ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬಿಜೆಪಿಯವರಿಗೆ ಅಭಿವೃದ್ಧಿಗಿಂತ ರಾಜಕೀಯವೇ ಹೆಚ್ಚು ಪ್ರತಿ ವಿಚಾರದಲ್ಲೂ ತಡೆಯಾಜ್ಞೆ, ಆಕ್ಷೇಪಣೆ ತರುತ್ತಿದ್ದಾರೆ ಕಬ್ಬನ್ ಪಾರ್ಕ್ ಕಾರ್ಯಕ್ರಮದಲ್ಲಿ ಎಲ್ಲಾ ಪಾಲಿಕೆ ನಾಗರಿಕರ ಅಹವಾಲು ಸ್ವೀಕರಿಸುತ್ತೇನೆ

Oct 25, 2025 - 14:03
ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರು,

“ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ. ಪ್ರತಿ ವಿಚಾರದಲ್ಲೂ ತಡೆಯಾಜ್ಞೆ, ಆಕ್ಷೇಪಣೆ ತರುತ್ತಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತರುವುದಕ್ಕೇ ಒಂದು ತಂಡವಿದೆ. ಬಿಜೆಪಿಯವರಿಗೆ ಅಭಿವೃದ್ಧಿಗಿಂತ ರಾಜಕೀಯವೇ ಹೆಚ್ಚು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.

ಯಶವಂತಪುರ ವಿಧಾನಸಭೆ ಕ್ಷೇತ್ರದ ಹೇರೋಹಳ್ಳಿಯ ಭರತ್ ನಗರ ಗಾಂಧಿ ಉದ್ಯಾನವನದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ನಾಗರಿಕರ ಜತೆ ಸಂವಾದ ಸಂದರ್ಭದಲ್ಲಿ ಮಾತನಾಡಿದರು.

“ನೀವು ಕಸದ ವಿಚಾರ ಪ್ರಸ್ತಾಪಿಸಿದ್ದೀರಿ. ಇದು ಮೂಲಭೂತ ಸಮಸ್ಯೆಯಾಗಿದ್ದು, ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೂ ನಾನು ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಲು ಮನವಿ ಮಾಡುತ್ತಿದ್ದೇವೆ. ನನ್ನ ಕೈಲಾದಷ್ಟು ನಿಮಗೆ ಸಹಾಯ ಮಾಡುತ್ತೇನೆ. ಇಡೀ ವಿಶ್ವ ಈ ಬೆಂಗಳೂರನ್ನು ನೋಡುತ್ತಿದೆ. ಕೆಂಪೇಗೌಡರು ಕಟ್ಟಿರುವ ಬೆಂಗಳೂರಿಗೆ ಹೊಸ ರೂಪ ನೀಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು. 

“ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ, ರಸ್ತೆ ಗಾತ್ರ ಮಾತ್ರ ಅಷ್ಟೇ ಇದೆ. ಹೀಗಾಗಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಇದನ್ನು ಬಗೆಹರಿಸಲು 117 ಕಿ.ಮೀ ಉದ್ಧದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ ಅಧಿಸೂಚನೆ ಹೊರಡಿಸಿರುವ ಜಮೀನುಗಳನ್ನು ನಾನು ಯಾವುದೇ ಕಾರಣಕ್ಕೂ ಡಿನೋಟಿಫಿಕೇಷನ್ ಮಾಡುವುದಿಲ್ಲ. ಭೂಸಂತ್ರಸ್ತರಿಗೆ ಅಗತ್ಯ ಪರಿಹಾರ ನೀಡುತ್ತೇವೆ. ಇದರ ಜೊತೆಗೆ ಟನಲ್ ರಸ್ತೆಗೆ ಮುಂದಾಗಿದ್ದು, ಅದಕ್ಕೂ ಸಾಕಷ್ಟು ಅಡಚಣೆ ಮಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ, ನಾನು ನನ್ನ ಕರ್ತವ್ಯ ಮಾಡುತ್ತೇನೆ” ಎಂದು ತಿಳಿಸಿದರು.

