ಕ್ರಾಂತಿಕಾರಿಗಳಿಂದ ದೇಶಕ್ಕೆ ಸ್ವಾತಂತ್ರ್ಯ: ಶ್ರೀಕಾಂತ ಶೆಟ್ಟಿ ಕಾರ್ಕಳ

Puttur: ಬಪ್ಪಳಿಗೆ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶಂಕರ ಸಭಾಭವನದಲ್ಲಿ ಇಂದು ಆಯೋಜಿಸಲಾದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿದರು.

Aug 15, 2026 - 16:21
ಕ್ರಾಂತಿಕಾರಿಗಳಿಂದ ದೇಶಕ್ಕೆ ಸ್ವಾತಂತ್ರ್ಯ: ಶ್ರೀಕಾಂತ ಶೆಟ್ಟಿ ಕಾರ್ಕಳ

ಪುತ್ತೂರು: ನಮ್ಮ ದೇಶದ ಕ್ರಾಂತಿಕಾರಿಗಳ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು, ಅಹಿಂಸೆಯಿಂದಲೇ ಸ್ವಾತಂತ್ರ್ಯ ದೊರಕಿತು ಎಂಬ ಭಾವನೆಯನ್ನು ತುಂಬುವ ಪ್ರಯತ್ನಗಳಾಗಿವೆ. ಹಾಗಾಗಿ, ಈ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ, ಭಾರತ ಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಿದ ನಿಜ ಹೋರಾಟಗಾರರ ಬಗ್ಗೆ ನಮಗೆ ಏನೇನೂ ತಿಳಿದಿಲ್ಲ ಎಂದು ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.

ಬಪ್ಪಳಿಗೆ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶಂಕರ ಸಭಾಭವನದಲ್ಲಿ ಇಂದು (ಶನಿವಾರ) ಆಯೋಜಿಸಲಾದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಹಿಂಸೆಯಿಂದ ಶತ್ರುಗಳನ್ನು ಒದ್ದೋಡಿಸಬಹುದು ಎಂದಾದರೆ, ತ್ರೇತಾಯುಗದಲ್ಲಿ ಶ್ರೀರಾಮನು ರಾವಣನ ವಿರುದ್ಧ ಶಸ್ತ್ರ ಎತ್ತಬೇಕಿರಲಿಲ್ಲ. ಕಪಿ ಸೈನ್ಯಕ್ಕೆ ಚರಕಗಳನ್ನು ನೀಡಿ ರಾವಣನನ್ನು ಬಗ್ಗುಬಡಿಯಬಹುದಿತ್ತು. ಅದು ಅಸಾಧ್ಯವಾದ ಕಾರಣದಿಂದಲೇ ಶ್ರೀರಾಮ ಬಿಲ್ಲನ್ನೆತ್ತಿದ. ತಮ್ಮ ಭವಿಷ್ಯವನ್ನು ಲೆಕ್ಕಿಸದೆ ದೇಶಕ್ಕಾಗಿ ಸಮರ್ಪಿಸಿಕೊಂಡವರನ್ನು ನೆನೆಯುವ ಕಾರ್ಯಗಳಾಗಬೇಕಿದೆ. ಕ್ರಾಂತಿಕಾರಿಗಳಿಂದಾಗಿ ನಮಗೆ ಸ್ವಾತಂತ್ರ್ಯ ದಕ್ಕಿದೆ ಎಂದರು.
 
ದೇಶದ ಭವಿಷ್ಯವಾದ ಜೆನ್‌‍‌ಝೀ ಜಂತರ್ ಮಂತರ್‌ನಲ್ಲಿ ದೇಶದ್ರೋಹಿ ಘೋಷಣೆ ಕೂಗುವ ಮಟ್ಟಕ್ಕೆ ಬಂದಿರುವುದು ಆತಂಕಕಾರಿಯಾಗಿದೆ. ಆದರೆ, ಅವರಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ದೇಶಪ್ರೇಮಿಗಳು ಇದ್ದಾರೆ ಎಂಬುದು ಸಮಾಧಾನ‌ತರುವ ವಿಚಾರ ಎಂದು ತಿಳಿಸಿದರು.

