Arun Kumar Puthila: ಬೆಳೆ ವಿಮೆ ಪರಿಹಾರದಲ್ಲಿ ಕಡಿತ, ರೈತರ ಅನುಮಾನಗಳಿಗೆ ಸರ್ಕಾರ ಸ್ಪಷ್ಟನೆ ನೀಡಲಿ.. ಅರುಣ್ ಕುಮಾರ್ ಪುತ್ತಿಲ
Arun Kumar Puthila: ಬೆಳೆ ವಿಮೆ ಪರಿಹಾರ ಕಡಿತ ಸಂಬಂಧ, ರೈತರ ಅನುಮಾನಗಳಿಗೆ ಸರ್ಕಾರ ಸ್ಪಷ್ಟನೆ ನೀಡಲಿ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವ ಕುರಿತು ರೈತರಲ್ಲಿ ಅಸಮಾಧಾನ ಮತ್ತು ಹಲವು ಪ್ರಶ್ನೆಗಳು ಮೂಡಿವೆ. ಇದಕ್ಕೆ ರಾಜಕೀಯ ಆರೋಪ-ಪ್ರತ್ಯಾರೋಪಗಳ ಮೂಲಕ ಉತ್ತರ ನೀಡುವ ಬದಲು, ಬೆಳೆ ವಿಮಾ ವ್ಯವಸ್ಥೆಯಲ್ಲಿನ ಪ್ರತಿಯೊಂದು ಹಂತವನ್ನೂ ಪರಿಶೀಲಿಸಿ, ವಾಸ್ತವಾಂಶಗಳನ್ನು ರೈತರ ಮುಂದೆ ಬಹಿರಂಗಪಡಿಸಬೇಕು ಎಂದು ಪುತ್ತಿಲ ಪರಿವಾರದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ (Arun Kumar Puthila) ಒತ್ತಾಯಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ 'ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ' ಅತ್ಯುತ್ತಮ ಕೃಷಿಕ ಪರ ಯೋಜನೆಯಾಗಿದೆ. ಈ ಯೋಜನೆ ನಿರಂತರವಾಗಿ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯಬೇಕಾದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿಮಾ ಸಂಸ್ಥೆಗಳು ಹಾಗೂ ರೈತ ಪ್ರತಿನಿಧಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.
2016ರಲ್ಲಿ ಯೋಜನೆ ಜಾರಿಯಾದ ಬಳಿಕ, ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹಲವು ವರ್ಷಗಳಲ್ಲಿ ಉತ್ತಮ ಪ್ರಮಾಣದ ಬೆಳೆ ವಿಮೆ ಪರಿಹಾರ ದೊರೆತಿದೆ. 2018ರಲ್ಲಿ ಎಕರೆಗೆ ಸರಾಸರಿ ಸುಮಾರು ರೂ.1.28 ಲಕ್ಷ, 2020–21ರಲ್ಲಿ ರೂ.60,000 ದಿಂದ ರೂ.90,000 ಮತ್ತು 2023 ರವರೆಗೆ ಸುಮಾರು ರೂ.70,000ದಷ್ಟು ಪರಿಹಾರ ದೊರೆಯುತ್ತಿತ್ತು ಎಂದು ರೈತರಿಂದ ಮಾಹಿತಿ ಲಭಿಸಿದೆ. ಆದರೆ, ಇತ್ತೀಚಿನ ಪರಿಹಾರ ಮೊತ್ತವು ಹಲವು ಪ್ರದೇಶಗಳಲ್ಲಿ ಸರಾಸರಿ ಸುಮಾರು ರೂ.20,000ಕ್ಕೆ ಇಳಿದಿದೆ ಎಂಬ ಅಸಮಾಧಾನವಿದೆ ಎಂದಿದ್ದಾರೆ.
