Sadguru Sri Madhusudana Sai: ನೈಜಿರಿಯಾದ ಕತ್ತಲಲ್ಲಿ ಕಾರಿನ ಬಾಗಿಲು ಬಡಿದ ಮಕ್ಕಳು ಇಂದು ವೈದ್ಯರು: ಸದ್ಗುರು ಶ್ರೀ ಮಧುಸೂದನ ಸಾಯಿ
ನೈಜಿರಿಯಾ, ಫಿಜಿ, ನೇಪಾಳ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ನಮ್ಮ ಮಿಷನ್ ಸಕ್ರಿಯವಾಗಿದೆ. ಈ ಮಕ್ಕಳು ಮುಂದೆ ಓದಿ ತಮ್ಮ ದೇಶಗಳಿಗೆ ಸಂಪನ್ಮೂಲಗಳಾಗಿ ಹೋಗುತ್ತಾರೆ. ಇದು ತಾಯಿ ಭಾರತಿಯು ತನ್ನ ಸೋದರ ದೇಶಗಳಿಗೆ ನೀಡುವ ಕೊಡುಗೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.
ಬೆಂಗಳೂರು: ನೈಜಿರಿಯಾದಲ್ಲಿ ನನ್ನ ಕಾರು ಹೋಗುತ್ತಿದ್ದಾಗ ಕತ್ತಲಿನಲ್ಲಿ ಇಬ್ಬರು ಮಕ್ಕಳು ನನ್ನ ಕಾರಿನ ಬಾಗಿಲು ತಟ್ಟಿದರು. ಅದು ಅಪಾಯಕಾರಿ ಸನ್ನಿವೇಶವಾಗಿದ್ದರೂ ನಾನು ಗಾಜು ಇಳಿಸಿ ಮಕ್ಕಳನ್ನು ನೋಡಿದೆ. ಅವರು ವೈದ್ಯರಾಗಬೇಕು ಎಂದು ಕೋರಿದರು. ಆ ಬಾಲಕ, ಬಾಲಕಿಯರು ಇಂದು ಮುದ್ದೇನಹಳ್ಳಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ ಎಂದು "ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್"(One World One Family Mission) ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ(Sri Madhusudana Sai) ವಿವರಿಸಿದರು.
ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ (ಆ 14) ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಗ್ರಾಮಿ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಂಗೀತ ಕಲಾವಿದ ರಿಕಿ ಕೇಜ್ ಅವರು ಕೇಳಿದ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು.

ನಮ್ಮ ಸೇವೆಗೆ ದೇಶ ಅಥವಾ ಭಾಷೆಯ ಗಡಿಗಳು ಇಲ್ಲ. ಪೌಷ್ಟಿಕ ಆಹಾರ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಇಡೀ ಮಾನವಕುಲದ ಮೂಲಭೂತ ಹಕ್ಕು. ಬಲಿಷ್ಠರು ಮಾತ್ರವೇ ಉಳಿಯಬೇಕು ಎನ್ನುವುದಲ್ಲ, ನಾವು ಸಮಾಜದ ಅತ್ಯಂತ ದುರ್ಬಲರೂ ಉಳಿಯುವ ಸಮಾಜ ರೂಪಿಸಬೇಕಾಗಿದೆ ಎಂದು ತಮ್ಮ ಆಶಯ ಹಂಚಿಕೊಂಡರು.
ನೈಜಿರಿಯಾ, ಫಿಜಿ, ನೇಪಾಳ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ನಮ್ಮ ಮಿಷನ್ ಸಕ್ರಿಯವಾಗಿದೆ. ಈ ಮಕ್ಕಳು ಮುಂದೆ ಓದಿ ತಮ್ಮ ದೇಶಗಳಿಗೆ ಸಂಪನ್ಮೂಲಗಳಾಗಿ ಹೋಗುತ್ತಾರೆ. ಇದು ತಾಯಿ ಭಾರತಿಯು ತನ್ನ ಸೋದರ ದೇಶಗಳಿಗೆ ನೀಡುವ ಕೊಡುಗೆ ಎಂದು ವಿವರಿಸಿದರು.

