ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವು ಒಪ್ಪಿದೆ: ರಾಘವೇಶ್ವರ ಶ್ರೀ

Annabrahma Chaturmasya Dharmasabha: ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶನಿವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡಿದರು.

Sep 27, 2026 - 10:29
Sep 27, 2026 - 11:46
ಮಿಶ್ರ ತಳಿಯ ಹಾಲು ಅಹಿತ ಎಂದು ವಿಜ್ಞಾನವು ಒಪ್ಪಿದೆ: ರಾಘವೇಶ್ವರ ಶ್ರೀ

ಗೋಕರ್ಣ: ಮಿಶ್ರ ತಳಿ ಹಸುವಿನ ಹಾಲು ಅಹಿತ ಎಂಬುದಾಗಿ ಇಂದಿನ ವಿಜ್ಞಾನವು ಒಪ್ಪಿದೆ. ಆದರೆ, ದುಡ್ಡಿನ  ಹಿಂದೆ ಜಗತ್ತು ಓಡುತ್ತಿರುವುದರಿಂದ ಅದನ್ನು ಒಪ್ಪಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶನಿವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ನೀಡಿದರು. 

ಆಧುನಿಕ ವಿಜ್ಞಾನವು ಕೂಡ ದೇಶಿ ಗೋವು ಹಾಗೂ ಮಿಶ್ರತಳಿಯ ಹಾಲು, ತುಪ್ಪಗಳನ್ನು ವಿಶ್ಲೇಷಿಸಿದ್ದು, ದೇಶಿ ಗೋವಿನ ಎ2 ಹಾಲು ಮತ್ತು ತುಪ್ಪುಗಳು ಶ್ರೇಷ್ಠ ಎಂಬುದಾಗಿ ದೃಢೀಕರಿಸಿವೆ. ಗೋವಿನ ಉತ್ಪನ್ನಗಳು ಜೀರ್ಣಕ್ರಿಯೆಗೆ ಪೂರಕವಾದರೆ, ಮಿಶ್ರತಳಿಯ ಉತ್ಪನ್ನಗಳು ಜೀರ್ಣಕ್ರಿಯೆಗೆ ಸಹಕಾರಿಯಲ್ಲ. ಆಧುನಿಕ ವಿಜ್ಞಾನ ಅದರ ಭಾಷೆಯಲ್ಲಿ ಹೇಳಿದರೆ,  ಆಯುರ್ವೇದ  ಅಗ್ನಿದೀಪಕ, ಲಘು, ಪಾಚನ ಇತ್ಯಾದಿಯಾಗಿ ಅದರ ಭಾಷೆಯಲ್ಲಿ ಹೇಳಿದೆ. ದೇಶಿ ಗೋವು ಮತ್ತು ಮಿಶ್ರ ತಳಿಯ ಹಸುವಿನ ವಿಷಯದಲ್ಲಿ ಇವೆರಡು ಒಂದನ್ನೇ ಹೇಳುತ್ತಿವೆ ಎಂದು ತಿಳಿಸಿದರು. 

ಇಂದು ಎಷ್ಟೋ ಆಯುರ್ವೇದ ಔಷಧಗಳಲ್ಲಿ ಮಿಶ್ರ ತಳಿ ಹಸುವಿನ ತುಪ್ಪವನ್ನು ಬಳಸುತ್ತಿರುವುದರಿಂದ, ಅದು ಪರಿಣಾಮಕಾರಿಯಲ್ಲ ಎಂಬ ಮಾತು ಆಗಾಗ ಕೇಳಿಬರುತ್ತದೆ. ಔಷಧ ತಯಾರಿಕೆಯಲ್ಲಿ ಯೋಗವಾಹಕವಾದ ದೇಶೀ ತುಪ್ಪವನ್ನು ಬಳಸದಿರುವುದೇ ಇದಕ್ಕೆ ಕಾರಣ. ಬದುಕನ್ನು ಬಂಗಾರವಾಗಿಸಲು, ಜೀವವನ್ನು ದೇವರನ್ನಾಗಿ ಮಾಡಲು ತುಪ್ಪ ಸಾಕು‌. ಇದು ದೇಶಿ  ತುಪ್ಪದ ಸಾಮರ್ಥ್ಯ ಎಂದು ವಿವರಿಸಿದರು. 

