Mandolin Prasad: ಮೈಸೂರು ಮಲ್ಲಿಗೆ ಖ್ಯಾತಿಯ ಮ್ಯಾಂಡೋಲಿನ್ ಪ್ರಸಾದ್ ನಿಧನ.. ಇಂದು ಅಂತ್ಯಕ್ರಿಯೆ

Mandolin Ns Prasad: ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರಮುಖ ಆಧಾರಸ್ತಂಭ, ಮ್ಯಾಂಡೋಲಿನ್ ವಾದನವನ್ನು ಭಾವಗೀತೆಗಳಿಗೆ ಪರಿಚಯಿಸಿದ ಮ್ಯಾಂಡೋಲಿನ್ ಪ್ರಸಾದ್ ನಿಧನರಾಗಿದ್ದಾರೆ. ಇಂದು ಅಂತ್ಯಕ್ರಿಯೆ ನಡೆಯಲಿದೆ.

Jul 26, 2026 - 09:51
Jul 26, 2026 - 09:53
Mandolin Prasad: ಮೈಸೂರು ಮಲ್ಲಿಗೆ ಖ್ಯಾತಿಯ  ಮ್ಯಾಂಡೋಲಿನ್ ಪ್ರಸಾದ್ ನಿಧನ.. ಇಂದು ಅಂತ್ಯಕ್ರಿಯೆ

ಬೆಂಗಳೂರು: ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರಮುಖ ಆಧಾರಸ್ತಂಭ, ಮ್ಯಾಂಡೋಲಿನ್ ವಾದನವನ್ನು ಭಾವಗೀತೆಗಳಿಗೆ ಪರಿಚಯಿಸಿದ ಮ್ಯಾಂಡೋಲಿನ್ ಪ್ರಸಾದ್ (Mandolin Prasad) ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. 

ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ 10.30ಕ್ಕೆ ಕೊನೆಯುಸಿರೆಳೆದಿದ್ದಾರೆ.

ಎಸ್.ಎಸ್. ಪ್ರಸಾದ್ ಹೆಸರಾಗಿದ್ದರೂ, 'ಮ್ಯಾಂಡೋಲಿನ್' ವಾದನ ಬಳಕೆಯಲ್ಲಿ ಪರಿಣಿತಿ ಸಾಧಿಸಿದ್ದರಿಂದ ಮ್ಯಾಂಡೋಲಿನ್ ಪ್ರಸಾದ್ ಎಂದೇ ಖ್ಯಾತಿ ಗಳಿಸಿದ್ದರು. ಕನ್ನಡ ಸಿನಿರಂಗ ಹಾಗೂ ಸುಗಮ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಿಸ್ವಾರ್ಥಿಯಾಗಿದ್ದರು. 

ಮಾರ್ಚ್ 15, 1960ರಲ್ಲಿ ಮೈಸೂರಿನಲ್ಲಿ ಅವರು ಜನಿಸಿದರು. ಮೈಸೂರು ವಿವಿಯಿಂದ ಬಿಎಸ್ಸಿ ಪದವಿ ಪಡೆದರು. ಪ್ರಸಾದ್ ಅವರಿಗೆ ಚಿಕ್ಕಂದಿನಿಂದಲೇ ಸಂಗೀತದಲ್ಲಿ ಅಪಾರ ಒಲವಿತ್ತು. ಮೊದಲಿಗೆ ವೀಣೆ ತರಬೇತಿಯನ್ನು ಪಡೆದುಕೊಂಡರು. ಆ ನಂತರ ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಮ್ಯಾಂಡೋಲಿನ್ ವಾದನವನ್ನು ಕಲಿತರು. ಇದರೊಂದಿಗೆ ಗಿಟಾರ್, ಕೀಬೋರ್ಡ್, ಮ್ಯಾಂಡೋಲಾ & ಬ್ಯಾಂಜೋ ವಾದ್ಯಗಳನ್ನು ನುಡಿಸುವಲ್ಲಿಯೂ ಪಾಂಡಿತ್ಯ ಸಾಧಿಸಿದರು.

ಕನ್ನಡದ ದಿಗ್ಗಜ ಸಂಗೀತ ನಿರ್ದೇಶಕ ಸಿ.ಅಶ್ವಥ್ ಅವರೊಂದಿಗೆ 36 ವರ್ಷಗಳ ಕಾಲ ಸಂಗೀತ ಸಂಯೋಜಕ ಮತ್ತು ವಾದ್ಯಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ಮಲ್ಲಿಗೆ, ನಾಗಮಂಡಲ, ಚಿನ್ನಾರಿ ಮುತ್ತ, ಕೋಟಿ ಚೆನ್ನಯ್ಯ ಮತ್ತು ಶಿಶುನಾಳ ಶರೀಫ ಸಿನಿಮಾಗಳಿಗೆ ವಾದ್ಯ ಸಂಯೋಜನೆ ಮಾಡಿದ್ದಾರೆ. ಸಂಗೀತ ಕ್ಷೇತ್ರದ ಅಪಾರ ಸೇವೆಗೆ 2009ರಲ್ಲಿ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಲಭಿಸಿದೆ. 

ಇವರ ನಿಧನಕ್ಕೆ ಸಂಗೀತ ಕ್ಷೇತ್ರದ ಗಣ್ಯರು ಭಾರವಾದ ಮನಸ್ಸಿನಿಂದ ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು (ಭಾನುವಾರ) ಚಾಮರಾಜಪೇಟೆಯಲ್ಲಿ ಚಿತಾಗಾರದಲ್ಲಿ ನಡೆಯಲಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.