ವಿಮಾ ನಿಯಮಗಳ ಕುರಿತು ಸ್ಪಷ್ಟನೆ ಅಗತ್ಯ: 2023ರ ನಂತರ ವಿಮಾ ಟರ್ಮ್‌ಶೀಟ್‌ನಲ್ಲಿನ ಕೆಲವು ಮಾನದಂಡಗಳಲ್ಲಿ ಬದಲಾವಣೆಗಳಾಗಿವೆ ಎಂಬ ಮಾತುಗಳು ರೈತರ ವಲಯದಲ್ಲಿ ಕೇಳಿಬರುತ್ತಿವೆ. ಹಿಂದಿನ ವರ್ಷಗಳಲ್ಲಿದ್ದ ಮಳೆಯ ಪ್ರಮಾಣ ಹಾಗೂ ಪರಿಹಾರದ ಲೆಕ್ಕಾಚಾರದ ಮಾನದಂಡಗಳಿಗೆ ಹೋಲಿಸಿದರೆ, ಈಗಿನ ನಿಯಮಗಳಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ರಾಜ್ಯ ಸರ್ಕಾರ ಮತ್ತು ವಿಮಾ ಸಂಸ್ಥೆಗಳು ಸ್ಪಷ್ಟಪಡಿಸಬೇಕು. ವಿಶೇಷವಾಗಿ ಮಳೆಯ ಪ್ರಮಾಣವನ್ನು ಲೆಕ್ಕಾಚಾರ ಮಾಡುವ ವಿಧಾನ, ಒಂದು ನಿರ್ದಿಷ್ಟ ಮಿತಿಯ ನಂತರದ ಮಳೆಯನ್ನು ಮಾತ್ರ ಪರಿಗಣಿಸುವ ಮಾನದಂಡಗಳು ಮತ್ತು ಅವುಗಳ ಆಧಾರದ ಮೇಲೆ ಪರಿಹಾರ ನಿಗದಿಪಡಿಸುವ ಪ್ರಕ್ರಿಯೆಯನ್ನು ರೈತರಿಗೆ ಸರಳವಾಗಿ ವಿವರಿಸಬೇಕು. ಇದು ಸರ್ಕಾರದ ವಿರುದ್ಧದ ಆರೋಪವಲ್ಲ, ವಿಮಾ ಪರಿಹಾರ ಕಡಿಮೆಯಾಗಿರುವ ಹಿನ್ನೆಲೆ ರೈತರಿಗೆ ಉಂಟಾಗಿರುವ ಅನುಮಾನಗಳಿಗೆ ಅಧಿಕೃತ ಸ್ಪಷ್ಟನೆ ಅಗತ್ಯವಾಗಿದೆ ಎಂಬುದಷ್ಟೇ ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಪಾಲಿನ ವಿಮಾ ಕಂತಿನ ಕುರಿತು ಮಾಹಿತಿ ನೀಡಲಿ: ವಿಮಾ ಕಂತಿನಲ್ಲಿ ರೈತರು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಪಾಲಿನ ಪ್ರಮಾಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬದಲಾವಣೆಗಳಾಗಿದ್ದರೆ, ಅದರ ಸಂಪೂರ್ಣ ವಿವರವನ್ನು ಸರ್ಕಾರ ಪ್ರಕಟಿಸಬೇಕು. ರಾಜ್ಯ ಸರ್ಕಾರದ ಪಾಲಿನ ವಿಮಾ ಕಂತು ನಿಗದಿತ ಅವಧಿಯಲ್ಲಿ ಪಾವತಿಯಾಗಿದೆಯೇ, ಪಾವತಿಯಲ್ಲಿ ವಿಳಂಬವಾಗಿದ್ದರೆ ಅದರ ಪರಿಣಾಮ ಪರಿಹಾರ ವಿತರಣೆಯ ಮೇಲೆ ಬೀರಿದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು. ಈ ಮಾಹಿತಿಯನ್ನು ಸಾರ್ವಜನಿಕಗೊಳಿಸಿದರೆ ರೈತರಲ್ಲಿರುವ ಅನೇಕ ಅನುಮಾನಗಳಿಗೆ ತೆರೆ ಬೀಳಲಿದೆ ಎಂದು ಹೇಳಿದ್ದಾರೆ.