ಕಬ್ಬನ್ ಪಾರ್ಕ್ ಕಾರ್ಯಕ್ರಮದಲ್ಲಿ ಎಲ್ಲಾ ಪಾಲಿಕೆ ನಾಗರಿಕರ ಅಹವಾಲು ಸ್ವೀಕರಿಸುತ್ತೇನೆ

“ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ನನಗೆ ಅರ್ಜಿ ನೀಡಲು ಯಾರಿಗೆ ಸಾಧ್ಯವಾಗಿಲ್ಲವೋ, ಅವರೆಲ್ಲರೂ ಭಾನುವಾರ (ನಾಳೆ) ಕಬ್ಬನ್ ಪಾರ್ಕ್ ನಡೆಯಲಿರುವ ಕಾರ್ಯಕ್ರಮಕ್ಕೆ ಬಂದು ಅರ್ಜಿ ನೀಡಬಹುದು. ಬೆಳಗ್ಗೆ 7ರಿಂದ 10 ಗಂಟೆವರೆಗೂ ನಾನು ಅರ್ಜಿ ಸ್ವೀಕರಿಸುತ್ತೇನೆ. ಬೆಂಗಳೂರಿನ ಐದೂ ಪಾಲಿಕೆ ವ್ಯಾಪ್ತಿಯ ಜನರು ಬಂದು ಭೇಟಿ ಮಾಡಬಹುದು. ಮುಂದಿನ ದಿನಗಳಲ್ಲಿ ನಿರಂತರವಾಗಿ ಈ ರೀತಿಯ ಜನಸಂಪರ್ಕ ಸಭೆಗಳನ್ನು ಮಾಡಲು ವ್ಯವಸ್ಥೆ ರೂಪಿಸಲಾಗುವುದು” ಎಂದು ತಿಳಿಸಿದರು.

“ಇನ್ನು ಸಾರ್ವಜನಿಕರು ತಮ್ಮ ಅಹವಾಲುಗಳನ್ನು 1533ಗೆ ಕರೆ ಮಾಡಿಯೂ ದಾಖಲಿಸಬಹುದು. ಸಾರ್ವಜನಿಕರ ಅಹವಾಲು ಬಗೆಹರಿಸಲು ಅಧಿಕಾರಿಗಳ ತಂಡ ನಿಯೋಜಿಲಾಗಿದೆ. ಎಲ್ಲರ ಸಮಸ್ಯೆ ಬಗೆಹರಿಸಲು ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಕಾನೂನು ಚೌಕಟ್ಟಿನಲ್ಲಿ ಸಾಧ್ಯವಾದಷ್ಟು ಪರಿಹಾರ ನೀಡಲಾಗುವುದು” ಎಂದರು.

“ಬೆಂಗಳೂರು ದೊಡ್ಡ ಗಾತ್ರದಲ್ಲಿ ಬೆಳೆದಿದೆ. ಜನಸಂಖ್ಯೆ 1.40 ಕೋಟಿಗೆ ಏರಿಕೆಯಾಗಿದೆ. 70 ಲಕ್ಷ ಜನ ನಿತ್ಯ ಬಂದು ಹೋಗುತ್ತಾರೆ. 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಿರಲಿಲ್ಲ, ನಾನು ಬಂದ ನಂತರ ತೊರೆಕಾಡನಹಳ್ಳಿಯಿಂದ ಕಾವೇರಿ ನೀರನ್ನು ತಂದು ನಿಮಗೆ ನೀರು ಒದಗಿಸಿದ್ದೇವೆ. ಆದರೂ ಅನೇಕರು ಇದರ ಸಂಪರ್ಕ ಪಡೆದಿಲ್ಲ. ಈ ಅವಕಾಶ ಕಳೆದುಕೊಳ್ಳಬೇಡಿ. ನೀರು ಬೇರೆಡೆಗೆ ಹೋಗುತ್ತಿದೆ. ಈ ಭಾಗದ ಜನರು ಸಂಪರ್ಕ ತೆಗೆದುಕೊಳ್ಳಿ. ಸಂಪರ್ಕ ಪಡೆಯಲು ವಿವಿಧ ಕಂತುಗಳಲ್ಲಿ ಹಣ ಪಾವತಿಗೂ ಅವಕಾಶ ಕಲ್ಪಿಸಿದ್ದೇವೆ” ಎಂದು ತಿಳಿಸಿದರು.