ಜಗತ್ತಿನ‌ ಉಳಿದೆಲ್ಲಾ ದೇಶಗಳು ಕೇವಲ ನಕ್ಷೆಗಳಾದರೆ, ನಮ್ಮದು ಭಾವನೆಗಳನ್ನೊಳಗೊಂಡ ಭಾರತ ಮಾತೆಯಾಗಿ ಕಾಣಿಸುತ್ತದೆ. ನಮ್ಮ ಮಾತೆಯನ್ನು ಭಕ್ತಿಯಿಂದ ಆರಾದಧಿಸುವ 'ವಂದೇ ಮಾತರಂ ಗೀತೆ' ಕೆಂಪುಕೋಟೆಯಲ್ಲಿ ಮೊಳಗಲು ಸ್ವಾತಂತ್ರ್ಯ ಬಂದ ನಂತರವು 80 ವರ್ಷ ಕಾಯಬೇಕಾಯಿತು. ವಂದೇ ಮಾತರಂ ಮೊಳಗುವ ಹೊತ್ತಿಗೆ, ನಾವೆಲ್ಲ ಇರುವುದು ಪುಣ್ಯ ಎಂದು ಹೇಳಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಆ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಿಂಹಸದೃಶರಾಗಿ ತೊಡಗಿಸಿಕೊಂಡು ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಅದೇ ಮಾದರಿಯನ್ನು ನಮ್ಮ‌ ಮಕ್ಕಳಿಗೆ ನನಪಿಸಿಕೊಡುವ ಕಾರ್ಯ ಆಗಬೇಕು ಎಂದರು.

ಈ ವೇಳೆ 'ಜೀ' ಕನ್ನಡ ವಾಹಿನಿಯ ಲಿಟ್ಲ್ ಚಾಂಪಿಯನ್ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿ ಸನ್ಮಯ್ ಹಾಗೂ ಪೋಷಕರನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯೋತ್ಸವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಸದಸ್ಯ ಸುರೇಶ್ ಶೆಟ್ಟಿ ಕೆ, ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸ್ವಾತಿ ಜೆ ರೈ, ಅಂಬಿಕಾ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ - ಬೋಧಕೇತರ ವೃಂದದವರು, ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿ ಸನ್ಮಯ್ ಪ್ರಾರ್ಥಿಸಿದರು. ಶ್ರೇಯಾ ಎಂ.ಎಸ್ ಸ್ವಾಗತಿಸಿದರು. ಲಾವಣ್ಯ ಎಸ್.ಬಿ.ಅತಿಥಿ ಪರಿಚಯಿಸಿದರು. ತನುಷ್ ವಂದಿಸಿದರು. ಉಪನ್ಯಾಸಕಿ ಚೈತ್ರಾ ಹಾಗೂ ಜಯಂತಿ ಹೊನ್ನಮ್ಮ, ಶಿಕ್ಷಕಿ ವಿದ್ಯಾ ಸರಸ್ವತಿ ಮತ್ತು ಅನುಪಮ ಸ್ವಾತಂತ್ರ್ಯೋತ್ಸವ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿನಿಯರಾದ ಅಜ್ಞಾ ವಿ.ಕೆ ಹಾಗೂ ಸಿಂಚನಾ ಎ ನಿರೂಪಿಸಿದರು. ಶ್ರೀಧರ್ಯ ಸನ್ಮಾನಿತರನ್ನು ಪರಿಚಯ ಮಾಡಿಕೊಟ್ಟರು.

ಧ್ವಜಾರೋಹಣ & ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ನೆಲ್ಲಿಕಟ್ಟೆ ಮತ್ತು ಬಪ್ಪಳಿಗೆ ಕ್ಯಾಂಪಸ್‌ಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಆ ಬಳಿಕ ಎರಡು ಕ್ಯಾಂಪಸ್‌ಗಳಿಂದ ಕಿಲ್ಲೆ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಸಿ, ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ, ಮಂಗಲ್ ಪಾಂಡೆ ಚೌಕದಲ್ಲಿ ನಡೆದ ಸರ್ಕಾರಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.