ವಿಮಾ ಸಂಸ್ಥೆಯ ಟೆಂಡರ್ ವಿಸ್ತರಣೆಗೂ ಪಾರದರ್ಶಕತೆ ಇರಲಿ: ಟಾಟಾ ಎಐಜಿ ವಿಮಾ ಸಂಸ್ಥೆಗೆ ನೀಡಲಾಗಿದ್ದ ಟೆಂಡರ್ ಅವಧಿ ಪೂರ್ಣಗೊಂಡ ನಂತರವು ಅವಧಿ ವಿಸ್ತರಣೆ ಮಾಡಲಾಗಿದ್ದರೆ, ಅದರ ಆಡಳಿತಾತ್ಮಕ ಮತ್ತು ಕಾನೂನುಬದ್ಧ ಆಧಾರವೇನು ಎಂಬುದನ್ನು ಸರ್ಕಾರ ಪ್ರಕಟಿಸಬೇಕು. ಹೊಸ ಟೆಂಡರ್ ಪ್ರಕ್ರಿಯೆ ಏಕೆ ನಡೆಯಲಿಲ್ಲ ಅಥವಾ ವಿಸ್ತರಣೆ ಯಾವ ನಿಯಮದಡಿ ಮಾಡಲಾಗಿದೆ ಎಂಬುದನ್ನು ತಿಳಿಸಬೇಕು. ವಿಮಾ ಸಂಸ್ಥೆ ಮತ್ತು ಸರ್ಕಾರದ ನಡುವಿನ ಯಾವುದೇ ಹಣಕಾಸು ಅಥವಾ ಆಡಳಿತಾತ್ಮಕ ವ್ಯವಹಾರಗಳ ಬಗ್ಗೆ ಅನುಮಾನಗಳಿಗೆ ಅವಕಾಶವಿರದಂತೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು. ಯಾವುದೇ ಅಕ್ರಮ ನಡೆದಿದೆಯೆಂದು ನಾವು ಹೇಳುತ್ತಿಲ್ಲ, ಆದರೆ ರೈತರಲ್ಲಿ ಇಂತಹ ಅನುಮಾನಗಳು ಮೂಡದಂತೆ ಸರ್ಕಾರವೇ ಸಂಪೂರ್ಣ ಪಾರದರ್ಶಕತೆ ತೋರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷದ ಭಾರೀ ಮಳೆಯ ಹಿನ್ನೆಲೆ ದಾಖಲೆ ಪರಿಶೀಲಿಸಲಿ: ಹವಾಮಾನ ಆಧರಿತ ಬೆಳೆ ವಿಮಾ ಯೋಜನೆಯಲ್ಲಿ ಗ್ರಾಮ ಮಟ್ಟದ ಹವಾಮಾನ ದಾಖಲೀಕರಣ ಅತ್ಯಂತ ಮಹತ್ವದ್ದು. ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಅತ್ಯಧಿಕ ಪ್ರಮಾಣದ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ವಾರ್ಷಿಕ ಮಳೆ ಸುಮಾರು 5,000 ಮಿ.ಮೀ. ಆಸುಪಾಸಿನಲ್ಲಿತ್ತು. ಕೆಲವು ರೈತರು ಕೂಡ ಮಳೆ ದಾಖಲೆ ಮಾಡುತ್ತಾರೆ. ಅಲ್ಲೂ ಸರಿಯಾದ ಮಾಹಿತಿ ಲಭ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಹೆಚ್ಚಿನ ಪ್ರಮಾಣದ ವಿಮೆ ಪರಿಹಾರದ ನಿರೀಕ್ಷೆಯಲ್ಲಿದ್ದರು. ಆದರೆ, ಅನೇಕ ಕಡೆ ನಿರೀಕ್ಷೆಗಿಂತ ಕಡಿಮೆ ಪರಿಹಾರ ದೊರೆತಿರುವುದರಿಂದ ಪ್ರತಿ ಗ್ರಾಮದ ವಾಸ್ತವ ಮಳೆ ಪ್ರಮಾಣ ಮತ್ತು ವಿಮಾ ಲೆಕ್ಕಾಚಾರಕ್ಕೆ ಬಳಸಲಾದ ಅಧಿಕೃತ ಮಳೆ ಪ್ರಮಾಣ ಒಂದೇ ಆಗಿದೆಯೇ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಕಳೆದ ವರ್ಷ ಹವಾಮಾನ ದಾಖಲೀಕರಣ ಯಂತ್ರಗಳ ಕಾರ್ಯನಿರ್ವಹಣೆ ಕುರಿತು ಕೆಲವು ಸಮಸ್ಯೆಗಳು ಬಹಿರಂಗವಾಗಿದ್ದವು. ಅವುಗಳೆಲ್ಲವೂ ಈಗ ಸರಿಪಡಿಸಲ್ಪಟ್ಟಿವೆಯೇ, ಪ್ರತಿಯೊಂದು ಗ್ರಾಮದಲ್ಲಿಯೂ ನಿರಂತರವಾಗಿ ದತ್ತಾಂಶ ದಾಖಲಾಗುತ್ತಿದೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಬೇಕು ಎಂದು ತಿಳಿಸಿದ್ದಾರೆ.