ಎ ಖಾತಾ ಪರಿವರ್ತನೆ ಅವಕಾಶ ಬಳಸಿಕೊಳ್ಳಿ

“ಇನ್ನು ಬೆಂಗಳೂರಿನ ಆಸ್ತಿಗಳನ್ನು 'ಬಿ' ಖಾತೆಯಿಂದ 'ಎ' ಖಾತೆಗೆ ಪರಿವರ್ತನೆ ಮಾಡಲಾಗುತ್ತಿದೆ. ನೀವು ಕಂದಾಯ ಭೂಮಿ ತೆಗೆದುಕೊಂಡಿದ್ದು, ದಾಖಲೆಗಳು ಸರಿ ಇಲ್ಲವಾದರೆ ಯಾರಿಗೂ ಸಾಲ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ಇದೊಂದು ಐತಿಹಾಸಿಕ ನಿರ್ಧಾರ. ನೀವು ನಿಮ್ಮ ಆಸ್ತಿಯ ಗೈಡೆನ್ಸ್ ವ್ಯಾಲ್ಯೂ ಮೇಲಿನ 5%ರಷ್ಟು ಹಣವನ್ನು ಪಾವತಿ ಮಾಡಿ. ಎ ಖಾತಾ ಪಡೆದರೆ ನಿಮ್ಮ ಆಸ್ತಿ ಮೌಲ್ಯ ದ್ವಿಗುಣವಾಗುತ್ತದೆ. ಇನ್ನು ನಿಮ್ಮ ಆಸ್ತಿ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿಸುತ್ತಿದ್ದು, ಭವಿಷ್ಯದಲ್ಲಿ ಯಾರೂ ನಿಮ್ಮ ಆಸ್ತಿ ದಾಖಲೆಗಳನ್ನು ಅಕ್ರಮವಾಗಿ ತಿದ್ದುವುದಕ್ಕೆ ಆಸ್ಪದವಿಲ್ಲ” ಎಂದು ತಿಳಿಸಿದರು.

“ಇಲ್ಲಿ ಬಂದಿರುವ ಅನೇಕರು, ಕಸ ಸಮಸ್ಯೆ, ರಸ್ತೆ, ಪಾರ್ಕ್, ಜಿಮ್, ಶೌಚಾಲಯ, ಪೊಲೀಸ್ ವಿಚಾರ, ಎಲ್ ಇಡಿ ದೀಪ, ಬಸ್ ನಿಲ್ದಾಣ, ರಸ್ತೆ ಅಗಲೀಕರಣ, ಮೆಟ್ರೋ, ಕೆರೆ, ಕಲುಷಿತ ನೀರು, ಪಾರ್ಕ್ ಒತ್ತುವರಿ, ನೀರಿನ ಸಂಪರ್ಕ, ಬಿಡಿಎ ಪ್ಲಾಟ್ ಹಸ್ತಾಂತರ. ಬಿಡಿಎ ಅಧಿಸೂಚನೆ, ಸಿಸಿ ಕ್ಯಾಮೆರಾ, ಸ್ಟೇಡಿಯಂ, ಚಿತಾಗಾರ, ಬೀದಿ ವ್ಯಾಪಾರಿಗಳಿಂದ ರಸ್ತೆ ಒತ್ತುವರಿ, ಕ್ಲಬ್, ಕೌಶಲ್ಯಾಭಿವೃದ್ಧಿ ಕೇಂದ್ರ, ಆಸ್ಪತ್ರೆ ಸೇರಿದಂತೆ ಅನೇಕ ವಿಚಾರವಾಗಿ ಪ್ರಸ್ತಾಪ ಮಾಡಿದ್ದೀರಿ. ರಸ್ತೆ ಅಗಲೀಕರಣ ಮಾಡಬೇಕಾದರೆ, ಅದರದೇ ಆದ ಕಾನೂನಿದೆ. ಇದರ ಬಗ್ಗೆ ಗಮನಹರಿಸುತ್ತೇವೆ. ನಿಮ್ಮ ಈ ಎಲ್ಲಾ ವಿಚಾರಗಳ ಬಗ್ಗೆಯೂ ನಾವು ಗಮನಹರಿಸುತ್ತೇವೆ. ನಿಮಗೆ ಉತ್ತಮ ಆಡಳಿತ ನೀಡಿ ನಿಮ್ಮ ಸಮಸ್ಯೆ ಬಗೆಹರಿಸಬೇಕು ಎಂಬ ಉದ್ದೇಶದಿಂದಲೇ ನಾವು ಜಿಬಿಎ ರಚಿಸಿದ್ದೇವೆ” ಎಂದು ತಿಳಿಸಿದ್ದಾರೆ. 

