ಪರಿವರ್ತನೆಯೇ ಅನ್ನಬ್ರಹ್ಮ ಚಾತುರ್ಮಾಸ್ಯದ ಮೂಲ ಉದ್ದೇಶ: ಖ್ಯಾತಿ-ಪ್ರಚಾರವಲ್ಲ - ರಾಘವೇಶ್ವರ ಶ್ರೀ

Annabrahma Chaturmasya: ಅಶೋಕೆಯ ಮೂಲಮಠದಲ್ಲಿ ನಡೆದ ಅನ್ನಬ್ರಹ್ಮ ಮಹಾಸಮಾರೋಪ ಸಭೆಯಲ್ಲಿ ಭಾನುವಾರ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಮಾತನಾಡಿದರು.

Sep 28, 2026 - 12:58
ಪರಿವರ್ತನೆಯೇ ಅನ್ನಬ್ರಹ್ಮ ಚಾತುರ್ಮಾಸ್ಯದ ಮೂಲ ಉದ್ದೇಶ: ಖ್ಯಾತಿ-ಪ್ರಚಾರವಲ್ಲ - ರಾಘವೇಶ್ವರ ಶ್ರೀ

ಗೋಕರ್ಣ: ಪರಿವರ್ತನೆ ಈ ಚಾತುರ್ಮಾಸ್ಯದ ಉದ್ದೇಶ. ಖ್ಯಾತಿ - ಪ್ರಚಾರಗಳು ನಮ್ಮ ಉದ್ದೇಶವಲ್ಲ. ಪ್ರವಚನದಿಂದ ಸಮಾಜ ಪರಿವರ್ತಿತವಾದರೆ, ಪ್ರಪಂಚಕ್ಕೆ ಇದರ ಲಾಭ ಲಭಿಸುತ್ತದೆ. ಇದಷ್ಟೇ ಈ ಚಾತುರ್ಮಾಸ್ಯದ ಲಕ್ಷ್ಯವಾಗಿತ್ತು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಅಶೋಕೆಯ ಮೂಲಮಠದಲ್ಲಿ ನಡೆದ ಅನ್ನಬ್ರಹ್ಮ ಮಹಾಸಮಾರೋಪ ಸಭೆಯಲ್ಲಿ ಭಾನುವಾರ ಆಶೀರ್ವಚನ ನೀಡಿ, ಮಾತನಾಡಿದರು. 

ಯಾವುದೇ ಮಠ 2 ತಿಂಗಳ ಚಾತುರ್ಮಾಸ್ಯವನ್ನು ಆಹಾರಕ್ಕಾಗಿ ಮೀಸಲಿಡಲು ಸಾಧ್ಯವಿಲ್ಲ. ಯಾವುದೇ ಮಸಾಲೆ ಇಲ್ಲದ ಪಾರಂಪರಿಕ ಪ್ರವಚನ ಸರಣಿಯು ನಿರಂತರವಾಗಿ ರಾಮಚಂದ್ರಾಪುರ ಮಠದಲ್ಲಿ ನಡೆಯಿತು. ಆಹಾರದ ಕುರಿತಾದ ಚಿಂತನ ಮಂಥನ ಇಲ್ಲಿ ನಡೆಯಿತು ಎಂಬುದು ದಾಖಲೆ ಎಂದು ಅಭಿಪ್ರಾಯಪಟ್ಟರು.