"ಒನ್ ವರ್ಲ್ಡ್ ಒನ್ ಫ್ಯಾಮಿಲಿ" ಎನ್ನುವುದು ನಮಗೆ ಹೊಸ ವಿಚಾರವಲ್ಲ. "ವಸುಧೈವ ಕುಟುಂಬಕಂ" ಎನ್ನುವ ನಮ್ಮ ಋಷಿಗಳ ಆಶಯವು ಅದೇ ಆಗಿದೆ. ಒಮ್ಮೆ ನಮ್ಮ ಮನಸ್ಸಿನಲ್ಲಿ ಈ ಭಾವನೆ ಬಂದುಬಿಟ್ಟರೆ ಜಗತ್ತಿನಲ್ಲಿ ಯಾರೂ ನಮಗೆ ಸಂಬಂಧಪಡದವರು ಎನ್ನಿಸುವುದಿಲ್ಲ. ಎಲ್ಲರ ಕಷ್ಟಗಳಿಗೂ ಸ್ಪಂದಿಸುವ ಮನೋಭಾವ ಬಂದುಬಿಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಪಾಲ್ಗೊಂಡ ನೂರಾರು ನಾಗರಿಕರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ "ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್" ನಿರ್ವಹಿಸುತ್ತಿರುವ ಸೇವಾ ಚಟುವಟಿಕೆಗಳ ಅಗಾಧತೆಯ ಪರಿಚಯ ಮಾಡಿಕೊಂಡರು. ಸಂಸ್ಥೆಯ ಕಾರ್ಯಚಟುವಟಿಕೆಗಳ ವಿಡಿಯೊ ಪ್ರದರ್ಶಿಸಲಾಯಿತು.
ಪ್ರಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ, "ಹಲವು ಇತಿಹಾಸಕಾರರು, ತತ್ತ್ವಶಾಸ್ತ್ರಜ್ಞರು ಭಾರತದ ಮಾರ್ಗವೇ ಜಾಗತಿಕ ಮಾದರಿ ಎಂದು ಹೇಳಿದ್ದಾರೆ. ಆಧುನಿಕ ಕಾಲದಲ್ಲಿ ಸಾಯಿ ಬಾಬಾ ಅವರು ಭಾರತದ ಮಾದರಿಯನ್ನು ದೊಡ್ಡಮಟ್ಟದಲ್ಲಿ ಜಗತ್ತಿಗೆ ಪರಿಚಯಿಸಿದರು. ಅವರ ಶಿಷ್ಯ ಸದ್ಗುರು ಶ್ರೀ ಮಧುಸೂದನ ಸಾಯಿ ಇದೇ ಸಂದೇಶವನ್ನು ಜಗತ್ತಿನ ಮೂಲೆಮೂಲೆಗೂ ಕೊಂಡೊಯ್ದಿದ್ದಾರೆ" ಎಂದು ಶ್ಲಾಘಿಸಿದರು.

