ಗುಟ್ಕಾ & ಪಾನ್ ಮಸಾಲ ನಿಷೇಧ ವಾಪಸ್?
Karnataka: ರಾಜ್ಯದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ಮೇಲಿನ ನಿಷೇಧ ಆದೇಶವನ್ನು ವಾಪಸ್ ಪಡೆಯುವಂತೆ ಅಧಿಕಾರಿಗಳಿಗೆ, ಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಗುಟ್ಕಾ & ಪಾನ್ ಮಸಾಲ ಮೇಲಿನ ನಿಷೇಧ ಆದೇಶವನ್ನು ವಾಪಸ್ ಪಡೆಯುವಂತೆ ಅಧಿಕಾರಿಗಳಿಗೆ, ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸೂಚಿಸಿದ್ದಾರೆ ಎಂದು ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ನಿಷೇಧದಿಂದಾಗಿ 'ಅಡಿಕೆ' ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪಕ್ಷಾತೀತವಾಗಿ ಶಾಸಕರು ವಿರೋಧಿಸಿದ್ದರು. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಕಾಂಗ್ರೆಸ್ ಶಾಸಕ ಡಿ.ಜಿ.ಶಾಂತನಗೌಡ ಅವರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಿಷೇಧವನ್ನು ಹಿಂಪಡೆಯುವಂತೆ ಮನವಿ ಮಾಡಿತ್ತು.
ತಮ್ಮ ಗಮನಕ್ಕೆ ತರದೆ, ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿರುವುದಕ್ಕೆ ಡಿ.ಕೆ.ಶಿವಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇದೇ ಆಗಸ್ಟ್ 12 ರಂದು ಕರ್ನಾಟಕದಾದ್ಯಂತ 1 ವರ್ಷದ ಕಾಲ, ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್ ಮಸಾಲ ಸೇರಿದಂತೆ ನಿಷೇಧಿತ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಯನ್ನು ನಿಷೇಧಿಸಲಾಗಿತ್ತು.