ಹವಾಮಾನ ದಾಖಲೀಕರಣದ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳಿಗೆ ನೀಡಲಿ: ಹವಾಮಾನ ದಾಖಲೀಕರಣ ಯಂತ್ರಗಳ ಅಳವಡಿಕೆ ಮಾತ್ರ ಸಾಕಾಗುವುದಿಲ್ಲ. ಅವುಗಳ ನಿರಂತರ ನಿರ್ವಹಣೆ ಮತ್ತು ದತ್ತಾಂಶದ ವಿಶ್ವಾಸಾರ್ಹತೆಯೂ ಮುಖ್ಯವಾಗಿದೆ. ಈ ಜವಾಬ್ದಾರಿಯನ್ನು ದೂರದ ಸಂಸ್ಥೆಗಳ ಮೇಲೆ ಮಾತ್ರ ಅವಲಂಬಿಸುವ ಬದಲು, ಸ್ಥಳೀಯ ಗ್ರಾಮ ಪಂಚಾಯಿತಿಗಳು, ಸಹಕಾರ ಸಂಘಗಳು ಅಥವಾ ವಿಶ್ವಾಸಾರ್ಹ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ವಹಿಸುವ ವ್ಯವಸ್ಥೆ ರೂಪಿಸಬೇಕು. ಪ್ರತಿ ತಾಲೂಕು ಮಟ್ಟದಲ್ಲೂ ಬೆಳೆ ವಿಮೆಗೆ ಸಂಬಂಧಿಸಿದ ರೈತರ ಪ್ರಶ್ನೆಗಳಿಗೆ ಉತ್ತರಿಸುವ ಸಮಿತಿ ಸಕ್ರಿಯವಾಗಬೇಕು. ಆ ಸಮಿತಿಯ ಬಳಿ ತಾಲೂಕಿನ ಗ್ರಾಮವಾರು ಮಳೆ ದಾಖಲೆ, ವಿಮಾ ವ್ಯಾಪ್ತಿ, ಪರಿಹಾರ ಲೆಕ್ಕಾಚಾರ ಮತ್ತು ತಿರಸ್ಕೃತ ಪ್ರಕರಣಗಳ ಮಾಹಿತಿ ಇರಬೇಕು ಎಂದಿದ್ದಾರೆ.