ನನ್ನಂತೆ ಯಾರೂ ತಾಯಿಯನ್ನು ಕಳೆದುಕೊಳ್ಳಬಾರದು
ಕಾರ್ಯಕ್ರಮದಲ್ಲಿ ತನ್ನ ಬದುಕಿನ ಕಥನ ಹಂಚಿಕೊಂಡ 'ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಂ'ನ ನಲ್ಲಕದಿರೇನಹಳ್ಳಿ ಕ್ಯಾಂಪಸ್‌ನ ವಿದ್ಯಾರ್ಥಿನಿ, ನೇಪಾಳ ಮೂಲದ ಶ್ರೀಶಾ ಸಾಯಿಪ್ರಿಯಾ, ತನಗಿರುವ ವೈದ್ಯೆಯಾಗಬೇಕು ಎನ್ನುವ ಕನಸು ಹಂಚಿಕೊಂಡರು.
"ವೈದ್ಯಕೀಯ ಸೇವೆ ಸಿಗದ ಕಾರಣಕ್ಕೆ ನಾನು ನನ್ನ ಒಂದೂವರೆ ವರ್ಷ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡೆ. ನನ್ನ ತಂದೆ ನನ್ನನ್ನು ಅನಾಥಾಶ್ರಮಕ್ಕೆ ಸೇರಿಸಿ ಕೈತೊಳೆದುಕೊಂಡರು. ದೇವರದಯೆಯಿಂದ ನನಗೆ ಸತ್ಯ ಸಾಯಿ ಬಾಬಾ ಅವರ ಬಗ್ಗೆ ತಿಳಿಯಿತು. ಹುಡುಕಿ ಇಲ್ಲಿಗೆ ಬಂದೆ. ಇಲ್ಲಿ ಎಲ್ಲರೂ ನನ್ನನ್ನು ಆದರಿಸಿ, ಪೋಷಿಸಿದರು. ಈಗ ನಾನು ನೀಟ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಮುಂದೆ ನಾನು ಡಾಕ್ಟರ್ ಆಗಿ ನನ್ನ ಹಳ್ಳಿಗೆ ಹೋಗಿ ಸೇವೆ ಮಾಡುತ್ತೇನೆ. ನನ್ನಂತೆ ಯಾವುದೇ ಮಗು ತಮ್ಮ ತಾಯಿಯನ್ನು ಕಳೆದುಕೊಳ್ಳಬಾರದು" ಎಂದು ತನ್ನ ಆಶಯ ಹಂಚಿಕೊಂಡರು.

"ಈ ಶಾಲೆಯಲ್ಲಿ ನನಗೆ ಆಹಾರ, ವಸತಿ, ಶಿಕ್ಷಣ ಅಷ್ಟೇ ಅಲ್ಲ ಸಾಕಷ್ಟು ಪ್ರೀತಿ ಸಿಕ್ಕಿದೆ. ನಾನು ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ಬದುಕು ಮತ್ತು ಭವಿಷ್ಯ ಸಿಕ್ಕಿದೆ. ನನಗೆ ಒಂದು ದೊಡ್ಡ ಕುಟುಂಬ ಸಿಕ್ಕಿದೆ" ಎಂದು ಶ್ರೀಶಾ ನಿರರ್ಗಳ ಇಂಗ್ಲಿಷಿನಲ್ಲಿ ವಿವರಿಸಿದಾಗ ಸಭೆಯಲ್ಲಿದ್ದ ಎಲ್ಲರೂ ಹನಿಗಣ್ಣಾದರು. ವಿಶ್ವಸಂಸ್ಥೆಯ ಪ್ರತಿನಿಧಿಯೂ ಆಗಿರುವ ರಿಕಿ ಕೇಜ್ ಆಸನದಿಂದ ಮೇಲೆದ್ದು ನಿಂತು ಚಪ್ಪಾಳೆ ಹೊಡೆದರು.
"ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್"ನ ಚೀಫ್ ಆಪರೇಟಿಂಗ್ ಆಫೀಸರ್ ಎಸ್.ಎಸ್.ಭರತ್‌ಕುಮಾರ್ ಸಂಸ್ಥೆಯ ಕಾರ್ಯಚಟುವಟಿಕೆ ಮತ್ತು ಬೃಹತ್ ಆಶಯಗಳನ್ನು ವಿವರಿಸಿದರು. ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಸಾಯಿ ಪ್ರಸಾದ್ ನಿರೂಪಿಸಿದರು.

ನಲ್ಲಕದಿರೇನಹಳ್ಳಿ ಕ್ಯಾಂಪಸ್ ವಿದ್ಯಾ ರ್ಥಿನಿಯರಿಂದ "ಶಿಷ್ಯ ಅನುಶಾಸನಂ" ಉಪನಿಷತ್ ಭಾಗದ ಪಾರಾಯಣದೊಂದಿಗೆ ಸಂವಾದ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ "ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ" ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ಸ್ವರಮೇಳ (ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.

ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಅಶ್ವಥ್ ನಾರಾಯಣ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.