ಮಾಧ್ಯಮ - ಸಮಾಜ ಮಾಧ್ಯಮಗಳ ಮೂಲಕ 'ಅನ್ನಂ ಬ್ರಹ್ಮ' ಪ್ರವಚನವು ನಾಡಿನಾದ್ಯಂತ ತಲುಪಿದ್ದು, ಪುಟ್ಟ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರ ಮೇಲೂ 'ಅನ್ನಂ ಬ್ರಹ್ಮ' ಪ್ರವಚನ ಪರಿಣಾಮ ಬೀರಿರುವುದನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ. ಸಮಾಜದ ನಾನಾ ಭಾಗಗಳಿಂದ ಪ್ರವಚನ ಸರಣಿಯ ಕುರಿತಾಗಿ ಪ್ರತಿಕ್ರಿಯೆ ಬಂದಿದ್ದು, ಸಮಾಜದಲ್ಲಿ ಪರಿವರ್ತನೆಯನ್ನು ಗಮನಿಸಿದ್ದೇವೆ. ಪ್ರವಚನ ಸರಣಿಯು ಕೆಲದಿನಗಳ ನಂತರ ಮತ್ತೆ ಮುಂದುವರಿಯಲಿದ್ದು, ಆಹಾರದ ಸರಿ ತಪ್ಪುಗಳನ್ನು ಸಮಾಜಕ್ಕೆ ತಿಳಿ ಹೇಳುವ ಕಾರ್ಯ ನಡೆಲಿದೆ ಎಂದರು.

ಒಳಿತಿಗೆ ಕೆಡುಕಿನ ವಿರೋಧ ಸಾಮಾನ್ಯ. ಹಾಗೆಯೇ ಮಠವನ್ನು ಕಳೆದ ಕೆಲವಾರು ವರ್ಷಗಳಿಂದ ವಿರೋಧಿಸುತ್ತಿರುವ ಒಬ್ಬರು ಇತ್ತೀಚೆಗೆ 50 ಸಾವಿರ ರೂಪಾಯಿಗಳ ತಾಮ್ರ - ಹಿತ್ತಾಳೆ ಪಾತ್ರಗಳನ್ನು ಹೊಸದಾಗಿ ಖರೀದಿಸಿದ್ದಾರೆ ಎಂಬ ಮಾಹಿತಿ ಪಾತ್ರೆ ಅಂಗಡಿಯಿಂದಲೇ ಬಂದಿದೆ.  ಇದು ಪ್ರವಚನದ ಪ್ರಭಾವವನ್ನು ತೋರಿಸುತ್ತದೆ. ಪಾರಂಪರಿಕ ಪಾತ್ರೆಗಳನ್ನು ಬಳಸಿ, ಪರಂಪರೆ ಹೇಳಿದಂತೆ ನಾವು ಆಹಾರವನ್ನು ಸ್ವೀಕರಿಸಬೇಕು. ಪ್ರಪಂಚ ಪರಿವರ್ತಿತವಾಗಿ ಸಮಾಜ ಸರಿ ದಾರಿಯಲ್ಲಿ ಸಾಗಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.

ಖ್ಯಾತ ಆಯುರ್ವೇದ ತಜ್ಞರು ಹಾಗೂ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ಒಂದು ವಿಷಯವನ್ನು ಇಟ್ಟುಕೊಂಡು ಜನಜಾಗೃತಿ ಮೂಲಕ ಚಾತುರ್ಮಾಸ್ಯವನ್ನು ಆಚರಿಸುವ  ಕ್ರಮವೇ ವಿಶಿಷ್ಟವಾಗಿದೆ. ಆಹಾರದ ವಿಷಯವನ್ನು ಇಟ್ಟುಕೊಂಡು ಇಷ್ಟು ವಿವರವಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದವರು ರಾಮಚಂದ್ರಾಪುರ ಮಠದ ಶ್ರೀಗಳು ಮಾತ್ರ. ಇದು ಆಹಾರದ ವಿಚಾರದಲ್ಲಿ ನಡೆದ ಕ್ರಾಂತಿ ಎಂದು ಅಭಿಪ್ರಾಯಪಟ್ಟರು.

