ಬಿಜೆಪಿಗೆ ರಾಮಚಂದ್ರಗೌಡರ ಕೊಡುಗೆ ಅನನ್ಯ: ಬಿಎಸ್‌ವೈ
Former Minister Ramachandra Gowda's Tribute Program: ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಸೋಮವಾರ ಮಾಜಿ ಸಚಿವ ರಾಮಚಂದ್ರಗೌಡ ಅವರ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆಯಲು ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರಗೌಡರ ಕೊಡುಗೆ ಸಾಕಷ್ಟಿದೆ. ಅವರನ್ನು ಬಿಜೆಪಿಯ ಭೀಷ್ಮ ಎಂದೇ ಕರೆಯಲಾಗುತ್ತಿತ್ತು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S.Yediyurappa) ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಸೋಮವಾರ ಆಯೋಜಿಸಿದ್ದ ಮಾಜಿ ಸಚಿವ ರಾಮಚಂದ್ರಗೌಡ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕದ ಉದ್ದಗಲಕ್ಕೂ ಓಡಾಡಿ, ಪಕ್ಷ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಅವರು ಐದು ದಶಕಗಳಿಂದ ಒಡಹುಟ್ಟಿದ ಸಹೋದರನಂತೆ ನನ್ನೊಂದಿಗೆ ಕೆಲಸ ಮಾಡಿದರು. 1970ರಲ್ಲಿ ಬೆಂಗಳೂರು ಪಾಲಿಕೆಯಲ್ಲಿ ಜನಸಂಘದ ಧ್ವಜ ಹಾರಿಸಿದ ಕೀರ್ತಿ ಅವರದ್ದು ಎಂದು ತಿಳಿಸಿದರು.

ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಹೋರಾಡಿದ್ದರು. ವಿಧಾನ ಪರಿಷತ್ತಿಗೆ 5 ಬಾರಿ ಆಯ್ಕೆಯಾಗಿ, ಮೂವತ್ತು ವರ್ಷಗಳ ಕಾಲ ಮೇಲ್ಮನೆಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವರಾಗಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿದವರು ಎಂದು ಹೇಳಿದರು.
ಲಾಟರಿ ನಿಷೇಧಕ್ಕೆ ಹೋರಾಟ:
ರಾಜ್ಯದಲ್ಲಿ ಲಾಟರಿ ನಿಷೇಧವಾಗಲು ಹೋರಾಟ ಮಾಡಿ, ಯಶಸ್ವಿಯಾದವರಲ್ಲಿ ಗೌಡರು ಪ್ರಮುಖರು. ಯಾವುದೇ ಕ್ಲಿಷ್ಟಕರ ಸ್ಥಿತಿಯಲ್ಲೂ ಸಮಾಧಾನದಲ್ಲಿ ಇದ್ದು, ಕೆಲಸ ಮಾಡುತ್ತಿದ್ದರು. ಅವರ ಸೌಮ್ಯ ಸ್ವಭಾವ, ಸರಳತೆ ಹಾಗೂ ಉದಾರತೆ ಮರೆಯಲು ಸಾಧ್ಯವಿಲ್ಲ. ಇಡೀ ಪಕ್ಷ ಅವರ ಕುಟುಂಬದ ದುಃಖದಲ್ಲಿ ಭಾಗಿಯಾಗಿದೆ ಎಂದರು.
ದೂರದರ್ಶಿತ್ವದ ನಾಯಕ: ಸುರೇಶ್ ಕುಮಾರ್
ರಾಮಚಂದ್ರಗೌಡರು ದೂರದರ್ಶಿತ್ವದ ನಾಯಕ. ಮಹಾನಗರ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ಪದ್ಧತಿ ಜಾರಿ ಆಗುವುದರಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಮಾಜಿ ಸಚಿವ ಎಸ್ ಸುರೇಶ್ ಕುಮಾರ್ (Suresh Kumar) ಹೇಳಿದರು.

ನಮ್ಮ ಪಕ್ಷದ ಫ್ರೆಂಡ್, ಫಿಲಾಸಪರ್ ಅಂಡ್ ಗೈಡ್ ರೀತಿ ಇದ್ದರು. ಅನೇಕ ವಿಚಾರ ಬಲ್ಲ ತತ್ವಜ್ಞಾನಿಯಾಗಿದ್ದರು. ಹಲವರಿಗೆ ಮಾರ್ಗದರ್ಶಕರಾಗಿದ್ದರು ಎಂದು ಅವರೊಂದಿಗಿನ ದಿನಗಳನ್ನು ನೆನಪಿಸಿಕೊಂಡರು.
ಪದವೀಧರರ ಸಮಸ್ಯೆಗೆ ಸ್ಪಂದಿಸುತ್ತಿದ್ದ ವಿಧಾನ ಪರಿಷತ್ತಿನ ಸದಸ್ಯರಲ್ಲಿ ರಾಮಚಂದ್ರಗೌಡರು ಅಗ್ರಗಣ್ಯರು. ಒಂದಂಕಿ ಲಾಟರಿ ವಿರುದ್ಧ ಹೋರಾಡಿ, ಗೆಲುವು ಸಾಧಿಸಿದವರು. ಅನೇಕ ಕುಟುಂಬಗಳನ್ನು ಉಳಿಸಿದ ಶ್ರೇಯಸ್ಸು ಅವರು ಹಾಗೂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ರಾಮಚಂದ್ರ ಗೌಡರದ್ದು ವಿಶಿಷ್ಟ ವ್ಯಕ್ತಿತ್ವ, ಗೋವಾ ವಿಮೋಚನಾ ಚಳವಳಿಯಲ್ಲಿ ಜಗನ್ನಾಥ ರಾವ್ ಅವರೊಂದಿಗೆ ಸೇರಿ ಕೆಲಸ ಮಾಡಿದವರು ಎಂದು ಹೇಳಿದರು.
ಒಬ್ಬ ಆದರ್ಶ ಕಾರ್ಯಕರ್ತ ಹಾಗೂ ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಅವರು ಶ್ರೇಷ್ಠ ಉದಾಹರಣೆ. ಇಂತಹ ಧೀಮಂತ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಜನಸಂಘದ ಕೊಂಡಿ ಕಳಚಿದೆ. ರಾಮಚಂದ್ರಗೌಡ ನಡೆ-ನುಡಿ ಮಾರ್ಗದರ್ಶಕವಾಗಿರಲಿ ಎಂದು ತಿಳಿಸಿದರು.
ಮಿಥಿಕ್ ಸೊಸೈಟಿಯ ಅಧ್ಯಕ್ಷ ವಿ.ನಾಗರಾಜ್, ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ರಾಮಚಂದ್ರಗೌಡರ ಅಭಿಮಾನಿಗಳು ಇದ್ದರು.