂಗಲ್‌ ವಿಂಡೋ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು. ವಿವಿಧ ಅನುಮತಿಗಳು ಮತ್ತು ಇಲಾಖೆಗಳ ಸಮನ್ವಯಕ್ಕೆ ಸರಳ ವ್ಯವಸ್ಥೆ ರೂಪಿಸುವುದು ಹೊಸ ಹೂಡಿಕೆಗಳನ್ನು ಆಕರ್ಷಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಿಆರ್‌ಜಡ್ ಪರಿಸರ & ಅರಣ್ಯ ನಿಯಮಗಳ ಕುರಿತು ಚರ್ಚೆ:

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿದ್ದರೂ, ಸಿಆರ್‌ಜಡ್, ಪರಿಸರ ಸೂಕ್ಷ್ಮ ವಲಯ ಮತ್ತು ಅರಣ್ಯ ಇಲಾಖೆಗೆ ಸಂಬಂಧಿಸಿದ ವಿವಿಧ ನಿಯಮಗಳಿಂದಾಗಿ ಕೆಲವು ಪ್ರವಾಸೋದ್ಯಮ ಯೋಜನೆಗಳ ಅನುಷ್ಠಾನದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿದರು.

ಕರಾವಳಿ ಪ್ರದೇಶದ ಪರಿಸರ ಸಂರಕ್ಷಣೆಯನ್ನು ಖಚಿತಪಡಿಸಿಕೊಂಡೇ, ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗುವ ರೀತಿಯಲ್ಲಿ ಸಂಬಂಧಿತ ನಿಯಮಗಳು ಮತ್ತು ಅನುಮತಿ ಪ್ರಕ್ರಿಯೆಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ:

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್‌ ಅರ್ಷದ್, ಜಿಲ್ಲೆಯಲ್ಲಿ ಹೋಟೆಲ್‌ಗಳು ಮತ್ತು ಪ್ರವಾಸೋದ್ಯಮ ಚಟುವಟಿಕೆಗಳನ್ನು ವಿಸ್ತರಿಸಲು ಅನುಕೂಲಕರ ವಾತಾವರಣ ನಿರ್ಮಿಸುವ ಅಗತ್ಯವನ್ನು ಪ್ರಸ್ತಾಪಿಸಿದರು. ಪ್ರವಾಸಿಗರ ಬೇಡಿಕೆ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆಗೆ ಅಗತ್ಯವಿರುವ ಸಮಯ ಮತ್ತು ಸಂಬಂಧಿತ ವ್ಯವಸ್ಥೆಗಳ ಕುರಿತು ನೀತಿಯಲ್ಲಿ ಸೂಕ್ತ ಅವಕಾಶ ಕಲ್ಪಿಸುವಂತೆ ತಿಳಿಸಿದರು.

ಈ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ.ರಾಮ್ ಪ್ರಸಾತ್ ಮನೋಹರ್, ಕ್ಯಾ.ಬ್ರಿಜೇಶ್‌ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ ಭಂಡಾರಿ, ಐವನ್‌ ಡಿಸೋಜಾ, ಹರೀಶ್‌ ಪೂಂಜಾ, ಉಮಾನಾಥ್‌ ಎ. ಕೋಟ್ಯಾನ್‌, ಭರತ್‌ ಶೆಟ್ಟಿ ವೈ, ಡಿ.ವೇದವ್ಯಾಸ ಕಾಮತ್‌, ರಾಜೇಶ್‌ ನಾಯಕ್‌ ಯು, ಭಾಗೀರಥಿ ಮುರುಳ್ಯ, ಅಶೋಕ್‌ ಕುಮಾರ್‌ ರೈ, ಗುರುರಾಜ್‌ ಶೆಟ್ಟಿ ಗಂಟಿಹೊಳೆ. ಕಿರಣ್‌ ಕುಮಾರ್‌ ಕೊಡ್ಗಿ, ಯಶ್‌ಪಾಲ್‌ ಸುವರ್ಣ ಮತ್ತು ಗುರ್ಮೆ ಸುರೇಶ್‌ ಶೆಟ್ಟಿ ಇದ್ದರು.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.