ಆಹಾರದ ಕುರಿತಾಗಿ ಆಧುನಿಕ ವಿಜ್ಞಾನದ ಸಂಶೋಧನೆ ಅತಿ ಕಡಿಮೆ ಎಂದೇ ಹೇಳಬಹುದು. ಪಾಶ್ಚಾತ್ಯ ಜಗತ್ತಿಗೆ ತುಪ್ಪ ಎಂಬ ಒಂದು ಅದ್ಭುತ ಪದಾರ್ಥ ಇರುವ ಬಗ್ಗೆಯೇ ತಿಳಿದಿಲ್ಲ. ಆಧುನಿಕ ವಿಜ್ಞಾನ ಆಹಾರದ ಗುಣವನ್ನು ನೋಡುತ್ತಿಲ್ಲ. ಕೇವಲ ಕ್ಯಾಲೊರಿಗಳ ಬೆನ್ನು ಹತ್ತಿದೆ. ಪ್ರಚಾರದ ಹಿಂದೆ ಬಿದ್ದಿರುವ ನಾವು ಪ್ರೋಟಿನ್ ಪ್ರೋಟೀನ್ ಎಂಬ ಜಪವನ್ನು ಆರಂಭಿಸಿದ್ದೇವೆ. ಇಂದಿನ ಪಾಶ್ಚಾತ್ಯ ಲಾಭಿಯಿಂದ ವಿಚಲಿತರಾಗದೇ ನಾವು ಶ್ರೀಗಳು ಪ್ರವಚನದಲ್ಲಿ ಸೂಚಿಸಿರುವಂತೆ ನಮ್ಮ ಪಾರಂಪರಿಕ ಕ್ರಮವನ್ನು ಅನುಸರಿಸಬೇಕು ಎಂದು ಕರೆ ನೀಡಿದರು.

ಚಾತುರ್ಮಾಸ್ಯದ ಅವಲೋಕನ ಮಾಡಿದ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಚಾತುರ್ಮಾಸ್ಯದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ಚಾತುರ್ಮಾಸ್ಯದಲ್ಲಿ ಭಾಗವಹಿಸಿದ್ದು, 300ಕ್ಕೂ ಅಧಿಕ ಪಾರಂಪರಿಕ ಖಾದ್ಯ ವೈವಿಧ್ಯಗಳು ಚಾತುರ್ಮಾಸ್ಯದಲ್ಲಿತ್ತು, 3000ಕ್ಕೂ ಅಧಿಕ ಕಾರ್ಯಕರ್ತರು ಚಾತುರ್ಮಾಸ್ಯದಲ್ಲಿ ನೇರವಾಗಿ ಭಾಗವಹಿಸಿದ್ದರು. ಅನ್ನ ಬ್ರಹ್ಮನ ಆರಾಧನೆಗೆ ಒಂದು ಕೋಟಿಗೂ ಅಧಿಕ ಮೊತ್ತದ ಸುವಸ್ತು ಸಮರ್ಪಿತವಾಗಿತ್ತು ಎಂದು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದವರಿಗೆ ಧನ್ಯವಾದ ಸಮರ್ಪಿಸಿದರು.

ಚಾತುರ್ಮಾಸ್ಯದ ಮೊದಲ ಎಂಟು ದಿನಗಳ ಪ್ರವಚನದ ಅಕ್ಷರ ರೂಪವನ್ನು 'ಅನ್ನಂ ಬ್ರಹ್ಮ  - ಪೂರ್ವರಂಗ' ಪುಸ್ತಕವಾಗಿ ಶ್ರೀ ಭಾರತೀ ಪ್ರಕಾಶನವು ಪ್ರಕಾಶಿಸಿದ್ದು, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳು ಲೋಕಾರ್ಪಣೆಗೊಳಿಸಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್ ಮತ್ತು ಕುಟುಂಬದವರು ಭಾಗಿಗಳಾಗಿ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಮಠದ ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನ ತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ,  ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ನಾರಾಯಣ ಭಟ್ ಹಾರಕೆರೆ, ರಾಮಚಂದ್ರ ಕೆಕ್ಕಾರ, ಪ್ರವೀಣ್ ಭೀಮನಕೊಣೆ, ತಿಮ್ಮಪ್ಪ ಗುಡ್ಡೆದಿಂಬ, ರಾಘವೇಂದ್ರ ಮಧ್ಯಸ್ಥ, ಈಶ್ವರಿ ಬೇರ್ಕಡವು, ದೀಪಕ ಹೆಗಡೆ ಗೋಳಿಕೈ ಮುಂತಾದವರು ಉಪಸ್ಥಿತರಿದ್ದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.