ಗಡ್ಡ ಬಿಟ್ಟು, ವೇಷವನ್ನು ಧರಿಸುವುದರಿಂದ ಋಷಿಯಾಗುವುದಿಲ್ಲ. ಬೇರೆಯವರ ಕಣ್ಣಿಗೆ ಕಾಣದ್ದು ಯಾರ ಕಣ್ಣಿಗೆ ಕಾಣುತ್ತದೆಯೋ ಅವನು ನಿಜವಾದ ಋಷಿ. ಇಂದಿನ ವಿಜ್ಞಾನಿಗಳು ಕೇವಲ ಭೌತಿಕ ಗುಣಗಳನ್ನು ವಿಶ್ಲೇಷಿಸುತ್ತಿದ್ದಾರೆ. ಆದರೆ ಋಷಿಗಳು ಜ್ಞಾನ ದೃಷ್ಟಿಯಿಂದ ಅಪೂರ್ವ ಜ್ಞಾನವನ್ನು ಕಂಡುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಡಾ.ವಿಶ್ವನಾಥ್ ಭಟ್ ಮತ್ತು ಡಾ.ವಿದ್ಯಾ ಭಟ್ ದಂಪತಿಗಳು ಗುರುಭಿಕ್ಷಾಸೇವೆ ಸಮರ್ಪಿಸಿದರು. ಉದ್ಯಮಿ ಕೆ.ಎಸ್ ಭಟ್ ಮುಂಬೈ, ವೆಂಕಟ ರಮಣ ಹೆಗಡೆ ಕವಲಕ್ಕಿ, ಗಣೇಶ್ ಆರ್ಕೊಡ್ಲು, ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ಶ್ರೀವತ್ಸ ಭೀಮನಕೊಣೆ, ವಿಷ್ಣು ಭಟ್ ಕವಲಕ್ಕಿ, ಶ್ರೀಕೃಷ್ಣ ಶಾಸ್ತ್ರಿ, ಸೌಮ್ಯ ಮಧ್ಯಸ್ಥ, ಅಜಿತ್ ಹೆಗಡೆ ಗುಡ್ಗೆ ಹಾಗೂ ದಿನಪ್ರಧಾನರಾಗಿ ಸೂರ್ಯನಾರಾಯಣ ದಂಪತಿಗಳು ಉಪಸ್ಥಿತರಿದ್ದರು.

ಸಂಪನ್ನವಾದ ಸೀಮೋಲ್ಲಂಘನ: ಕಳೆದ ಎರಡು ತಿಂಗಳಿನಿಂದ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದ ಶ್ರೀಗಳು, ಸೀಮೋಲ್ಲಂಘನವನ್ನು ಮಾಡುವ ಮೂಲಕ ಚಾತುರ್ಮಾಸ್ಯ ವ್ರತವನ್ನು ಸಂಪನ್ನಗೊಳಿಸಿದರು. ಗಂಗಾವಳಿ ನದಿಗೆ ಫಲ ಸಮರ್ಪಿಸಿ, ತೊರ್ಕೆಯ 
ಕೆಂಗಾಳ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಭಕ್ತರನ್ನು ಆಶೀರ್ವಾದಿಸಿದರು. ಪ್ರದೀಪ್ ನಾಯ್ಕ್ ದೇವರಬಾವಿ, ಮಹೇಶ್ ಶೆಟ್ಟಿ, ವೆಂಕಟರಮಣ ಕೌರಿ, ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಸರ್ವ ಸಮಾಜದ ಪಾಲ್ಗೊಳ್ಳುವಿಕೆ: ಶ್ರೀರಾಮಚಂದ್ರಾಪುರ ಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುವ ಭಕ್ತ ಸಮಾಜದವರೆಲ್ಲರೂ ಚಾತುರ್ಮಾಸ್ಯದಲ್ಲಿ ಪಾಲ್ಗೊಂಡು, ತಮ್ಮ ಭಕ್ತಿಯನ್ನು ಸಮರ್ಪಿಸಿದರು. 23 ವಿವಿಧ ಸಮಾಜಗಳು ಸ್ವರ್ಣಪಾದುಕಾ ಪೂಜೆಯನ್ನು ಸಮರ್ಪಿಸಿ, ತಮ್ಮ ಪರಂಪರಾಗತ ಗುರು ಭಕ್ತಿಯನ್ನು ವ್ಯಕ್ತಪಡಿಸಿದರು.

ಆಹಾರದ ಕುರಿತಾದ ಪ್ರವಚನ - ಪಾರಂಪರಿಕ ಭೋಜನ: ಆಹಾರದ ಕುರಿತಾಗಿ ಪೀಠಾಧಿಪತಿಗಳೊಬ್ಬರು ಸವಿಸ್ತಾರವಾಗಿ ಸಮಾಜಕ್ಕೆ ಪ್ರವಚನದ ಮೂಲಕ ಮಾರ್ಗದರ್ಶನ ಮಾಡಿದ್ದು ಇದೇ ಮೊದಲು. ಇಂದಿನ ಕಾಲಕ್ಕೆ ಅತ್ಯಗತ್ಯವಾದ ವಿಚಾರವನ್ನು ಶ್ರೀಗಳು ಚಾತುರ್ಮಾಸ್ಯದ 60 ದಿನಗಳ ಕಾಲ ಪ್ರವಚನದ ಮೂಲಕ ಆಹಾರದ ಸರಿ ತಪ್ಪುಗಳನ್ನು ತಿಳಿಸಿದರು. ಹಾಗೆಯೇ 60 ದಿನಗಳು ಕರಾವಳಿ, ಮಲೆನಾಡು ಭಾಗದ ಪಾರಂಪರಿಕ ಆಹಾರ ಪದಾರ್ಥಗಳು ಚಾತುರ್ಮಾಸ್ಯದ ವಿಶೇಷವಾಗಿತ್ತು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.