“ಜಿಬಿಎ ವ್ಯಾಪ್ತಿಗೆ ಕೆಲವು ಪ್ರದೇಶಗಳನ್ನು ಸೇರಿಸಬೇಕಾಗಿದ್ದು. ತಕ್ಷಣವೇ ಸೇರಿಸುವುದಿಲ್ಲ. ಈಗ ಚುನಾವಣೆ ಮಾಡುತ್ತೇವೆ. ಅದಾದ ನಂತರ ಯಾವ ಪ್ರದೇಶಗಳನ್ನು ಸೇರಿಸಿಕೊಳ್ಳಬೇಕು ಎಂದು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಆನಂತರ ಕಾನೂನಾತ್ಮಕವಾಗಿ ಸೇರಿಸಿಕೊಳ್ಳಲಾಗುವುದು. ಇಲ್ಲಿ ಬಂದಿರುವ ಅನೇಕರು ಶಾಸಕ ಎಸ್.ಟಿ ಸೋಮಶೇಖರ್ ಅವರ ಕಾರ್ಯವನ್ನು ಮೆಚ್ಚಿದ್ದೀರಿ. ನೀವು ಉತ್ತಮ ಶಾಸಕರನ್ನು ಪಡೆದಿದ್ದೀರಿ. ಅವರು ನನ್ನ ಬಳಿ ಬಂದು ನಿಮ್ಮ ಕ್ಷೇತ್ರಕ್ಕೆ ಅನುದಾನ ಪಡೆದಿದ್ದಾರೆ” ಎಂದು ಹೇಳಿದರು. 

“ನೀವುಗಳು ನಮ್ಮ ಮನೆಗೆ ಬಂದು ನನ್ನನ್ನು ಭೇಟಿ ಮಾಡಲು ಕಷ್ಟವಾಗುತ್ತದೆ. ನನ್ನ ಮನೆಗೆ ಪಕ್ಷದ ಕಾರ್ಯಕರ್ತರು, ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಅನೇಕರು ರಾಜ್ಯದ ಇತರೆ ಭಾಗದ ಜನರು, ಶಾಸಕರು ಬರುತ್ತಿರುತ್ತಾರೆ. ಹೀಗಾಗಿ ನಾನೇ ನಿಮ್ಮ ಬಳಿಗೆ ಬಂದಿದ್ದೇನೆ. ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಮ್ಮ ಸಮಸ್ಯೆ ಬಗೆಹರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಇಲ್ಲಿ ಉಪಸ್ಥಿತರಿದ್ದಾರೆ” ಎಂದು ತಿಳಿಸಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.