ವಿಮಾ ಮಾಹಿತಿಯನ್ನು ಸಾರ್ವಜನಿಕಗೊಳಿಸಲಿ: ಬೆಳೆ ವಿಮೆಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಂದ ಮುಚ್ಚಿಡುವ ಅಗತ್ಯವಿಲ್ಲ. ಗ್ರಾಮವಾರು ಮಳೆ ದಾಖಲೆ, ವಿಮಾ ಘಟಕ, ಟರ್ಮ್‌ಶೀಟ್‌ನ ಪ್ರಮುಖ ಮಾನದಂಡಗಳು, ಅರ್ಹ ರೈತರ ಸಂಖ್ಯೆ, ಪರಿಹಾರ ಲೆಕ್ಕಾಚಾರದ ವಿಧಾನ ಹಾಗೂ ಪಾವತಿಸಲಾದ ಮೊತ್ತದ ವಿವರಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು. ಹವಾಮಾನ ದಾಖಲೆಗಳನ್ನು ಪಡೆಯಲು ಹೆಚ್ಚಿನ ಮೊತ್ತ ಪಾವತಿಸಬೇಕಾದ ಪರಿಸ್ಥಿತಿ ಇದ್ದರೆ, ಸರ್ಕಾರ ಅಥವಾ ಸಹಕಾರ ಕ್ಷೇತ್ರದ ಮೂಲಕ ಜಿಲ್ಲೆಯ ರೈತರಿಗೆ ಕಡಿಮೆ ವೆಚ್ಚದಲ್ಲಿ ಈ ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು. ಸ್ಥಳೀಯವಾಗಿ ರೈತರು ಅಥವಾ ಸಂಘ-ಸಂಸ್ಥೆಗಳು ದಾಖಲಿಸುವ ಮಳೆ ಪ್ರಮಾಣವನ್ನು ಅಧಿಕೃತ ದಾಖಲೆಗಳೊಂದಿಗೆ ಹೋಲಿಕೆ ಮಾಡುವ ವ್ಯವಸ್ಥೆ ರೂಪಿಸಬಹುದು. ದೊಡ್ಡ ಪ್ರಮಾಣದ ವ್ಯತ್ಯಾಸ ಕಂಡುಬಂದರೆ ಪರಿಶೀಲನೆ ಮತ್ತು ದೂರು ಸಲ್ಲಿಸಲು ರೈತರಿಗೆ ಅವಕಾಶ ಇರಬೇಕು ಎಂದು ಹೇಳಿದ್ದಾರೆ.
ರಾಜಕೀಯಕ್ಕಿಂತ ವ್ಯವಸ್ಥೆಯ ಸುಧಾರಣೆ ಮುಖ್ಯ: ರೈತರ ಅಸಮಾಧಾನವನ್ನು ರಾಜಕೀಯವಾಗಿ ಬಳಸಿಕೊಳ್ಳುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಅದೇ ರೀತಿ ಯಾವುದೇ ಸರ್ಕಾರ ಅಥವಾ ವಿಮಾ ಸಂಸ್ಥೆಯ ವಿರುದ್ಧ ಪರಿಶೀಲನೆಯಿಲ್ಲದೆ ಆರೋಪ ಮಾಡುವುದು ಸಹ ಸರಿಯಲ್ಲ. ವಾಸ್ತವಾಂಶಗಳು ಬಹಿರಂಗವಾಗಬೇಕು. ದಾಖಲೆಗಳು ಸಾರ್ವಜನಿಕವಾಗಬೇಕು. ನಿಯಮಗಳು ಸ್ಪಷ್ಟವಾಗಬೇಕು. ಹವಾಮಾನ ದಾಖಲೀಕರಣ ನಿಖರವಾಗಬೇಕು. ಪರಿಹಾರ ಲೆಕ್ಕಾಚಾರ ಪಾರದರ್ಶಕವಾಗಬೇಕು. ಇವುಗಳ ಮೂಲಕವೇ ರೈತರಲ್ಲಿರುವ ಅನುಮಾನಗಳನ್ನು ನಿವಾರಿಸಲು ಸಾಧ್ಯ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಸೇರಿದಂತೆ ಎಲ್ಲ ಬೆಳೆಗಾರರಿಗೆ ನ್ಯಾಯಯುತ ಬೆಳೆ ವಿಮೆ ಪರಿಹಾರ ದೊರೆಯುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷದ ಭಾರೀ ಮಳೆಯ ಹಿನ್ನೆಲೆಯಲ್ಲಿ ಗ್ರಾಮವಾರು ಹವಾಮಾನ ದಾಖಲೆಗಳು ಮತ್ತು ಪರಿಹಾರ ಲೆಕ್ಕಾಚಾರವನ್ನು ಪರಿಶೀಲಿಸಿ, ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಲೋಪ ಕಂಡುಬಂದರೆ ಅದನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ.