ಬರ ಪರಿಸ್ಥಿತಿಯ ನಡುವೆ ತಮಿಳುನಾಡಿಗೆ ನೀರು.. ಎಷ್ಟು ಸರಿ? ಡಿಸಿಎಂ ಪ್ರಶ್ನೆ

Dcm Dr.G.Parameshwara: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, ಸದಾಶಿವನಗರದ ನಿವಾಸದ ಬಳಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Jul 29, 2026 - 16:11
Jul 29, 2026 - 16:12
ಬರ ಪರಿಸ್ಥಿತಿಯ ನಡುವೆ ತಮಿಳುನಾಡಿಗೆ ನೀರು.. ಎಷ್ಟು ಸರಿ? ಡಿಸಿಎಂ ಪ್ರಶ್ನೆ

ಬೆಂಗಳೂರು: ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದ್ದು, ಈ ವೇಳೆ ತಮಿಳುನಾಡಿಗೆ 3,500 ಕ್ಯುಸೆಕ್‌ ಕಾವೇರಿ ನೀರನ್ನು ಹರಿಸಬೇಕೆಂದು 'ಕಾವೇರಿ ನೀರು ನಿಯಂತ್ರಣ ಸಮಿತಿ'  ಹೇಳುವುದು ಸರಿಯಲ್ಲ. ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರಿದ್ದಾಗ ನಾವು ಕೊಡುತ್ತೇವೆ. ಈಗ ಕುಡಿಯಲು ನೀರಿಲ್ಲ ಎಂಬ ಪರಿಸ್ಥಿತಿಯಿದೆ. ಈ ಆದೇಶ ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ (Dr.G.Parameshwara) ಹೇಳಿದರು. 

ಸದಾಶಿವನಗರದ ನಿವಾಸದ ಬಳಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆಯನ್ನು ಕರೆಯುವುದಾಗಿ ಪ್ರಸ್ತಾಪಿಸಿದ್ದಾರೆ. ನೀರು ಇರುವಾಗ, ನಾವು ಅವರು ಕೇಳದೆಯೇ ಕೊಡುತ್ತೇವೆ. ನಿಗದಿಗಿಂತ ಹೆಚ್ಚಿನ ನೀರನ್ನು ಕೊಟ್ಟಿದ್ದೇವೆ. ಈ ಬಾರಿ ನಮಗೆ ಕುಡಿಯುವುದಕ್ಕೆ ನೀರಿಲ್ಲ ಎಂಬ ಪರಿಸ್ಥಿತಿಯಿದ್ದು, 3,500 ಟಿಎಂಸಿ ನೀರನ್ನು ಕೊಡಬೇಕು ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. 

ಆ.3 ರಂದು ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ. ಅದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಬಂದರೆ, ಅವರ ಜೊತೆಗೂ ಈ ಬಗ್ಗೆ ಚರ್ಚಿಸುತ್ತೇವೆ. ಇಂದು ಮುಖ್ಯಮಂತ್ರಿಗಳು ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಸಭೆ ನಡೆಸಿ, ಒಂದು ನಿರ್ಧಾರವನ್ನು ಕೈಗೊಳ್ಳಬಹುದು ಎಂದು ಹೇಳಿದರು. 

ಕಾವೇರಿ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಾಭಾವಿಕವಾಗಿ ಮಂಡ್ಯ ಮತ್ತು ಸುತ್ತಲಿನ ಭಾಗಗಳಲ್ಲಿ ರೈತ ಸಂಘಟನೆಗಳು, ಬೇರೆ-ಬೇರೆ ಸಂಘ ಸಂಸ್ಥೆಗಳು ಪ್ರತಿಭಟನೆಯನ್ನು ಮಾಡುತ್ತಾರೆ. ನಿನ್ನೆ ಕೂಡ ಮುಷ್ಕರ ನಡೆಸಿದ್ದಾರೆ. ನೀರು ಇಲ್ಲ ಅನ್ನೋದು ಅವರಿಗೂ ಗೊತ್ತಿದೆ. ಸರ್ಕಾರ ಒಂದು ವೇಳೆ ಇರುವ ನೀರನ್ನು ಕೊಟ್ಟುಬಿಡಬಹುದು ಎಂಬ ಆತಂಕ ಅವರಿಗಿದೆ. ಹಾಗಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಿದರು. 

ಮೇಕೆದಾಟು ಯೋಜನೆಗೆ ಸಮ್ಮತಿ ಬೇಕಿಲ್ಲ: 

ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕು ಇದೆ. ತಮಿಳುನಾಡಿನ ಸಮ್ಮತಿಯ ಅಗತ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ. ಪತ್ರ ಬರೆಯಲಿ, ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಪ್ರಧಾನ ಮಂತ್ರಿಗಳು ಕೋರ್ಟ್‌ಗಿಂತ ಮೇಲೆ ಇರುವುದಿಲ್ಲ. ಕೋರ್ಟ್‌ ನೀಡುವ ತೀರ್ಮಾನವೇ ಅಂತಿಮ ಎಂದು ತಿಳಿಸಿದರು.  

ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಕೆ:

ರಾಜ್ಯದಲ್ಲಿನ ಸದ್ಯದ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕದ ಬರಪೀಡಿತ ಪ್ರದೇಶಗಳನ್ನು ಪ್ರಕೃತಿ ವಿಕೋಪದಡಿ ಘೋಷಿಸುವಂತೆ ಮನವಿ ಮಾಡಲಾಗಿದೆ. ಬರ ಘೋಷಣೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕೆಲವು ಮಾನದಂಡಗಳನ್ನು ಸಡಿಲಗೊಳಿಸುವಂತೆ ಕೋರಿದ್ದೇವೆ. ಪ್ರಸ್ತುತ ಜಾರಿಯಲ್ಲಿರುವ ಮಾನದಂಡಗಳ ಕಾರಣ, ಶೇಕಡ 80% ವರೆಗೆ ಮಳೆ ಕೊರತೆ ಎದುರಿಸುತ್ತಿರುವ ಕೆಲವು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಾನದಂಡಗಳನ್ನು ಸಡಿಲಗೊಳಿಸುವಂತೆ ಹೇಳಿದ್ದೇವೆ ಎಂದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.